ಕಣ್ಣಿಗೆ ಕಾರದಪುಡಿ ಎರಚಿ ದರೋಡೆ; ಪೊಲೀಸ್ ಪೇದೆ ಸಾಥ್

| Published : Sep 22 2024, 01:55 AM IST

ಸಾರಾಂಶ

ರಘು ಎಂಬುವರು ಬೆಳಗಿನ ಜಾವ 4.30ರ ಸುಮಾರಿಗೆ ನಗರದ ಟ್ಯಾಂಕ್‌ಬಂಡ್ ರಸ್ತೆಯಿಂದ ರಾಯದುರ್ಗ ಬಸ್‌ ನಿಲ್ದಾಣದ ಕಡೆಗೆ ಹೊರಟಿದ್ದರು.

ಬಳ್ಳಾರಿ: ಕಣ್ಣಿಗೆ ಕಾರದಪುಡಿ ಎರಚಿ ದರೋಡೆ ನಡೆಸಿದ ಅದೇ ಠಾಣೆಯ ಪೊಲೀಸ್‌ ಕಾನ್‌ಸ್ಟೇಬಲ್‌ ಸೇರಿದಂತೆ 7 ಜನರ ತಂಡವನ್ನು ಬಂಧಿಸಿದ ಬ್ರೂಸ್‌ಪೇಟೆ ಪೊಲೀಸರು, ಆರೋಪಿತರಿಂದ ₹21.71 ಲಕ್ಷ ಮೌಲ್ಯದ ಬಂಗಾರ, ನಗದು ವಶಪಡಿಸಿ ಕೊಂಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಡಾ.ಶೋಭಾರಾಣಿ, ದರೋಡೆಗೈದವರ ಗುಂಪಿನಲ್ಲಿ ಬ್ರೂಸ್‌ಪೇಟೆ ಠಾಣೆಯ ಪೊಲೀಸ್ ಪೇದೆ ಮೆಹಬೂಬ್‌ ಬಾಷಾ ಸಾಥ್ ನೀಡಿದ್ದು, ಈತನನ್ನು ಬಂಧಿಸಿದ್ದು, ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.

ನಗರದ ಮಿಲ್ಲರ್‌ಪೇಟೆ ನಿವಾಸಿಗಳಾದ ತೌಸಿಫ್, ಜಾವೀದ್, ಪೀರಾ, ದಾದಾ ಖಲಂದರ್, ಮುಸ್ತಾಕ್ ಅಲಿ ರೆಹಮಾನ್, ಆರಿಫ್ ಹಾಗೂ ಪೊಲೀಸ್ ಪೇದೆ ಮೆಹಬೂಬ್ ಬಾಷಾ ಪ್ರಕರಣದ ಆರೋಪಿಗಳಾಗಿದ್ದಾರೆ ಎಂದು ವಿವರಿಸಿದರು.

ಸೆ.12ರಂದು ನಗರದ ರಘು ಎಂಬುವರು ಬೆಳಗಿನ ಜಾವ 4.30ರ ಸುಮಾರಿಗೆ ನಗರದ ಟ್ಯಾಂಕ್‌ಬಂಡ್ ರಸ್ತೆಯಿಂದ ರಾಯದುರ್ಗ ಬಸ್‌ ನಿಲ್ದಾಣದ ಕಡೆಗೆ ಹೊರಟಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಕಣ್ಣಿಗೆ ಕಾರದಪುಡಿ ಎರಚಿದರು. ರಘು ಬಳಿಯಿದ್ದ ಚಿನ್ನಾಭರಣ ಹಾಗೂ ನಗದು ಇದ್ದ ಬ್ಯಾಗ್‌ನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಬಳಿಕ ತೌಸಿಫ್ ಎಂಬಾತ ಆರಿಫ್‌ ಗೆ ಕರೆ ಮಾಡಿ, ದರೋಡೆ ಮಾಡಿದ ಕುರಿತು ತಿಳಿಸುತ್ತಾನೆ. ಆ ಸಂದರ್ಭದಲ್ಲಿ ಆರಿಫ್‌ ಹಾಗೂ ಪೊಲೀಸ್ ಪೇದೆ ಮೆಹಬೂಬ್ ಬಾಷಾ ಜೊತೆಗಿರುತ್ತಾರೆ. ದರೋಡೆಗೈದ ಬ್ಯಾಗ್‌ ತರಲು ಮೆಹಬೂಬ್‌ ಬಾಷಾ ತನ್ನ ಬೈಕ್‌ನ್ನು ಕೊಟ್ಟು ಆರಿಫ್‌ನನ್ನು ಕಳಿಸಿಕೊಡುತ್ತಾನೆ.

ಬ್ಯಾಗ್ ನಲ್ಲಿದ್ದ ₹22.99 ಲಕ್ಷ ನಗದು, ₹38.89 ಲಕ್ಷ ಮೌಲ್ಯದ ಬಂಗಾರದ ಗಟ್ಟಿಗಳು, ಚಿನ್ನದಾಭರಣಗಳಿದ್ದ ಬ್ಯಾಗ್‌ ನ್ನು ನಗರದ ಹೊರವಲಯದ ಬೈಪಾಸ್ ರಸ್ತೆಗೆ ಹೊತ್ತೊಯ್ಯುತ್ತಾರೆ. ಅದರಲ್ಲಿದ್ದ ಒಂದಷ್ಟು ಹಣ ಹಂಚಿಕೊಂಡು ಉಳಿದ ಹಣವನ್ನು ಬ್ರೂಸ್‌ಪೇಟೆ ಠಾಣೆಯ ಮುಖ್ಯ ಪೊಲೀಸ್ ಪೇದೆಯಾಗಿದ್ದ ಮೆಹಬೂಬ್ ಬಾಷಾನ ಮನೆಯಲ್ಲಿಡುತ್ತಾರೆ.

ಪ್ರಕರಣದ ಪ್ರಮುಖ ಆರೋಪಿ ಆರಿಫ್, ಪೇದೆ ಮೆಹಬೂಬ್ ಬಾಷಾ ಇಬ್ಬರೂ ಆತ್ಮೀಯರಾಗಿದ್ದರು. ಈ ಸಲುಗೆಯಿಂದಲೇ ದರೋಡೆಯ ಪ್ಲಾನ್ ಮಾಡಿರುವುದು ವಿಚಾರಣೆ ವೇಳೆ ಗೊತ್ತಾಗಿದೆ ಎಂದರು.

ರಘು ಎಂಬುವರು ಸ್ಥಳೀಯ ಚಿನ್ನಾಭರಣ ಮಾರಾಟಗಾರರಿಂದ ಹಣ ಸಂಗ್ರಹಿಸಿಕೊಂಡು ಒಡವೆಗಳನ್ನು ತರಲು ಬೆಂಗಳೂರು ಹಾಗೂ ಚೆನ್ನೈ ಕಡೆ ಹೋಗುತ್ತಾರೆ ಎಂಬ ಮಾಹಿತಿ ದರೋಡೆಕೋರರಿಗೆ ಇರುತ್ತದೆ. ನಾಲ್ಕೈದು ತಿಂಗಳಿನಿಂದ ಗಮನಿಸಿದ್ದರು. ಸೆ.12ರಂದು ದರೋಡೆಗೈಯುವ ಪ್ಲಾನ್ ಮಾಡಿದ್ದರು ಎಂದು ತಿಳಿಸಿದರು.

ದರೋಡೆಯಿಂದ ಬಂದ ಹಣದಲ್ಲಿ ₹9 ಲಕ್ಷ ಪಡೆದುಕೊಂಡ ಪೇದೆ ಮೆಹಬೂಬು ಬಾಷಾನಿಂದ ₹6.90 ಲಕ್ಷ ವಶಪಡಿಸಿಕೊಳ್ಳಲಾಗಿದೆ. ಉಳಿದ ಹಣ ಏನು ಮಾಡಿದ್ದಾನೆ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ದರೋಡೆಕೋರರಿಂದ ಸದ್ಯ ₹15.91 ಲಕ್ಷ ನಗದು, 116 ಗ್ರಾಂ ಚಿನ್ನ, ಕೃತ್ಯಕ್ಕೆ ಉಪಯೋಗಿಸಿದ ಮೋಟರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ ₹21.71 ಲಕ್ಷ ಎಂದು ಅಂದಾಜಿಸಲಾಗಿದೆ.

ಪ್ರಕರಣದ ಮುಂದಿನ ತನಿಖೆಯ ಬಳಿಕ ಮತ್ತಷ್ಟು ವಿಷಯ ಬೆಳಕಿಗೆ ಬರುತ್ತದೆ ಎಂದು ತಿಳಿಸಿದ ಎಸ್ಪಿ ಡಾ.ಶೋಭಾರಾಣಿ, ಪ್ರಕರಣ ಭೇದಿಸಿದ ಬ್ರೂಸ್‌ಪೇಟೆ ಪೊಲೀಸರ ಕಾರ್ಯ ಶ್ಲಾಘಿಸಿದ್ದಾರೆ.