ರಸ್ತೆ ಅವ್ಯವಸ್ಥೆಯಿಂದಾಗಿ ಆಂಬ್ಯುಲೆನ್ಸ್ ಗ್ರಾಮಕ್ಕೆ ತಲುಪಲು ಸಾಧ್ಯವಾಗದೆ ಮಧ್ಯದಲ್ಲೇ ನಿಲ್ಲಬೇಕಾದ ಪರಿಣಾಮ, ತೀವ್ರ ಅಸ್ವಸ್ಥಗೊಂಡಿದ್ದ 85 ವರ್ಷದ ವೃದ್ಧೆಯನ್ನು ಆಟೋ ರಿಕ್ಷಾ ಮೂಲಕ ಆಂಬ್ಯುಲೆನ್ಸ್‌ವರೆಗೆ ಸಾಗಿಸಿದ ಘಟನೆ ಪಾವೂರು ಗ್ರಾಮದಲ್ಲಿ ನಡೆದಿದೆ.

ಉಳ್ಳಾಲ: ರಸ್ತೆ ಅವ್ಯವಸ್ಥೆಯಿಂದಾಗಿ ಆಂಬ್ಯುಲೆನ್ಸ್ ಗ್ರಾಮಕ್ಕೆ ತಲುಪಲು ಸಾಧ್ಯವಾಗದೆ ಮಧ್ಯದಲ್ಲೇ ನಿಲ್ಲಬೇಕಾದ ಪರಿಣಾಮ, ತೀವ್ರ ಅಸ್ವಸ್ಥಗೊಂಡಿದ್ದ 85 ವರ್ಷದ ವೃದ್ಧೆಯನ್ನು ಆಟೋ ರಿಕ್ಷಾ ಮೂಲಕ ಆಂಬ್ಯುಲೆನ್ಸ್‌ವರೆಗೆ ಸಾಗಿಸಿದ ಘಟನೆ ಪಾವೂರು ಗ್ರಾಮದಲ್ಲಿ ನಡೆದಿದೆ.

ಪಾವೂರು ಗ್ರಾಮದ ಇನೋಳಿ ಕಲ್ಲಾಜೆ ನಿವಾಸಿ ಯಮುನಾ (85) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್‌ಗೆ ಕರೆ ನೀಡಲಾಗಿತ್ತು. ಆದರೆ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಆಂಬ್ಯುಲೆನ್ಸ್ ಮನೆ ಸಮೀಪಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಪರಿಣಾಮ ಸ್ಥಳೀಯರು ಆಟೋ ರಿಕ್ಷಾ ವ್ಯವಸ್ಥೆ ಮಾಡಿ, ಹರಸಾಹಸಪಟ್ಟು ವೃದ್ಧೆಯನ್ನು ಆಂಬ್ಯುಲೆನ್ಸ್ ನಿಂತಿದ್ದ ಸ್ಥಳದವರೆಗೆ ಕೊಂಡೊಯ್ದು ಬಳಿಕ ಆಸ್ಪತ್ರೆಗೆ ರವಾನಿಸಿದರು.

ಸ್ಥಳೀಯರ ಪ್ರಕಾರ ಈ ರಸ್ತೆಗೆ ಕೆಲ ಸಮಯದ ಹಿಂದೆ ಮಣ್ಣು ಹಾಕಲಾಗಿದ್ದು, ಅದನ್ನು ಸಮರ್ಪಕವಾಗಿ ಸಮತಟ್ಟುಗೊಳಿಸದ ಕಾರಣ ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿದೆ. ಇದರಿಂದ ವಾಹನ ಸಂಚಾರ ಮಾತ್ರವಲ್ಲದೆ ಪಾದಚಾರಿಗಳಿಗೂ ಓಡಾಡುವುದು ಕಷ್ಟಕರವಾಗಿದೆ.

ಈ ಕುರಿತು ಕಳೆದ ತಿಂಗಳೇ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಸ್ಥಳೀಯರು ದೂರು ಸಲ್ಲಿಸಿದ್ದರು. ಬಳಿಕ ರಸ್ತೆಯ ಮೇಲಿದ್ದ ಮಣ್ಣಿನ ಒಂದು ಭಾಗವನ್ನು ತೆರವುಗೊಳಿಸಿದರೂ, ರಸ್ತೆಯನ್ನು ವಾಹನ ಸಂಚಾರಕ್ಕೆ ಯೋಗ್ಯವಾಗುವಂತೆ ದುರಸ್ತಿಪಡಿಸದ ಹಿನ್ನೆಲೆಯಲ್ಲಿ ಇದೀಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.