ಪಾಲಿಕೆ ಸಿಬ್ಬಂದಿಯಿಂದಲೇ ರಸ್ತೆ ಬದಿ ತ್ಯಾಜ್ಯ ವಿಲೇವಾರಿ!

| Published : Oct 27 2025, 12:15 AM IST

ಪಾಲಿಕೆ ಸಿಬ್ಬಂದಿಯಿಂದಲೇ ರಸ್ತೆ ಬದಿ ತ್ಯಾಜ್ಯ ವಿಲೇವಾರಿ!
Share this Article
  • FB
  • TW
  • Linkdin
  • Email

ಸಾರಾಂಶ

ಅತ್ತ ಮಕ್ಕಳು ಓಣಿ ಓಣಿ ಅಲೆದಾಡಿ ಕಸ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರೆ, ಇತ್ತ ಪಾಲಿಕೆ ಸಿಬ್ಬಂದಿಯೇ ರಸ್ತೆಗೆ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಅತ್ತ ಮಕ್ಕಳು ಓಣಿ ಓಣಿ ಅಲೆದಾಡಿ ಕಸ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದರೆ, ಇತ್ತ ಪಾಲಿಕೆ ಸಿಬ್ಬಂದಿಯೇ ರಸ್ತೆಗೆ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಚೆಲ್ಲಿದರೆ ದಂಡ ಎಂದು ಹೇಳುವ ಪಾಲಿಕೆಗೆ ಯಾರು ದಂಡ ಹಾಕಬೇಕು? ಪಾಲಿಕೆಯ ಈ ವರ್ತನೆ ನೋಡಿದರೆ ಬೆಂಕಿಗೆ ಗಂಟೆ ಕಟ್ಟುವವರು ಯಾರು? ಎಂಬ ಪ್ರಶ್ನೆ ಮೂಡುತ್ತಿದೆ.

ಪಾಲಿಕೆಯ ತ್ಯಾಜ್ಯ ವಿಲೇವಾರಿ ಟ್ರಕ್‌, ಆಟೋ ಟಿಪ್ಪರ್‌ ಸೇರಿದಂತೆ ಇತರ ವಾಹನಗಳು ಮನೆ ಮನೆಗಳಿಂದ, ಕಲ್ಯಾಣ ಮಂಟಪ, ಹೋಟೆಲ್‌ಗಳಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಹೇಸಿಗೆ ಮಡ್ಡಿ ಅಥವಾ ಡಂಪಿಂಗ್‌ ಯಾರ್ಡ್‌ನಲ್ಲಿ (ಕಸ ಸಂಗ್ರಹಗಾರಕ್ಕೆ) ವಿಲೇವಾರಿ ಮಾಡುತ್ತಿಲ್ಲ. ಬದಲಿಗೆ ಊರ ಹೊರವಲಯಗಳಲ್ಲಿ ರಸ್ತೆ ಬದಿಗಳಲ್ಲಿ ತ್ಯಾಜ್ಯವನ್ನು ಎಸೆದು ಹೋಗುತ್ತಿದ್ದಾರೆ.

ಹುಬ್ಬಳ್ಳಿ ಹೊರವಲಯದ ಹುಬ್ಬಳ್ಳಿ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ (ಕುಸುಗಲ್‌ ರೋಡ್‌) ಯಲ್ಲಿ ರಸ್ತೆ ಬದಿಯಲ್ಲಿಯೇ ತ್ಯಾಜ್ಯ ಎಸೆಯಲಾಗುತ್ತಿದೆ. ಬರೀ ಇಲ್ಲಷ್ಟೇ ಆನಂದನಗರ, ನೇಕಾರನಗರ ಸೇರಿದಂತೆ ವಿವಿಧೆಡೆಗಳಲ್ಲೂ ಪಾಲಿಕೆಯ ಸಿಬ್ಬಂದಿಯೇ ಕಸ ಎಸೆಯುತ್ತಾರೆ. ಈ ಬಗ್ಗೆ ''''ಕನ್ನಡಪ್ರಭ'''' ರಿಯಾಲಿಟಿ ಚೆಕ್‌ ಮಾಡಿದ ವೇಳೆ ಇದು ಬೆಳಕಿಗೆ ಬಂದಿದೆ.

ಕುಸುಗಲ್‌ ರಸ್ತೆ ಬದಿಯಲ್ಲಿ ಭಾನುವಾರ ಬೆಳಗ್ಗೆ ಟ್ರಕ್‌ವೊಂದು ಮುಂದುಗಡೆ ಎಚ್‌ಡಿಎಂಸಿ ಎಂದು ಆಂಗ್ಲ ಭಾಷೆಯಲ್ಲಿ ಬರೆದಿರುವ (ವಾಹನ ಸಂಖ್ಯೆ- ಕೆಎ- 25, 7583) ಕಸ ಎಸೆದು ಅಲ್ಲಿಂದ ತೆರಳಿತು. ಇದು ಒಂದು ದಿನದ ಕಥೆಯಲ್ಲ. ಪ್ರತಿ ಎರಡ್ಮೂರು ದಿನಗಳಿಗೊಮ್ಮೆ ಈ ರೀತಿ ಪಾಲಿಕೆಯ ಸಿಬ್ಬಂದಿ ಬೇರೆ ಬೇರೆಡೆಗಳಲ್ಲಿ ಸಂಗ್ರಹಿಸಿದ ಕಸವನ್ನು ಇಲ್ಲಿ ಎಸೆದು ಹೋಗುತ್ತಾರೆ. ಈ ಬಗ್ಗೆ ಕೇಳಿದರೆ ನಮ್ಮನ್ನೇ ದಬಾಯಿಸುತ್ತಾರೆ ಎಂದು ಅಲ್ಲೇ ಡಬ್ಬಾ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುವವರು ಹೇಳುತ್ತಾರೆ.

ಈ ರೀತಿ ಅನಧಿಕೃತವಾಗಿ ಕಸ ಎಸೆದು ಹೋಗುತ್ತಿರುವುದರಿಂದ ಆ ಪ್ರದೇಶವೇ ಡಂಪಿಂಗ್‌ ಯಾರ್ಡ್‌ನಂತಾಗಿದೆ. ಇಲ್ಲಿ ಅನಧಿಕೃತ ಡಂಪಿಂಗ್‌ ಯಾರ್ಡ್‌ ಆಗುತ್ತಿರುವ ಬಗ್ಗೆ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಗೊತ್ತಿಲ್ಲ ಅಂತೇನಲ್ಲ. ಅವರಿಗೆ ಗೊತ್ತು. ಈ ಬಗ್ಗೆ ಒಂದೆರಡು ಬಾರಿ ಪಾಲಿಕೆ ಅಧಿಕಾರಿ ವರ್ಗಕ್ಕೆ ಶಾಸಕರು ತಾಕೀತು ಮಾಡಿರುವುದುಂಟು. ಶಾಸಕರು ಹೇಳಿದಾಗ ಏನೋ ಒಂದು ಸಬೂಬು ಹೇಳುವ ಅಧಿಕಾರಿ ವರ್ಗ ಅದನ್ನು ಎರಡು ದಿನ ಸ್ವಚ್ಛಗೊಳಿಸಿದಂತೆ ಮಾಡುತ್ತದೆ. ಎರಡು ದಿನ ಕಳೆಯುತ್ತಿದ್ದಂತೆ ಪಾಲಿಕೆ ಸಿಬ್ಬಂದಿಯೇ ತ್ಯಾಜ್ಯವನ್ನು ತಂದು ಸುರಿಯುತ್ತಾರೆ.

ಇನ್ನು ಸಾರ್ವಜನಿಕರು ಕಸ ಎಸೆಯುವ ಜಾಗಗಳನ್ನು ಬ್ಲ್ಯಾಕ್‌ ಸ್ಪಾಟ್‌ಗಳೆಂದು ಗುರುತಿಸಿ ಅಲ್ಲಿ ಕಸ ಸುರಿದರೆ ಪಾಲಿಕೆ ದಂಡ ವಸೂಲಿ ಮಾಡುತ್ತಿದೆ. ಇದೀಗ ಪಾಲಿಕೆ ಸಿಬ್ಬಂದಿಯೇ ಅನಧಿಕೃತವಾಗಿ ಹೊರವಲಯಗಳಲ್ಲಿ ಡಂಪಿಂಗ್‌ ಯಾರ್ಡ್‌ಗಳಂತೆ ಮಾಡುತ್ತಿದ್ದಾರಲ್ಲ? ಈಗ ಯಾರ ಮೇಲೆ ಪಾಲಿಕೆ ಆಡಳಿತ ಮಂಡಳಿ ಕ್ರಮ ಕೈಗೊಳ್ಳುತ್ತದೆ ಎಂಬ ಪ್ರಶ್ನೆ ಪ್ರಜ್ಞಾವಂತರದ್ದು. ಇದಕ್ಕೆ ಶಾಸಕರು, ಪಾಲಿಕೆ ಆಡಳಿತ ಮಂಡಳಿ, ಆಯುಕ್ತರೇ ಉತ್ತರ ನೀಡಬೇಕಿದೆ.

ಪಾಲಿಕೆ ಸಿಬ್ಬಂದಿಯೇ ಹೊರವಲಯಗಳಲ್ಲಿ ತ್ಯಾಜ್ಯ ಎಸೆಯುವ ಮೂಲಕ ಡಂಪಿಂಗ್‌ ಯಾರ್ಡ್‌ನಂತೆ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ನಮ್ಮನ್ನೇ ದಬಾಯಿಸುತ್ತಾರೆ. ಆಯುಕ್ತರು, ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದು ಕುಸುಗಲ್ ರೋಡ್ ನಿವಾಸಿ ನಾಗರಾಜ ಪಾಟೀಲ ಆಗ್ರಹಿಸಿದ್ದಾರೆ.