ಮುಗಿಯದ ರಸ್ತೆ ಮತ್ತು ನಿರಂತರ ಕುಡಿಯುವ ನೀರಿನ ಕಾಮಗಾರಿಗಳಿಂದಾಗಿ ಇಡೀ ದಾಂಡೇಲಿಯ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಹಳೇದಾಂಡೇಲಿಯ ನಾಗರಿಕರು ಧೂಳಿನಿಂದ ಪರದಾಡುವಂತಾಗಿದೆ.

ಧೂಳಿನ ಭಾಗ್ಯದಿಂದ ದಾಂಡೇಲಿಯ ಜನತೆಗೆ ನರಕ ಸೃಷ್ಟಿ

ಗುರುಶಾಂತ ಜಡೆಹಿರೇಮಠ

ಕನ್ನಡಪ್ರಭ ವಾರ್ತೆ ದಾಂಡೇಲಿ

ಮುಗಿಯದ ರಸ್ತೆ ಮತ್ತು ನಿರಂತರ ಕುಡಿಯುವ ನೀರಿನ ಕಾಮಗಾರಿಗಳಿಂದಾಗಿ ಇಡೀ ದಾಂಡೇಲಿಯ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಹಳೇದಾಂಡೇಲಿಯ ನಾಗರಿಕರು ಧೂಳಿನಿಂದ ಪರದಾಡುವಂತಾಗಿದೆ.

ಕಳೆದ ಕೆಲವು ವರ್ಷಗಳಿಂದ ನಗರದಲ್ಲಿ ಒಳಚರಂಡಿ ಕಾಮಗಾರಿ ಮತ್ತು ಕುಡಿಯುವ ನೀರಿನ ಯೋಜನೆಗಳ ಕಾಮಗಾರಿ ನಡೆಯುತ್ತಿವೆ. ರಸ್ತೆಗಳನ್ನು ಮತ್ತು ರಸ್ತೆಯ ಇಕ್ಕೆಲ ಅಗೆದಿದ್ದು, ಸಮಸ್ಯೆಯುಂಟಾದ ಕಾರಣ ಬೇಸತ್ತ ಜನರು ಹಲವಾರು ಪ್ರತಿಭಟನೆ, ರಸ್ತೆ ತಡೆ ಮಾಡಿ ಸಾಕಷ್ಟು ಮಾಡಿದ್ದರೂ ರಸ್ತೆ ಮಾತ್ರ ಆಗಿಲ್ಲ. ಒಳಚರಂಡಿ ಕಾಮಗಾರಿಯು ಒಂದು ಹಂತದಲ್ಲಿ ಮುಗಿದಿದೆ, ಆದರೆ ಅದರ ಬೆನ್ನಲ್ಲೇ ನಿರಂತರ ಕುಡಿಯುವ ನೀರಿನ ಯೋಜನೆ ಮುಂದುವರಿದಿದೆ. ಈ ಮಧ್ಯ ಹಳೇ ದಾಂಡೇಲಿಯಿಂದ ಬೇರೆ ಊರುಗಳಿಗೆ ಪೈಪ್‌ಗಳ ಮೂಲಕ ನೀರು ಹರಿಸುತ್ತಿರುವ ಕಾಮಗಾರಿ ನಡೆಯುತ್ತಿವೆ. ಕುಡಿಯುವ ನೀರಿನ ಯೋಜನೆಯ ಅನುಷ್ಠಾನಗೊಳಿಸುವುದಕ್ಕಾಗಿ ನಗರದ ಎಲ್ಲ ಭಾಗಗಳಲ್ಲಿ ರಸ್ತೆಯ ಇಕ್ಕಲೆಗಳಲ್ಲಿ ಅಗೆದು ಪೈಪ್‌ಲೈನ್ ಕಾಮಗಾರಿ ಮಾಡಿ ಪೈಪ್ ಅಳವಡಿಸಲಾಗಿದೆ. ರಸ್ತೆ ಅಗೆದು ಪೈಪ್ ಜೋಡಣೆ ಮಾಡಲಾಗಿದೆ. ಪೈಪ್ ಅಳವಡಿಸುವಾಗ ರಸ್ತೆ ಅಗೆದು ಪೈಪ್ ಲೈನ್ ಹಾಕಿ ಮುಚ್ಚಿದ ಮಣ್ಣು ಹಾಗೆಯೇ ಧೂಳಾವರಿಸಿಕೊಂಡು ಜನರಿಗೆ ಅತಿ ತೊಂದರೆಯಾಗಿದೆ.

ನಗರದ ಬಹುಪಾಲು ಕಾಮಗಾರಿ ಮುಗಿದಿದೆ. ಆದರೆ ಹಳೇ ದಾಂಡೇಲಿಯಿಂದ ಪಟೇಲ ನಗರಕ್ಕೆ ಹೋಗುವ ರಸ್ತೆ ಅತ್ಯಂತ ಕೆಟ್ಟದಾಗಿದ್ದು, ಮಣ್ಣು ಧೂಳು ಒಂದುಕಡೆಯಾದರೆ, ಹೊಂಡ ತಗ್ಗುಗಳಿಂದ ಸಂಚಾರ ಅತಿ ಕಷ್ಟವಾಗುತ್ತಿದೆ. ಈ ರಸ್ತೆಯನ್ನು ಸರಿಪಡಿಸುವಂತೆ ಮತ್ತು ಇಲ್ಲಿ ಡಾಂಬರೀಕರಣ ಮಾಡುವುದಕ್ಕಿಂತ ಸಿಮೆಂಟ್‌ ಕಾಂಕ್ರೀಟ್ ಮಾಡುವಂತೆ ಸಾರ್ವಜನಿಕರ ಒತ್ತಾಯ ಕೂಡ ನಡೆದಿತ್ತು. ಆದರೆ ರಸ್ತೆ ಕಾಮಗಾರಿ ಇನ್ನು ಆರಂಭವಾಗಿಲ್ಲ.

ಹಳೇ ದಾಂಡೇಲಿಯ ಹಲವು ಗಲ್ಲಿಗಳಲ್ಲಿಯೂ ಈ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಅಗೆದಿರುವುದರಿಂದ ಸಹಜವಾಗಿ ಎಲ್ಲೆಡೆ ಧೂಳು ಆವರಿಸಿಕೊಳ್ಳುತ್ತದೆ. ದ್ವಿಚಕ್ರ ಮತ್ತು ಇತರ ವಾಹನಗಳು ಸಂಚರಿಸುವಾಗ ಈ ಧೂಳು ವ್ಯಾಪಕವಾಗಿ ಹರಡಿ ಗಲ್ಲಿ ಗಲ್ಲಿಗಳಲ್ಲಿ ಮನೆಗಳಲ್ಲಿ ತುಂಬಿಕೊಳ್ಳುತ್ತದೆ.ಪ್ರಮುಖವಾಗಿ ಹಳೇ ದಾಂಡೇಲಿಯ ಗಣಪತಿ ದೇವಸ್ಥಾನದಿಂದ ಮುಂದುವರಿದು ಕೆಎಸ್‌ಆರ್‌ಟಿಸಿ ಬಸ್ ಡಿಪೋ ದಾಟಿ ಪಟೇಲ್ ನಗರಕ್ಕೆ ಹೋಗುವ ವರೆಗೂ ಈ ಧೂಳಿನ ಸಮಸ್ಯೆ ಇದೆ. ಇಲ್ಲಿಯ ಬಸ್ ನಿಲ್ದಾಣದ ಬಳಿ ಚರಂಡಿ ನಿರ್ಮಾಣ ಕಾಮಗಾರಿಯೊಂದು ನಡೆಯುತ್ತಿದ್ದು, ಆಳಗಲ ರಸ್ತೆ ಅಗೆದು ಹೋದ ಗುತ್ತಿಗೆದಾರ ಮತ್ತೆ ಮರಳಿ ಬಂದಿಲ್ಲ.

ಕಳೆದೊಂದು ವರ್ಷದಿಂದ ಹಳೇ ದಾಂಡೇಲಿ ಭಾಗದಲ್ಲಿ ಧೂಳೆಬ್ಬಿಸುವ ರಸ್ತೆಯಿಂದ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸುವಂತೆ ಹಲವಾರು ಬಾರಿ ನಾವು ನಗರಾಡಳಿತಕ್ಕೆ ಮನವಿ ನೀಡಿದ್ದೇವೆ. ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಕೆಲ ದಿನಗಳ ಹಿಂದೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೌರಾಯುಕ್ತರು ಸಿಮೆಂಟ್ ಕಾಂಕ್ರೀಟ್ ರಸ್ತೆಯ ಹಾಗೂ ಶೀಘ್ರ ಕುಡಿಯುವ ನೀರಿನ ಕಾಮಗಾರಿ ಮುಗಿಸುವ ಭರವಸೆಯನ್ನೂ ಕೂಡ ನೀಡಿದ್ದಾರೆ. ಆದರೆ ಈ ಭಾಗದ ಸಾರ್ವಜನಿಕರು ದಿನನಿತ್ಯ ಸಮಸ್ಯೆ ಎದುರಿಸುವಂತಾಗಿದೆ ಎನ್ನುತ್ತಾರೆ ನಗರಸಭೆ ಮಾಜಿ ಸದಸ್ಯ ಸತೀಶ ನಾಯ್ಕ.