ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದ ಪುರಸಭೆ ವ್ಯಾಪ್ತಿಯ ಮಹಾತ್ಮಾ ಗಾಂಧಿ ಹೌಸಿಂಗ್ ಕಾಲೋನಿಯ ಮುಖ್ಯ ರಸ್ತೆ ಹಾಗೂ ಹೊಸ ಬಡಾವಣೆಗಳ ಬೀದಿ ರಸ್ತೆಗಳು ನಿರಂತರ ಮಳೆಯಿಂದ ಹದಗೆಟ್ಟಿದ್ದು, ಸಂಪೂರ್ಣ ಕೆಸರು ಗದ್ದೆಯಂತಾಗಿದೆ.ಮಹಾತ್ಮಾ ಗಾಂಧಿ ಹೌಸಿಂಗ್ ಕಾಲೋನಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಅಮಟೂರ ರಸ್ತೆಯ ಚರ್ಚ್ ಹತ್ತಿರದ ಬಡಾವಣೆಯ ಕೆಸರಿನ ರಸ್ತೆಯಲ್ಲಿ ಕಾರು, ದ್ವಿಚಕ್ರ ವಾಹನ, ಪಾದಚಾರಿಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಕೆಸರಿನ ರಸ್ತೆಯಿಂದಾಗಿ ಅಲ್ಲಿನ ನಿವಾಸಿಗಳು ಮನೆ ಬಿಟ್ಟು ಹೊರಬರದಂತ ಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರು, ಪಾದಚಾರಿಗಳು, ಶಾಲಾ ಮಕ್ಕಳು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಹಿರಿಯರು, ಅನಾರೋಗ್ಯಕ್ಕೆ ಒಳಗಾದವರು ಈ ರಸ್ತೆಯಲ್ಲಿ ಸಾಗುವುದು ದುಸ್ಥರವಾಗಿದೆ.
ಬರೀ ರಸ್ತೆ ಅಲ್ಲದೆ ಗಟಾರುಗಳು ತುಂಬಿ ಹರಿದು ಮುಖ್ಯ ರಸ್ತೆಗಳ ಮೇಲೆ ತ್ಯಾಜ್ಯ ತೇಲಿ ಬಂದು ದುರ್ವಾಸನೆ ಹರಡುತ್ತಿದೆ. ಎಲ್ಲೆಂದರಲ್ಲಿ ಬೆಳೆದು ನಿಂತಿರುವ ಗಿಡಗಂಟೆಗಳ ತೆರವು ಕಾರ್ಯ ಹಾಗೆ ನಿಂತಿದೆ. ಸರಿಯಾದ ಬೀದಿ ದೀಪಗಳ ವ್ಯವಸ್ಥೆ ಇಲ್ಲದೇ ರಾತ್ರಿ ಹೊತ್ತು ನಿವಾಸಿಗಳಿಗೆ ತೊಂದರೆ ಆಗಿದೆ. ಕುಡಿಯುವ ನೀರಿನ ವ್ಯವಸ್ಥೆ ಕೂಟ ಅಷ್ಟಕ್ಕಷ್ಟೆ ಎನ್ನುವಂತಾಗಿದೆ. ಪುರಸಭೆ ಕೆಲ ಸಿಬ್ಬಂದಿ ಕೂಡ ಇದೇ ಬಡಾವಣೆಗಳಲ್ಲಿ ವಾಸವಾಗಿದ್ದಾರೆ. ಅವರಿಗೆ ಯಾರಿಗೂ ಸುರಕ್ಷತೆ ಮಾಯವಾಗಿದೆ ಎಂದು ನಿವಾಸಿಗಳು ಆಕ್ರೋಶ ಹೊರ ಹಾಕಿದರು.ಮಳೆಯಿಂದ ಹಾಳಾದ ರಸ್ತೆಯನ್ನು ಸರಿಪಡಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ, ಅಭಿಯಂತರರಿಗೆ, ವಾರ್ಡ್ ಸದಸ್ಯರಿಗೆ ಸಾಕಷ್ಟು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಟಾಚಾರಕ್ಕೆ ಎಂಬಂತೆ ಹಾಳಾದ ರಸ್ತೆಗೆ ಭೇಟಿ ನೀಡಿ ದುರಸ್ತಿಗೊಳಿಸುವುದಾಗಿ ತಿಳಿಸಿ ವರ್ಷ ಕಳೆದರೂ ಇನ್ನೂ ದುರಸ್ಥಿಗೊಳಿಸಿಲ್ಲ. ಇನ್ನಾದರೂ ಸ್ಥಳಕ್ಕೆ ಭೇಟಿ ನೀಡಿ ಕೆಸರಿನಿಂದ ಕುಡಿರುವ ರಸ್ತೆಯನ್ನು ಕೂಡಲೇ ಡಾಂಬರೀಕರಣಗೊಳಿಸಬೇಕು. ತುಂಬಿ ಹರಿಯುತ್ತಿರುವ ಗಟಾರಗಳನ್ನು ಶುಚಿಗೊಳಿಸಬೇಕು. ಎದೆ ಎತ್ತರಕ್ಕೆ ಬೆಳೆದು ನಿಂತಿರುವ ಗಿಡಿಗಂಟಿಗಳನ್ನು ತೆರುವುಗೊಳಿಸಬೇಕು. ರಾತ್ರಿ ಹೊತ್ತು ಸರಿಯಾಗಿ ಬೀದಿ ದೀಪಗಳು ಬೆಳಗುವಂತೆ ಮಾಡಿಕೊಡಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. ಇಲ್ಲವಾದರೆ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ನಿವಾಸಿಗಳಾದ ಮುರುಗೆಪ್ಪ ಗುಂಡ್ಲೂರ, ಮಾಜಿ ಸೈನಿಕ ಗಂಗಪ್ಪ ಗುಗ್ಗರಿ, ಬಸವರಾಜ ಹರ್ಲಾಪೂರ, ಮುರಗಯ್ಯ ಮಠದ, ಉಳವಪ್ಪ ದೇಗಾಂವಿ, ಮುಶಪ್ಪ ಉಪ್ಪಾರ, ನವೀನ ತುರಮರಿ ಎಚ್ಚರಿಸಿದ್ದಾರೆ.