(ಓಕೆ) ನಿರಂತರ 7 ಗಂಟೆ ವಿದ್ಯುತ್‌ಗೆ ಒತ್ತಾಯಿಸಿ 10 ತಾಸು ರಸ್ತೆ ತಡೆ
KannadaprabhaNewsNetwork | Published : Oct 11 2023, 12:46 AM IST
(ಓಕೆ) ನಿರಂತರ 7 ಗಂಟೆ ವಿದ್ಯುತ್‌ಗೆ ಒತ್ತಾಯಿಸಿ 10 ತಾಸು ರಸ್ತೆ ತಡೆ
ಸಾರಾಂಶ
ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತ ಖಂಡಿಸಿ, ಪ್ರತಿ ದಿನ ನಿರಂತರವಾಗಿ 7 ಗಂಟೆ ತ್ರಿಫೇಸ್ ವಿದ್ಯುತ್ ನೀಡಲು ಒತ್ತಾಯಿಸಿ ಮಂಗಳವಾರ ಬೆಳಗ್ಗೆ 6 ಗಂಟೆಗೆಯಿಂದಲೇ ರೈತರು ತಾಲೂಕಿನ ಸಂಪೂರ್ಣ ವಿದ್ಯುತ್ ಪೊರೈಕೆ ಸ್ಥಗಿತಗೊಳಿಸಿ ಮುಂಡರಗಿ ಗ್ರಿಡ್ ಬಳಿ ಗದಗ-ಮುಂಡರಗಿ ಮುಖ್ಯ ಹೆದ್ದಾರಿ ರಸ್ತೆ ಬಂದ್ ದಿಢೀರ್ ಪ್ರತಿಭಟನೆ ನಡೆಸಿದರು.
ಮುಂಡರಗಿ: ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತ ಖಂಡಿಸಿ, ಪ್ರತಿ ದಿನ ನಿರಂತರವಾಗಿ 7 ಗಂಟೆ ತ್ರಿಫೇಸ್ ವಿದ್ಯುತ್ ನೀಡಲು ಒತ್ತಾಯಿಸಿ ಮಂಗಳವಾರ ಬೆಳಗ್ಗೆ 6 ಗಂಟೆಗೆಯಿಂದಲೇ ರೈತರು ಸುಮಾರು 10 ತಾಸುಗಳ ಕಾಲ ತಾಲೂಕಿನ ಸಂಪೂರ್ಣ ವಿದ್ಯುತ್ ಪೊರೈಕೆ ಸ್ಥಗಿತಗೊಳಿಸಿ ಗದಗ-ಮುಂಡರಗಿ ಮುಖ್ಯ ಹೆದ್ದಾರಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡ ಶಿವಾನಂದ ಇಟಗಿ, ರಾಜ್ಯ ಕಬ್ಬುಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ಮಾತನಾಡಿ, ನಾವು ನಿರಂತರವಾಗಿ 7 ಗಂಟೆಗಳ ಕಾಲ ರೈತರ ಪಂಪ್ ಸೆಟ್‌ಗಳಿಗೆ ತ್ರಿಫೇಸ್ ವಿದ್ಯುತ್ ನೀಡುವಂತೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಇಲಾಖೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಬ್ಬರು ಆಗಮಿಸಿ ಸೋಮವಾರದಿಂದ ನಿರಂತರ 7 ಗಂಟೆ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡುವುದಾಗಿ ಭರವಸೆ ನೀಡಿದ್ದರು. ಅದು ಜಾರಿಯಾಗದ ಹಿನ್ನೆಲೆಯಲ್ಲಿ, ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. ಹೆಸ್ಕಾಂ ಮಧ್ಯರಾತ್ರಿ 2 ಗಂಟೆಗೆ, 3 ಗಂಟೆಗೆ ವಿದ್ಯುತ್ ಕೊಡುತ್ತದೆ. ರೈತರು ಅಷ್ಟೊತ್ತಿನಲ್ಲಿ ಎದ್ದು ಹೋಗುವುದು ದುಸ್ತರವಾಗುತ್ತದೆ. ಆದರೂ ನಾವು ಎದ್ದು ಜಮೀನುಗಳಿಗೆ ಹೋಗುವಷ್ಟರಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗುವುದು. ಇದರಿಂದಾಗಿ ಗ್ರಾಮೀಣ ರೈತರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಆದ್ದರಿಂದ ಹಿರಿಯ ಅಧಿಕಾರಿ ಇಲ್ಲಿಗೆ ಬಂದು ರೈತರಿಗೆ ತಲಾ 7 ಗಂಟೆ ವಿದ್ಯುತ್ ಪೂರೈಕೆ ಮಾಡುವವರೆಗೂ ಈ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದರು. ನಂತರ ಮಧ್ಯಾಹ್ನ 2.30ರ ವೇಳೆಗೆ ಗದಗ ಹೆಸ್ಕಾಂ ಸುಪರಿಡೆಂಟ್ ಎಂಜಿನಿಯರ್ ಶರಣಮ್ಮ ಜಂಗಿನಮಠ ಆಗಮಿಸಿ ಪ್ರತಿಭಟನಾನಿರತ ರೈತರೊಂದಿಗೆ ಮಾತನಾಡಿ, ನಮಗೆ ರೈತರಿಗೆ ತೊಂದರೆ ಕೊಡುವ ಯಾವುದೇ ಉದ್ದೇಶವಿಲ್ಲ. ರಾಯಚೂರಿನಲ್ಲಿರುವ ಥರ್ಮಲ್ ಪಾವರ್ ಸ್ಟೇಶನ್‌ನಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿರುವುದರಿಂದ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗದೇ ಇರುವುದರಿಂದ ನಾವು ಕೇಳಿದಷ್ಟು ವಿದ್ಯುತ್ ಸರಬರಾಜ ಮಾಡುತ್ತಿಲ್ಲ. ಹೀಗಾಗಿ ನಾವು ಇದ್ದುದರಲ್ಲಿಯೇ 7 ಗಂಟೆಯ ಬದಲು ಕಡಿತಗೊಳಿಸಿ, 2 ಗಂಟೆ, 3 ಗಂಟೆ ಹೀಗೆ ಕೊಡುತ್ತಿದ್ದೇವೆ. ಕೆಲವು ಕಡೆಗಳಲ್ಲಿ ಕೊಡುವುದಕ್ಕೆ ಕಷ್ಟವಾಗಿ ಕೊಟ್ಟಿಲ್ಲ. ಇಂದಿನಿಂದ ನಾವು ಪಟ್ಟಣ, ತಾಲೂಕು ಪ್ರದೇಶಗಳಲ್ಲಿಯೂ ಸಹ ಲೋಡ್ ಶೆಡ್ಡಿಂಗ್ ಮಾಡಲು ನಿರ್ಧರಿಸಿದ್ದೇವೆ. ಇಂದು ನಮಗೆ ವಿದ್ಯುತ್ ಜನರೇಟ್ ಆಗಿದ್ದು, ಇಂದು (ಮಂಗಳವಾರ) 7 ತಾಸು ನೀಡುತ್ತಿದ್ದು, ಗುರುವಾರದಿಂದ ಸಂಪೂರ್ಣವಾಗಿ 7 ತಾಸು ತ್ರಿಫೇಸ್ ಕೊಡುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪದ ರೈತರು ನಮಗೆ ಕಳೆದ ಶನಿವಾರ ನಿಮ್ಮ ಅಧಿಕಾರಿ ಹೀಗೆ ಹೇಳಿಹೋದರು. ವಿದ್ಯುತ್ ಸಮರ್ಪಕವಾಗಿ ಬಂದಿಲ್ಲ, ಆದ್ದರಿಂದ ನಮಗಿಂದು ನೀವು ಲಿಖಿತವಾಗಿ ಬರೆದು ಕೊಡುವವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ರೈತ ವೀರನಗೌಡ ಪಾಟೀಲ ಮಾತನಾಡಿ, ಕಳೆದ 4-5 ದಿನಗಳಿಂದ ವಿದ್ಯುತ್ ಕಡಿತವಾಗಿ ರೈತರ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿವೆ. ಅದಕ್ಕೆ ನೀವು ಹೆಚ್ಚುವರಿಯಾಗಿ ವಿದ್ಯುತ್ ಕೊಡುತ್ತೀರಾ ಅಥವಾ ಪರಿಹಾರ ಕೊಡುತ್ತೀರಾ ? ಎಂದು ಪ್ರಶ್ನಿಸಿದರು. ನಂತರ ಸ್ಥಳಕ್ಕೆ ತಹಸೀಲ್ದಾರ್ ಧನಂಜಯ ಮಾಲಗತ್ತಿ ಭೇಟಿ ನೀಡಿ, ರೈತರು, ಹೆಸ್ಕಾಂ ಅಧಿಕಾರಿಗಳು ಎಲ್ಲರೂ ಪರಸ್ಪರ ಚರ್ಚಿಸಿ ರೈತರ ಪಂಪ್‌ಸೆಟ್‌ಗಳಿಗೆ ನಿರಂತರ 7 ತಾಸು ವಿದ್ಯುತ್ ಪೂರೈಕೆ ಮಾಡುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈಬಿಡಲಾಯಿತು. ಈ ಸಂದರ್ಭದಲ್ಲಿ ಹೆಸ್ಕಾಂ ಎಇಇ ರಾಜೇಶ ಕಲ್ಯಾಣಶೆಟ್ಟಿ, ಕುರಿಯವರ, ಎಇ ಚನ್ನಪ್ಪ ಲಮಾಣಿ ಸಹ ಉಪಸ್ಥಿತರಿದ್ದರು. ಪಿಎಸ್‌ಐ ಸುಮಾ ಗೋರಬಾಳ ತಮ್ಮ ಸಿಬ್ಬಂದಿಯೊಂದಿಗೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಡಿ.ಡಿ. ಮೋರನಾಳ, ರೈತರಾದ ಚಂದ್ರಕಾಂತ ಉಳ್ಳಾಗಡ್ಡಿ, ಶರಣಪ್ಪ ಚನ್ನಳ್ಳಿ, ಮಂಜುನಾಥಗೌಡ ಪಾಟೀಲ, ವೀರಣ್ಣ ಕವಲೂರು, ರವಿಕುಮಾರ ಕೊಳಲ, ಅಶ್ವಿನಿ ಗೌಡರ, ಪ್ರಕಾಶ ಸಜ್ಜನರ, ಬಾಪೂಜಿ ಮದ್ಯಪಾಟಿ, ಪರಸರಡ್ಡಿ ಗೊಡಚಿಹಳ್ಳಿ, ಮುದಿಯಪ್ಪ ಕುಂಬಾರ, ಶಂಕರಗೌಡ ಜಾಯನಗೌಡ, ಬಸವರಾಜ ಕೊತ್ತಂಬ್ರಿ, ಕನಕಪ್ಪ ಕುರಿ, ಪ್ರವೀಣ ಹಂಚಿನಾಳ, ಕಿಟ್ಟಪ್ಪ ಮೋರನಾಳ, ದೇವಪ್ಪ ಚಿಕ್ಕಣ್ಣವರ, ಮಂಜುನಾಥ ಹಂಚಿನಾಳ, ಶಿವಪ್ಪ ಸೊಬರದ, ಫಕ್ರುಸಾಬ ಕವಲೂರು, ಎಚ್.ಬಿ. ಕುರಿ, ವಿರುಪಾಕ್ಷಪ್ಪ ಬಾರಕೇರ, ವಿಜಯ ಡಂಬಳ, ವಿಶ್ವನಾಥ ತಾಮ್ರಗುಂಡಿ, ಬಸಪ್ಪ ವಡ್ಡರ ಪಾಲ್ಗೊಂಡಿದ್ದರು. ದಿಢೀರ್ ರಸ್ತೆ ತಡೆಯಿಂದ ಬಸ್ ಪ್ರಯಾಣವೂ ಸೇರಿದಂತೆ ಎಲ್ಲ ವಾಹನಗಳ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು, ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಕೆಲವು ಬಸ್‌ಗಳು ರಸ್ತೆ ಬದಲಾಯಿಸಿ ಓಡಾಡಿದವಾದರೂ ತೊಂದರೆಯಾಗಿದ್ದು ಕಂಡು ಬಂದಿತು. ಮುಂಡರಗಿ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಬೆಳಗ್ಗೆ 6 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ನಾಗರಿಕರು ಕೂಡಾ ಪರಿತಪಿಸುವಂತಾಗಿದ್ದು ಕಂಡು ಬಂದಿತು.