ಪೊಲೀಸ್ ಉಡುಪು ಧರಿಸಿ ಪಿಡಬ್ಲ್ಯೂಡಿ ಕ್ವಾರ್ಟ್ರಸ್‌ನಲ್ಲಿ ಕಳವು!

| Published : Jul 22 2025, 12:01 AM IST

ಸಾರಾಂಶ

ನಗರ ಠಾಣೆಯಿಂದ ಕೆಲವೇ ಮೀಟರ್ ದೂರದಲ್ಲಿರುವ ಈ ವಸತಿ ಸಮುಚ್ಛಯದಲ್ಲಿ 6 ತಿಂಗಳ ಹಿಂದೆ 6 ಮನೆಗಳನ್ನು ಇದೇ ರೀತಿ ಕಳ್ಳರು ದೋಚಿದ್ದರು. ಆದರೆ ಕಳ್ಳರು ಪತ್ತೆಯಾಗಿರಲಿಲ್ಲ. ಇದೀಗ ಮತ್ತೆ 3 ಮನೆಗಳಲ್ಲಿ ಕಳ್ಳತನ ನಡೆದಿದ್ದು, ವಸತಿ ಸಮುಚ್ಛಯದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಪೊಲೀಸರ ವೇಷದಲ್ಲಿ ಕಳ್ಳರ ಗ್ಯಾಂಗೊಂದು ನಗರದ ಲೋಕೋಪಯೋಗಿ ಇಲಾಖೆಯ ವಸತಿ ಸಮುಚ್ಛಯದ 3 ಮನೆಗಳಲ್ಲಿ ಲಕ್ಷಾಂತರ ರು. ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.

ನಗರ ಠಾಣೆಯಿಂದ ಕೆಲವೇ ಮೀಟರ್ ದೂರದಲ್ಲಿರುವ ಈ ವಸತಿ ಸಮುಚ್ಛಯದಲ್ಲಿ 6 ತಿಂಗಳ ಹಿಂದೆ 6 ಮನೆಗಳನ್ನು ಇದೇ ರೀತಿ ಕಳ್ಳರು ದೋಚಿದ್ದರು. ಆದರೆ ಕಳ್ಳರು ಪತ್ತೆಯಾಗಿರಲಿಲ್ಲ. ನಂತರ ಅಲ್ಲಿ ಸಿಸಿ ಕ್ಯಾಮರಗಳನ್ನೂ ಅಳವಡಿಸಲಾಗಿತ್ತು. ಆದರೂ ಇದೀಗ ಮತ್ತೆ 3 ಮನೆಗಳಲ್ಲಿ ಕಳ್ಳತನ ನಡೆದಿದ್ದು, ವಸತಿ ಸಮುಚ್ಛಯದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.ಕರ್ನಾಟಕ ಪೊಲೀಸ್ ಎಂದು ಬರೆಯಲಾಗಿದ್ದ ಜಾಕೆಟ್ ಧರಿಸಿದ್ದ 3 ಮಂದಿ ಕಳ್ಳರು, ಈ ವಸತಿ ಸಮುಚ್ಛಯದ ಹೊರಗಿನಿಂದ ಬೀಗ ಹಾಕಿರುವ 3 ಮನೆಗಳನ್ನು ಆಯ್ದು ಕಳ್ಳತನ ಮಾಡಿದ್ದಾರೆ. ಚಿಲಕಗಳನ್ನು ಕತ್ತರಿಸಿ ಒಳನುಗ್ಗಿದ ಕಳ್ಳರು ಅಲ್ಲಿದ್ದ ವಸ್ತುಗಳನ್ನೆಲ್ಲಾ ಜಾಲಾಡಿ, ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಸಮುಚ್ಛಯಗಳಲ್ಲಿ ಸುಮಾರು 30 ಮನೆಗಳಿವೆ. ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿರುವ ಅಂದರೆ ಊರಿಗೆ ಹೋಗಿರುವವರ ಮನೆಗಳನ್ನು ಗುರುತಿಸಿ ಈ ಕಳ್ಳತನ ಮಾಡಲಾಗಿದೆ. ಕಳ್ಳತನದ ಘಟನೆ ಇತರ ಮನೆಗಳ ನಿವಾಸಿಗಳಿಗೆ ಗೊತ್ತೇ ಆಗದಷ್ಟು ನಾಜೂಕಾಗಿ ಕಳ್ಳರು ತಮ್ಮ ಕೃತ್ಯ ಎಸಗಿದ್ದಾರೆ.ಕಳ್ಳರು ಸಮುಚ್ಛಯವನ್ನು ಪ್ರವೇಶಿಸುವ ದೃಶ್ಯ ಸಿಸಿ ಕ್ಯಾಮರದಲ್ಲಿ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಉಡುಪಿ ನಗರ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.