ಗೋಕರ್ಣದಲ್ಲಿ ರಸ್ತೆಗಳು ಜಲಾವೃತ

| Published : Jul 05 2024, 12:47 AM IST

ಸಾರಾಂಶ

ವಾರದ ಸಂತೆ ನಡೆಯುವ ಸ್ಥಳವಾದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ಕೆಸರುಗದ್ದೆಯಾಗಿ ಮಾರ್ಪಟ್ಟು, ವ್ಯಾಪಾರಸ್ಥರು ಕಾಯಿಪಲ್ಲೆ ರಕ್ಷಿಸಿಕೊಳ್ಳಲು ಪರದಾಡುತ್ತಿದ್ದ ದೃಶ್ಯ ಕಂಡುಬಂತು.

ಗೋಕರ್ಣ: ಬುಧವಾರ ರಾತ್ರಿಯಿಂದ ಸುರಿದ ಮಳೆ ಗುರುವಾರವೂ ಆರ್ಭಟ ಮುಂದುವರಿಸಿದ ಪರಿಣಾಮ ಪ್ರವಾಸಿ ತಾಣದ ಬಹುತೇಕ ಎಲ್ಲ ರಸ್ತೆಗಳು ಜಲಾವೃತಗೊಂಡಿದ್ದು ವಾಹನ ಸಂಚಾರಕ್ಕೆ, ಜನರ ಓಡಾಟಕ್ಕೆ ತೊಂದರೆಯಾಗಿತ್ತು.

ವಾರದ ಸಂತೆ ನಡೆಯುವ ಸ್ಥಳವಾದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ಕೆಸರುಗದ್ದೆಯಾಗಿ ಮಾರ್ಪಟ್ಟು, ವ್ಯಾಪಾರಸ್ಥರು ಕಾಯಿಪಲ್ಲೆ ರಕ್ಷಿಸಿಕೊಳ್ಳಲು ಪರದಾಡುತ್ತಿದ್ದ ದೃಶ್ಯ ಕಂಡುಬಂತು.

ಇಲ್ಲಿನ ಮಹಾಗಣಪತಿ ಮಂದಿರದ ಮುಂಭಾಗದಿಂದ ರಥಬೀದಿ, ಗಂಜೀಗದ್ದೆ, ಬಂಡಿಘಟ್ಟ, ಭದ್ರಕಾಳಿ ಕಾಲೇಜಿನ ಹತ್ತಿರ, ಚೌಡಗೇರಿ ಕ್ರಾಸ್, ಹೆಸ್ಕಾಂ ಗ್ರೀಡ್ ಬಳಿ ಚರಂಡಿಯಲ್ಲಿ ಮಣ್ಣು ಕಲ್ಲುಗಳ ರಾಶಿ ತುಂಬಿ ರಸ್ತೆ ನದಿಯಾಗಿ ಮಾರ್ಪಟ್ಟಿದ್ದು, ಪ್ರವಾಸಿಗರು, ಸ್ಥಳೀಯರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸಿದರು.

ಅಘನಾಶಿನಿ ನದಿ ಸಮುದ್ರ ಸೇರುವ ತದಡಿ ಭಾಗದಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು. ಆದರೆ ಯಾವುದೇ ವಸತಿ ಪ್ರದೇಶಕ್ಕೆ ತೊಂದರೆಯಾಗಿಲ್ಲ. ನೀರು ಸರಾಗವಾಗಿ ಹೋಗಲು ಅನುವು ಮಾಡಿಕೊಡುವಲ್ಲಿ ಉಂಟಾದ ಜಾಗದ ವಿವಾದದಿಂದ ಮೂಡಂಗಿ ಕೆಲವು ಕಡೆ ನೀರು ತುಂಬಿತ್ತು. ಆದರೆ ನಿವಾಸಿಗಳಿಗೆ ಸಮಸ್ಯೆ ಉಂಟಾಗಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ನದಿ ಪಾತ್ರದ ಪ್ರದೇಶವಾದ ಗಂಗಾವಳಿ ಭಾಗದಲ್ಲಿ ನದಿಯ ನೀರಿನ ಪ್ರಮಾಣ ಹೆಚ್ಚಾಗಿದ್ದು, ಆದರೆ ವಸತಿ ಪ್ರದೇಶಕ್ಕೆ ಯಾವುದೇ ಹಾನಿ ಉಂಟಾಗಿಲ್ಲ.

ಕಡಲತೀರದಲ್ಲಿ ಹೆಚ್ಚಿದ ಅಬ್ಬರ: ಇಲ್ಲಿನ ಎಲ್ಲ ಕಡಲತೀರದಲ್ಲಿ ಸಮುದ್ರದ ಅಲೆಗಳ ಆರ್ಭಟ ಹೆಚ್ಚಾಗಿದ್ದು, ತೀರದ ಪ್ರದೇಶದಲ್ಲಿ ನೀರು ಆವರಿಸಿದೆ. ಪ್ರವಾಸಿಗರು ಸಾಧಾರಣ ಸಂಖ್ಯೆಯಲ್ಲಿದ್ದು, ಸಮುದ್ರ ವೀಕ್ಷಣೆ ಮಾಡುತ್ತಿದ್ದು, ನೀರಿಗಿಳಿಯದಂತೆ ಜೀವರಕ್ಷಕ ಸಿಬ್ಬಂದಿ ಎಚ್ಚರಿಸಿ ವಾಪಸ್‌ ಕಳುಹಿಸುವ ಕಾರ್ಯ ಮಾಡುತ್ತಿದ್ದಾರೆ.ಮರ ಬಿದ್ದು ಹಾನಿ: ಮಹಾಬಲೇಶ್ವರ ಮಂದಿರದ ಆವಾರದಲ್ಲಿರುವ ಆದಿಗೋಕರ್ಣ ಮಂದಿರದ ಮೇಲೆ ಪಕ್ಕದ ಖಾಸಗಿ ಜಾಗದಲ್ಲಿರುವ ತೆಂಗಿನ ಮರ ಬಿದ್ದು ಚಾವಣಿಗೆ ಹಾನಿಯಾಗಿದೆ. ಇದರ ಜತೆ ಗಡಿಗೋಡೆಯು ಕುಸಿದು ಬಿದ್ದಿದೆ. ಇದೇ ಮಂದಿರದ ಮೇಲೆ ಇನ್ನು ಹಲವು ತೆಂಗಿನ ಮರ ಬೀಳುವ ಹಂತ ತಲುಪಿದ್ದು, ಈಗಲೇ ಎಚ್ಚೆತ್ತು ತೆರವುಗೊಳಿಸಿದರೆ ಮುಂದಾಗುವ ಅವಘಡ ತಪ್ಪಿಸಬಹುದಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ

ಹೊನ್ನಾವರ: ತಾಲೂಕಿನ ವರ್ನಕೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 69ರ ಪಕ್ಕದ ಗುಡ್ಡ ಕುಸಿತವಾಗಿ ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ.ಕಳೆದ ವಾರ ಅಣತಿ ದೂರದಲ್ಲಿರುವ ಭಾಸ್ಕೇರಿಯಲ್ಲಿ ಗುಡ್ಡ ಕುಸಿತ ಉಂಟಾಗಿ, ದೊಡ್ಡ ಬಂಡೆ ಉರುಳಿ ಬಿದ್ದಿತ್ತು. ಗುರುವಾರ ಗುಡ್ಡದ ಜತೆಗೆ ಮರವು ಕೂಡ ಬಿದ್ದಿರುವುದು ವಾಹನ ಸಂಚಾರ ಸ್ಥಗಿತಗೊಳಿಸುವಂತಾಗಿತ್ತು. ರಸ್ತೆಗೆ ಅಡ್ಡ ಬಿದ್ದಿರುವ ಮರ ತೆರವುಗೊಳಿಸಿದ ತಕ್ಷಣ ರಸ್ತೆ ಸಂಚಾರ ಪ್ರಾರಂಭಿಸಲು ಅನುಕೂಲವಾಯಿತು. 5 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ದುರಸ್ತಿ ಕಾರ್ಯ ‌ನಡೆಸಲಾಗಿದೆ.