ವಾಹನದಟ್ಟಣೆಗೆ ಅನುಗುಣವಾಗಿ ವಿಸ್ತರಣೆಯಾಗದ ರಸ್ತೆಗಳು

| Published : Feb 04 2024, 01:30 AM IST

ಸಾರಾಂಶ

ಜನ ಹಾಗೂ ವಾಹನ ಸಂಚಾರದ ಬೆಳವಣಿಗೆಗೆ ಅನುಗುಣವಾಗಿ ನಗರದ ಕೆಲ ರಸ್ತೆಗಳು ವಿಸ್ತರಣೆ ಆಗದಿರುವುದು ಮತ್ತು ನಗರ ವ್ಯಾಪ್ತಿಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಜನತೆಗೆ ಅಷ್ಟೇ ಅಲ್ಲ ವಾಹನ ಸವಾರರು ಸಹ ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಜನ ಹಾಗೂ ವಾಹನ ಸಂಚಾರದ ಬೆಳವಣಿಗೆಗೆ ಅನುಗುಣವಾಗಿ ನಗರದ ಕೆಲ ರಸ್ತೆಗಳು ವಿಸ್ತರಣೆ ಆಗದಿರುವುದು ಮತ್ತು ನಗರ ವ್ಯಾಪ್ತಿಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಜನತೆಗೆ ಅಷ್ಟೇ ಅಲ್ಲ ವಾಹನ ಸವಾರರು ಸಹ ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ನಗರದ ಪ್ರಮುಖ ವೃತ್ತವಾಗಿರುವ ಪಿಪಿ ಸರ್ಕಲ್, ಇದೇ ವೃತ್ತದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ೨೦೬ ಟಿ ಹೆಚ್ ರಸ್ತೆ,ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ರೈಲು ನಿಲ್ದಾಣದ ರಸ್ತೆ ಹಾಗೂ ಪೇಟೆ ಬೀದಿ, ದಿನದ ಬಹುತೇಕ ಸಮಯ ಜನಜಂಗುಳಿ ಹಾಗೂ ವಾಹನಗಳ ಸಂಚಾರದಿಂದಲೇ ಕೂಡಿರುತ್ತದೆ ಹಾಗಾಗಿ ಈ ರಸ್ತೆಗಳಲ್ಲಿ ವೃದ್ಧರು ಮಹಿಳೆಯರು ಹಾಗೂ ಮಕ್ಕಳು ಓಡಾಡಲು ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದರು ಕ್ರಮ ಕೈಗೊಳ್ಳಬೇಕಾದ ಚುನಾಯಿತ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಅಥವಾ ಪೊಲೀಸರು ಸಹ ಕಂಡು ಕಾಣದಂತೆ ದಿನದೊಡುತ್ತಿರುವುದು ಸಹಜವಾಗಿಯೇ ನಗರದ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನು ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳಂತೂ ಸಾರ್ವಜನಿಕರಿಗೆ ಇರಲಿ ತಮ್ಮ ಪ್ರಯಾಣಿಕರು ಹಾಗೂ ಸಿಬ್ಬಂದಿ ವಾಹನ ನಿಲುಗಡೆಗೂ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಕೊಳ್ಳದೆ ಇರುವುದು ವಿಪರ್ಯಾಸದ ಸಂಗತಿ. ಇದ್ದ ಸ್ವಲ್ಪ ಜಾಗವನ್ನು ಸಹ ಸಮರ್ಪಕವಾಗಿ ನಿರ್ವಹಣೆ ಮಾಡದೆ ಬಂದ್ ಮಾಡಿಕೊಂಡಿರುವುದರಿಂದ ಬಸ್ ಪ್ರಯಾಣಿಕರು ಹಾಗೂ ಸಿಬ್ಬಂದಿ ತಮ್ಮ ವಾಹನಗಳನ್ನು ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಪಿಪಿ ವೃತ್ತ ಹಾಗೂ ರೈಲ್ವೆ ನಿಲ್ದಾಣದ ರಸ್ತೆಗಳಲ್ಲೇ ಪಾರ್ಕಿಂಗ್ ಮಾಡಿ ಹೋಗುತ್ತಿರುವುದರಿಂದ ಹಾಗೂ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಕೆನರಾ ಬ್ಯಾಂಕ್, ಕಣ್ಣಿನ ಆಸ್ಪತ್ರೆ, ಗಣಪತಿ ದೇವಾಲಯ, ಹಾಗೂ ಈ ಭಾಗದ ಪ್ರಮುಖ ವಾಣಿಜ್ಯ ವ್ಯಾಪಾರದ ಮಳಿಗೆಗಳಿಗೆ ಬರುವ ಮಂದಿ ಕೂಡ ತಮ್ಮ ವಾಹನಗಳನ್ನು ರೈಲು ನಿಲ್ದಾಣದ ರಸ್ತೆ ಹಾಗೂ ಪಿಪಿ ವೃತ್ತದಲ್ಲಿ ಗಂಟೆಗಟ್ಟಲೇ ನಿಲ್ಲಿಸಿ ಹೋಗುವುದರಿಂದ ರೈಲು, ಬಸ್ಸು ಹಾಗೂ ತಮ್ಮ ಖಾಸಗಿ ವಾಹನಗಳ ಮೂಲಕ ಹೆದ್ದಾರಿ ಸಾಗುವ ಪ್ರಯಾಣಿಕರು ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಶಪಿಸುತ್ತ ಮುಂದೆ ಸಾಗುವುದು ಮಾಮೂಲಿ ಸಂಗತಿಯಾಗಿದೆ.

ಶಾಸಕ ಕೆ.ಎಂ ಶಿವಲಿಂಗೇಗೌಡ ಸೇರಿದಂತೆ ಸ್ಥಳೀಯ ನಗರಸಭೆಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ಪೊಲೀಸರು ರೈಲು ಮತ್ತು ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ನಗರದ ಜನತೆಯ ಆಗ್ರಹವಾಗಿದೆ.

ಪ್ರಮುಖ ವಾಣಿಜ್ಯ ವ್ಯಾಪಾರ ಕೇಂದ್ರದಂತಿರುವ ಪಿಪಿ ವೃತ್ತ ಬಸ್ ನಿಲ್ದಾಣದ ಸುತ್ತ ಮುತ್ತ ವಾಹನ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಕ್ರಮ ಕೈಗೊಳ್ಳದೆ ಹೋದರೆ ಸಂಭವಿಸಬಹುದಾದ ಸಾವು ನೋವಿಗೆ ಹೊಣೆಗಾರರಾಗಬೇಕಾಗುತ್ತದೆ ಇದಕ್ಕೆ ನಮ್ಮ ಜನಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡ್ತಾರೆ ಮಾದಿಗ ದಂಡೋರ ಹೋರಾಟ ಸಮಿತಿಯ ಮುಖಂಡ ವೆಂಕಟೇಶ್. ನಗರದ ಜನಸಂಖ್ಯೆ ಹಾಗೂ ಬೆಳವಣಿಗೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿಯ ಕೊರತೆ ಇದೆ. ಆದರೂ ಇರುವ ಸಿಬ್ಬಂದಿಯನ್ನೇ ಬಳಸಿಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ಜತೆಗೆ ವಾಹನ ದಟ್ಟಣೆಯನ್ನು ನಿಯಂತ್ರಿಸುವ ಮೂಲಕ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆಯಾಗದ ರೀತಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. -ಲೋಕೇಶ್ ಡಿವೈಎಸ್ಪಿ