ಕೆಲವು ವರ್ಷಗಳ ಹಿಂದಷ್ಟೇ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ರಸ್ತೆ ಇದೀಗ ಸಂಪೂರ್ಣ ಹದಗೆಟ್ಟಿದೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳದಿರುವುದೇ ಈ ಸ್ಥಿತಿಗೆ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.

ಕಾರವಾರ: ಕಾರವಾರ- ಇಳಕಲ್- ಕೈಗಾ ರಾಜ್ಯ ರಸ್ತೆಯ ಹಳೆಕೋಟದಿಂದ ಕಡವಾಡ ಕ್ರಾಸ್‌ವರೆಗೆ ರಸ್ತೆಯ ಒಂದು ಬದಿ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ರಸ್ತೆ ದುರಸ್ತಿ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.ಕರವೇ ಜಿಲ್ಲಾ ಹಾಗೂ ತಾಲೂಕು ಘಟಕದ ಮಾರ್ಗದರ್ಶನದಲ್ಲಿ ಕಾರವಾರ ನಗರ ಘಟಕದ ಅಧ್ಯಕ್ಷ ರಾಜಾ ನಾಯ್ಕ ಅವರು ಸೋಮವಾರ ಜಿಲ್ಲಾಧಿಕಾರಿಗೆ ವಾಟ್ಸ್‌ಆ್ಯಪ್ ಹಾಗೂ ಇ- ಮೇಲ್ ಮೂಲಕ ಮನವಿ ಸಲ್ಲಿಸಿದ್ದಾರೆ.ಕೆಲವು ವರ್ಷಗಳ ಹಿಂದಷ್ಟೇ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ರಸ್ತೆ ಇದೀಗ ಸಂಪೂರ್ಣ ಹದಗೆಟ್ಟಿದೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳದಿರುವುದೇ ಈ ಸ್ಥಿತಿಗೆ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ. ಮುಖ್ಯ ರಸ್ತೆಯ ಒಂದು ಭಾಗಕ್ಕೆ ಮಾತ್ರ ಡಾಂಬರೀಕರಣ ಕಾಮಗಾರಿ ನಡೆಸಲಾಗಿದ್ದು, ಮತ್ತೊಂದು ಭಾಗವನ್ನು ನಿರ್ಲಕ್ಷಿಸಲಾಗಿದೆ ಎಂದು ದೂರಿದ್ದಾರೆ.

ಹಳೆಕೋಟದಿಂದ ಕಡವಾಡ ಕ್ರಾಸ್‌ವರೆಗೆ ರಸ್ತೆಯ ಒಂದು ಬದಿ ಸಂಪೂರ್ಣ ಹಾಳಾಗಿರುವುದರಿಂದ ಈ ಮಾರ್ಗದಲ್ಲಿ ಸಂಚಾರ ನಡೆಸುವುದು ವಾಹನ ಸವಾರರಿಗೆ ತೀವ್ರ ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.

ರಸ್ತೆಯಲ್ಲಿ ಉಂಟಾಗಿರುವ ದೊಡ್ಡ ಹೊಂಡಗಳಿಂದಾಗಿ ರಾತ್ರಿ ವೇಳೆ ವಾಹನ ಸವಾರರು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಹಗಲಿನಲ್ಲಿಯೂ ಹೊಂಡಗಳನ್ನು ತಪ್ಪಿಸಲು ವಾಹನಗಳು ಎದುರಿನ ಪಥಕ್ಕೆ ತೆರಳುವುದರಿಂದ ಎದುರಿನಿಂದ ಬರುವ ವಾಹನಗಳಿಗೆ ಡಿಕ್ಕಿ ಹೊಡೆಯುವ ಅಥವಾ ಸ್ಕಿಡ್ ಆಗಿ ಬೀಳುವ ಘಟನೆಗಳು ಸಂಭವಿಸುತ್ತಿವೆ. ಇದರಿಂದ ಸಣ್ಣಪುಟ್ಟ ಅಪಘಾತಗಳು ನಿರಂತರವಾಗಿ ನಡೆಯುತ್ತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಕಾರವಾರ- ಇಳಕಲ್ ರಾಜ್ಯ ರಸ್ತೆಯ ಈ ಭಾಗ ದಿನೇ ದಿನೇ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅಪಾಯಕಾರಿಯಾಗುತ್ತಿದೆ. ಈ ಮಾರ್ಗದಲ್ಲಿ ಬಸ್, ಬೈಕ್, ಆಟೋ ಹಾಗೂ ಶಾಲಾ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸಂಚರಿಸುತ್ತಿರುವುದರಿಂದ ರಸ್ತೆ ದುರಸ್ತಿ ಮತ್ತಷ್ಟು ತುರ್ತು ಅಗತ್ಯವಾಗಿದೆ ಎಂದು ರಾಜಾ ನಾಯ್ಕ ತಿಳಿಸಿದ್ದಾರೆ.ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಹಳೆಕೋಟದಿಂದ ಕಡವಾಡ ಕ್ರಾಸ್‌ವರೆಗೆ ಹದಗೆಟ್ಟಿರುವ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.