ದರೋಡೆಕೋರರ ಕಾಲಿಗೆ ಗುಂಡೇಟು, ಬಂಧನ

| Published : Feb 05 2025, 12:31 AM IST

ಸಾರಾಂಶ

ಗುಜರಾತ್ ಮೂಲದ ನಿಲೇಶ, ದಿಲೀಪ್‌ ಎಂಬುವವರ ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಸೇರಿದಂತೆ ಐದಾರು ಜನರಿರುವ ಗುಂಪು ನಗರದ ಹೊರವಲಯದಲ್ಲಿ ಬೈಕ್‌ ತಡೆದು ಹೆದರಿಸಿ ದರೋಡೆ ಮಾಡುತ್ತಿತ್ತು. ಸೋಮವಾರ ತಡರಾತ್ರಿ ಕೂಡ ಕುಂದಗೋಳ ಮೂಲದ ವ್ಯಕ್ತಿಯನ್ನು ತಡೆದು ಮೊಬೈಲ್‌, ನಗದು ಸೇರಿದಂತೆ ಇತರೆ ವಸ್ತುಗಳನ್ನು ದೋಚಿತ್ತು.

ಹುಬ್ಬಳ್ಳಿ:

ನಗರದಲ್ಲಿ ಮತ್ತೆ ಪೊಲೀಸರ ಬಂದೂಕು ಸದ್ದು ಮಾಡಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಗುಜರಾತ್‌ ಮೂಲದ ಇಬ್ಬರು ದರೋಡೆಕೋರರ ಮೇಲೆ ಮಂಗಳವಾರ ಬೆಳಗಿನ ಜಾವ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. ಐದಕ್ಕೂ ಹೆಚ್ಚು ಜನರಿದ್ದ ಈ ಗುಂಪಿನಲ್ಲಿ ಗುಂಡೇಟಿನಿಂದ ಇಬ್ಬರು ಗಾಯಗೊಂಡು, ಸಿಕ್ಕು ಬಿದ್ದಿದ್ದರೆ ಇನ್ನುಳಿದವರು ಪರಾರಿಯಾಗಿದ್ದಾರೆ. ಗುಂಡೇಟಿನಿಂದ ಆರೋಪಿಗಳಿಬ್ಬರು ಹಾಗೂ ಅವರ ಹಲ್ಲೆಯಿಂದ ಮೂವರು ಪೊಲೀಸರು ಗಾಯಗೊಂಡಿದ್ದು, ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಏನಿದು ಘಟನೆ:

ಗುಜರಾತ್ ಮೂಲದ ನಿಲೇಶ, ದಿಲೀಪ್‌ ಎಂಬುವವರ ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಸೇರಿದಂತೆ ಐದಾರು ಜನರಿರುವ ಗುಂಪು ನಗರದ ಹೊರವಲಯದಲ್ಲಿ ಬೈಕ್‌ ತಡೆದು ಹೆದರಿಸಿ ದರೋಡೆ ಮಾಡುತ್ತಿತ್ತು. ಸೋಮವಾರ ತಡರಾತ್ರಿ ಕೂಡ ಕುಂದಗೋಳ ಮೂಲದ ವ್ಯಕ್ತಿಯನ್ನು ತಡೆದು ಮೊಬೈಲ್‌, ನಗದು ಸೇರಿದಂತೆ ಇತರೆ ವಸ್ತುಗಳನ್ನು ದೋಚಿತ್ತು. ಅಲ್ಲದೇ ಆತನ ಮೇಲೆ ಹಲ್ಲೆ ಕೂಡ ನಡೆಸಿತ್ತು. ಬಳಿಕ ರವಿಚಂದ್ರ ಎಂಬುವವರನ್ನೂ ಅಡ್ಡಗಟ್ಟಿದ ಇದೇ ತಂಡವು ಅವನ ಬಳಿಯೂ ದರೋಡೆ ಮಾಡಿತ್ತು. ಬಳಿಕ ಮಂಟೂರ ರಸ್ತೆಯಲ್ಲಿನ ಶಾರುಖ್ ಎಂಬುವವರ ಮನೆಗೆ ಕಲ್ಲು ತೂರಾಟ ನಡೆಸಿ ಮನೆಯ ಕನ್ನ ಹಾಕಲು ಯತ್ನಿಸಿತ್ತು.

ದರೋಡೆ ಮಾಡಿ ನಗರದ ಹೊರವಲಯದ ಬಿಡನಾಳ ಸಮೀಪದಲ್ಲಿ ಹಾಕಲಾಗಿದ್ದ ತಪಾಸಣಾ ಕೇಂದ್ರದ ಮೂಲಕ ಪರಾರಿಯಾಗಲು ಯತ್ನಿಸಿದ್ದಾರೆ. ಸಂಶಯಗೊಂಡ ಪೊಲೀಸರು ದರೋಡೆಕೋರರನ್ನು ತಡೆದು ಪರಿಶೀಲಿಸಲು ಮುಂದಾಗಿದ್ದಾರೆ. ಆಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಆ ವೇಳೆ ಇನ್‌ಸ್ಪೆಕ್ಟರ್‌ ಎಸ್‌.ಆರ್‌. ನಾಯಕ ನೇತೃತ್ವದ ಪೊಲೀಸ್‌ ತಂಡವು ಆತ್ಮರಕ್ಷಣೆಗಾಗಿ ದರೋಡೆಕೋರಾದ ಗುಜರಾತ್‌ ಮೂಲದ ನಿಲೇಶ ಹಾಗೂ ದಿಲೀಪನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಗುಂಪಿನಲ್ಲಿದ್ದ ಇನ್ನುಳಿದವರು ಅಲ್ಲಿಂದ ಪರಾರಿಯಾಗಿದೆ.

ಈ ಘಟನೆಯಲ್ಲಿ ಪಿಎಸ್‌ಐ ಅಶೋಕ ಹಾಗೂ ಪೇದೆಗಳಾದ ಶರಣು, ಸೋಮಣ್ಣ ಮೇಟಿ ಅವರಿಗೆ ಗಾಯಗಳಾಗಿವೆ. ಗುಂಡೇಟು ತಿಂದಿರುವ ಆರೋಪಿಗಳು ಹಾಗೂ ಪೊಲೀಸ್ ಸಿಬ್ಬಂದಿಗೆ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಮಾಹಿತಿ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

15ಕ್ಕೂ ಹೆಚ್ಚು ಪ್ರಕರಣ ದಾಖಲು:

ಘಟನೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಎನ್. ಶಶಿಕುಮಾರ, ಆರೋಪಿಗಳಾದ ನಿಲೇಶ ಹಾಗೂ ದಿಲೀಪ ಮೇಲೆ ಈಗಾಗಲೇ ಗದಗ, ಬಳ್ಳಾರಿ, ಚಿತ್ರದುರ್ಗ ಸೇರಿ ಹಲವು ಜಿಲ್ಲೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಹುಬ್ಬಳ್ಳಿಯ ಜೈನ್ ಮಂದಿರದ ಹುಂಡಿಯಲ್ಲಿದ್ದ ಹಣ ಕಳ್ಳತನ ಮಾಡಿರುವುದು ಇದೇ ತಂಡದವರು. ಕಳ್ಳತನದ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹಿಂದೆ ಹುಬ್ಬಳ್ಳಿಯ ನವನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 2 ಅಂಗಡಿಗಳಿಗೆ ಕನ್ನ ಹಾಕಿದ್ದರು. ಈ ತಂಡದಲ್ಲಿ ಇನ್ನೂ 3-4 ಜನರಿರುವ ಮಾಹಿತಿ ದೊರೆತಿದ್ದು, ಆದಷ್ಟು ಬೇಗನೆ ಉಳಿದ ಆರೋಪಿಗಳನನ್ನು ಬಂಧಿಸಲಾಗುವುದು ಎಂದರು.