ಸಾರಾಂಶ
ರೋಣ: ಇತ್ತೀಚೆಗೆ ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣವೊಂದನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಇಟಗಿ ಕ್ರಾಸ್ ಬಳಿ ಮಂಗಳವಾರ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಎರಡು ಬೈಕ್‌ನಲ್ಲಿ ಮೂವರು ಬಂದಿದ್ದಾರೆ. ಸಂಶಯ ಬಂದು ಅವರನ್ನು ವಿಚಾರಣೆಗೊಳಪಡಿಸಿದಾಗ ಈ ಹಿಂದೆ ದರೋಡೆ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದೆ.ಆರೋಪಿಗಳಾದ ಹನುಮಂತ ಗಂಗಪ್ಪ ತಂಗಳ, ಪರಶು ಯಲ್ಲಪ್ಪ ವೈದ್ಯ ಹಾಗೂ ದುರಗೇ ಭೀಮಪ್ಪ ಕುಂಚಿಕೊರವರ ಎಂಬವರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು ₹1,49,500 ಕಿಮ್ಮತ್ತಿನ ಎರಡು ದ್ವಿಚಕ್ರ ವಾಹನ ಸೇರಿದಂತೆ ನಗದು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಮೇಲೆ ಹುಬ್ಬಳ್ಳಿ ಕೇಶ್ವಾಪುರ ಪೊಲೀಸ್ ಠಾಣೆ ಹಾಗೂ ಕುಷ್ಟಗಿ ಪೊಲೀಸ್ ಠಾಣೆಗಳಲ್ಲಿ ಡಕಾಯಿತಿ ಪ್ರಕರಣಗಳು ದಾಖಲಾಗಿದೆ ಎಂದು ನರಗುಂದ ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮುಶಿಗೇರಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ದಯಾನಂದ ಜಂಬಗಿ ಬಯಲು ಬಹಿರ್ದೆಸೆಗೆ ತೆರಳಿದ ಸಂದರ್ಭದಲ್ಲಿ ಜಿಗಳೂರು ದೊಡ್ಡ ಕೆರೆಯ ಹತ್ತಿರ ಮೂರು ಜನ ದರೋಡೆಕೋರರು ಮಾರಕಾಸ್ತ್ರಗಳಿಂದ ಬೆದರಿಸಿ ₹45,280 ಫೋನ್ ಪೇ ಮಾಡಿಸಿಕೊಂಡಿದ್ದು ಹಾಗೂ ಅವರ ಬಜಾಜ್ ಪಲ್ಸರ್ ದ್ವಿಚಕ್ರ ವಾಹನವನ್ನು ದೋಚಿಕೊಂಡು ಹೋಗಿದ್ದು, ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದರಿ ಪ್ರಕರಣ ಭೇದಿಸಲು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಹಾಗೂ ಹೆಚ್ಚುವರಿ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ಬಿ. ಸುಂಕದ, ನರಗುಂದ ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ ಮಾರ್ಗದರ್ಶನದಲ್ಲಿ ರೋಣ ಸಿಪಿಐ ಎಸ್.ಎಸ್. ಬೀಳಗಿ, ರೋಣ ಠಾಣೆ ಪಿ.ಎಸ್.ಐ ಪ್ರಕಾಶ ಬಣಕಾರ, ಗಜೇಂದ್ರಗಡ ಠಾಣೆ ಪಿಎಸ್ಐ ಸೋಮನಗೌಡ ಗೌಡರ, ನರೇಗಲ್ ಠಾಣೆ ಪಿ.ಎಸ್.ಐ ಐಶ್ವರ್ಯ ನಾಗರಾಳ, ಸಿಬ್ಬಂದಿ ಹನುಮಪ್ಪ ಶಂಕ್ರಿ, ಎಂ.ಬಿ. ವಡ್ಡಟ್ಟಿ, ಮಂಜುನಾಥ ಕುರಿ, ಕುಮಾರ ತಿಗರಿ, ಮಂಜುನಾಥ ಬಂಡಿವಡ್ಡರ, ಶಿವಕುಮಾರ ಹುಬ್ಬಳ್ಳಿ, ಮುತ್ತಪ್ಪ ಭಾವಿ, ಡಿ.ಎಂ. ಚಿತ್ರಗಾರ, ಕಿರಣ ಹಿರೇಮಠ, ಸದಾಶಿವ ಕದಂ ಹನುಮಂತ ಹುಲ್ಲೂರ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಗುರುರಾಜ ಬೂದಿಹಾಳ, ಸಂಜೀವ ಕೊರಡೂರ ಒಳಗೊಂಡ ತಂಡವನ್ನು ದರೋಡೆಕೋರರನ್ನು ಪತ್ತೆ ಹಚ್ಚಲು ರಚಿಸಲಾಗಿತ್ತು. ರೋಣ ಪೊಲೀಸರ ಕಾರ್ಯಕ್ಕೆ ಎಸ್ಪಿ ಬಿ.ಎಸ್. ನೇಮಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.