ಅನುದಾನ ಕೊರತೆಯಿಂದಾಗಿ ರಸ್ತೆಗಳ ಅಭಿವೃದ್ಧಿ ಆಗುತ್ತಿಲ್ಲ

| Published : Jan 09 2025, 12:48 AM IST

ಸಾರಾಂಶ

ಅನುದಾನದ ಕೊರತೆಯಿಂದ ರಸ್ತೆಗಳ ಅಭಿವದ್ದಿಯನ್ನು ಒಂದೇ ಬಾರಿ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ ಉಂಟಾಗಿದ್ದು, ಸಿಕ್ಕ ಅನುದಾನದಲ್ಲಿ ಆದ್ಯತೆ ಮೇರೆಗೆ ಕಾಮಗಾರಿ ಮಾಡಲಾಗುವುದು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು, ಗುಣಮಟ್ಟದ ಕಾಮಗಾರಿಯಿಂದ ಮಾತ್ರ ಸಾರ್ವಜನಿಕರ ಸಮಸ್ಯೆಗೆ ಮುಕ್ತಿ ಸಾಧ್ಯ ಎಂದು ನುಡಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನ ಇನ್ನು ಹಲವು ಗ್ರಾಮದಲ್ಲಿ ಇನ್ನೂ ಅನೇಕ ರಸ್ತೆಗಳು ಅಭಿವೃದ್ಧಿ ಆಗಬೇಕಿದ್ದು, ಅನುದಾನದ ಕೊರತೆಯಿಂದ ರಸ್ತೆಗಳ ಅಭಿವದ್ದಿಯನ್ನು ಒಂದೇ ಬಾರಿ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ತಾಲೂಕಿನ ಬೆಳಗೋಡು ಹೋಬಳಿ ಈಶ್ವರಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ ಉಂಟಾಗಿದ್ದು, ಸಿಕ್ಕ ಅನುದಾನದಲ್ಲಿ ಆದ್ಯತೆ ಮೇರೆಗೆ ಕಾಮಗಾರಿ ಮಾಡಲಾಗುವುದು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು, ಗುಣಮಟ್ಟದ ಕಾಮಗಾರಿಯಿಂದ ಮಾತ್ರ ಸಾರ್ವಜನಿಕರ ಸಮಸ್ಯೆಗೆ ಮುಕ್ತಿ ಸಾಧ್ಯ ಎಂದು ನುಡಿದರು. ಸುಸ್ಥಿರ ಸರ್ಕಾರ ಇದ್ದರೂ ಅಭಿವೃದ್ಧಿಗೆ ಒತ್ತು ನೀಡುತ್ತಿಲ್ಲ, ಅಭಿವೃದ್ಧಿ ವಿಚಾರದಲ್ಲಿ ಪಕ್ಷಪಾತವಾಗುತ್ತಿದ್ದು, ಇದರಿಂದ ರಾಜ್ಯದ ಜನತೆಗೆ ಹೆಚ್ಚು ಸಮಸ್ಯೆ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ರಾಜಕೀಯ ಮಾಡದೆ, ಎಲ್ಲಾ ಕ್ಷೇತ್ರಗಳಿಗೂ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು. ರಾಷ್ಟ್ರೀಯ ಹೆದ್ದಾರಿ ೭೫ರ ಈಶ್ವರಹಳ್ಳಿ ಕೂಡಿಗೆಯಿಂದ ಬೆಳಗೋಡುವರೆಗೂ ಸುಮಾರು ೬ ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ರಸ್ತೆ ನಿರ್ಮಾಣ ಮಾಡಲಾಗುವುದು. ಬೆಳಗೋಡು ಕೆರೆಗೆ ತಡೆಗೋಡೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.

ಇದೇ ವೇಳೆ ಶಾಲೆಗೆ ಕಾಂಪೌಂಡ್‌ ಇಲ್ಲದೆ ದನ ಕರುಗಳು ಶಾಲೆ ಆವರಣಕ್ಕೆ ಬರುತ್ತಿರುವ ಕುರಿತು ವಿದ್ಯಾರ್ಥಿಗಳು ಶಾಸಕರ ಗಮನಕ್ಕೆ ತಂದರು. ತಕ್ಷಣವೆ ಸ್ಥಳೀಯ ಗ್ರಾಮ ಪಂಚಾಯಿತಿಯ ಅಭಿವೃದ್ಧಿಯ ಅಧಿಕಾರಿಯನ್ನು ಕರೆಸಿ ನರೇಗಾ ಯೋಜನೆ ಅಡಿ ಕಾಂಪೌಂಡ್ ನಿರ್ಮಿಸುವಂತೆ ಸೂಚನೆ ನೀಡಿದರು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಧರಣೇಶ, ಗ್ರಾಮ ಪಂಚಾಯತಿ ಸದಸ್ಯರಾದ ರುದ್ರ ಕುಮಾರ್(ವಾಸು), ಮಂಜುಳಾಮ್ಮ, ಪ್ರಕಾಶ್ ಶೆಟ್ಟಿ, ಪುನೀತ್, ನೇತ್ರಾವತಿ ಮಂಜುನಾಥ, ಬಿಜೆಪಿ ಮುಖಂಡರಾದ ಜಯಪ್ರಕಾಶ್, ಮೆಣಸಮಕ್ಕಿ ಶಿವಕುಮಾರ್, ಪ್ರದೀಪ್ ನಿಡನೂರು, ಗ್ರಾಮದ ಮುಖಂಡರಾದ ನಂದೀಶ, ಬಸವರಾಜ, ಮಶ್ ಗೌಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.