ಸಾರಾಂಶ
ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಕುಖ್ಯಾತ ಅಂತಾರಾಜ್ಯ ದರೋಡೆಕೋರನ ಕಾಲಿಗೆ ಪೊಲೀಸರು ಗುಂಡಿಟ್ಟು ಬಂಧಿಸಿದ್ದಾರೆ.
ಗದಗ: ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಕುಖ್ಯಾತ ಅಂತಾರಾಜ್ಯ ದರೋಡೆಕೋರನ ಕಾಲಿಗೆ ಪೊಲೀಸರು ಗುಂಡಿಟ್ಟು ಬಂಧಿಸಿದ್ದಾರೆ.
ರಾಜ್ಯದ ಹಲವೆಡೆ ಕಳ್ಳತನ, ದರೋಡೆ ಮಾಡಿದ್ದ ಕುಕ್ಯಾತ ಗ್ಯಾಂಗ್‌ನ ಮೂವರನ್ನು ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದ ಪೊಲೀಸರು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಿಂದ ಗದಗಕ್ಕೆ ಕೆರದುಕೊಂಡು ಬರುತ್ತಿದ್ದಾಗ ಈ ಗ್ಯಾಂಗ್‌ನ ಪ್ರಮುಖ ಜಯಸಿಂಹ ಎಂಬಾತ ಪೊಲೀಸ ವಾಹನದಲ್ಲಿಯೇ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಮುಂಡರಗಿ ತಾಲೂಕಿನ ಡಂಬಳ ಹಾಗೂ ಡೋಣಿ ಮಧ್ಯೆ ಈ ಘಟನೆ ನಡೆದಿದೆ. ತಕ್ಷಣ ಸಿಪಿಐ ಮಂಜುನಾಥ ಕುಸುಗಲ್ ಮುನ್ನೆಚ್ಚರಿಕೆಯಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆದರೂ ಆರೋಪಿ ಹಲ್ಲೆ ಮುಂದುವರಿಸಿದಾಗ ಆತನ ಎಡಗಾಲಿಗೆ ಎರಡು ಸುತ್ತಿನ ಗುಂಡು (ಫೈರಿಂಗ್) ಹಾರಿಸಿದ್ದಾರೆ.ಆರೋಪಿಗಳಾದ ಜಯಸಿಂಹ ಮೋಡಕೇರ, ಮಂಜುನಾಥ ಮೋಡಕೇರ, ರಮೇಶ ಮೋಡಕೇರ ಅವರನ್ನು ಪೊಲೀಸರು ಕರೆತರುತ್ತಿದ್ದರು. ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ವೀರೇಶ ಬಿಸನಳ್ಳಿಗೆ ಗಾಯಗಳಾಗಿವೆ.
ಕಳ್ಳರ ಗ್ಯಾಂಗ್ ಪೊಲೀಸ್ ಇಲಾಖೆಗೆ ತಲೆನೋವಾದ ಕಾರಣ ಈ ಗ್ಯಾಂಗ್ ಪತ್ತೆಗೆ ಗದಗ ಎಸ್‌ಪಿ ಬಿ.ಎಸ್. ನೇಮಗೌಡ ಸೂಚನೆ ಮೇರೆಗೆ ಎಡಿಎಸ್ಪಿ ಸಂಕದ ಮಾರ್ಗದರ್ಶನದಲ್ಲಿ ಮುಂಡರಗಿ ಸಿಪಿಐ ಮಂಜುನಾಥ ಕುಸುಗಲ್, ಮುಳಗುಂದ ಪಿಐ ಸಂಗಮೇಶ, ಬೆಟಗೇರಿ ಸಿಪಿಐ ಧೀರಜ ಸಿಂದೆ ನುರಿತ ತಂಡ ರಚನೆ ಮಾಡಿ ಗ್ಯಾಂಗ್ ಪತ್ತೆ ಹಚ್ಚಲಾಗಿತ್ತು,ಗಾಯಗೊಂಡ ಆರೋಪಿಯನ್ನು ಗದಗ ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಗದಗ ಎಸ್‌ಪಿ ಬಿ.ಎಸ್. ನೇಮಗೌಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಘಟನೆ ನಡೆದ ಸ್ಥಳಕ್ಕೂ ಭೇಟಿ ನೀಡಿ ಪೊಲೀಸರಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ.ನಿರಂತರ ಕಳ್ಳತನ:
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ನಿವಾಸಿಯಾಗಿರುವ ಜಯಸಿಂಹನ ಗ್ಯಾಂಗ್ ರಾಜ್ಯದ ಹಲವು ಕಡೆಗೆ ದರೋಡೆ, ಕಳ್ಳತನ ಇತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಗದಗ ಪೊಲೀಸರು ಬಂಧಿಸುವ ಮೂಲಕ ಯಶಸ್ವಿಯಾಗಿದ್ದಾರೆ. ಆರೋಪಿಗಳ ಸಂಪೂರ್ಣ ವಿಚಾರಣೆಗೊಳಪಡಿಸಿ ಎಲ್ಲೆಲ್ಲಿ ಕಳ್ಳತನ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.