ಸಾರಾಂಶ
ಹೊಳೆಹೊನ್ನೂರು ಸಮೀಪ ಕೈಮರದ ಎನ್.ಡಿ.ಸುಂದರೇಶ್ ವೃತ್ತದಲ್ಲಿ ಇರುವ ಪ್ರಕಾಶದ ಜುವೆಲ್ಲರಿ ವರ್ಕ್ಸ್ ಬಂಗಾರದ ಅಂಗಡಿಯ ಗೋಡೆಗೆ ಕಳ್ಳರು ಕನ್ನ ಕೊರೆದು ಕಳವು ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಸಮೀಪದ ಅರಹತೋಳಲು ಕೈಮರ ಎನ್.ಡಿ.ಸುಂದರೇಶ್ ವೃತ್ತದಲ್ಲಿ ಭಾನುವಾರ ಮಧ್ಯರಾತ್ರಿ ಸುಮಾರು 2.10 ಗಂಟೆ ಸಮಯದಲ್ಲಿ ಅನವೇರಿ ರಸ್ತೆಯಲ್ಲಿರುವ ಮಲ್ಲೇಶಪ್ಪನವರ ಕಾಂಪ್ಲೆಕ್ಸ್‌ನ ಮಳಿಗೆಗಳಲ್ಲಿ ಸರಣಿ ಕಳ್ಳತನ ನಡೆದಿದೆ.ಮಲ್ಲೇಶಪ್ಪನವರ ವಾಣಿಜ್ಯ ಮಳಿಗೆಯಲ್ಲಿ ಪ್ರಕಾಶ್ ಎಂಬುವವರು ಕಳೆದ 9 ತಿಂಗಳಿನಿಂದ ಜ್ಯುವೆಲ್ಲರಿ ಅಂಗಡಿ ಸಂಖ್ಯೆ 3ರಲ್ಲಿ ಪ್ರಕಾಶ್ ಜ್ಯುವೆಲ್ಲರ್ಸ್ ಅಂಗಡಿ ನಡೆಸುತ್ತಿದ್ದರು. ಎಂದಿನಂತೆ ಶನಿವಾರ ರಾತ್ರಿ 7 ಗಂಟೆಗೆ ವ್ಯವಹಾರ ಮುಗಿಸಿಕೊಂಡು ಅಂಗಡಿ ಬಾಗಿಲು ಹಾಕಿಕೊಂಡು ಪುರಲೇ ಗ್ರಾಮದ ಮನೆಗೆ ಹೋಗಿದ್ದರು.
ಪ್ರಕಾಶ್ ಅವರ ಮಗ ಪ್ರಜ್ವಲ್ ತಮ್ಮ ಅಂಗಡಿಯಲ್ಲಿ ಒಳಗೆ ಮತ್ತು ಅಂಗಡಿಯ ಹೊರಗೆ ಸಿಸಿಟಿವಿ ಅಳವಡಿಸಿದ್ದು, ಅದರ ಫುಟೇಜ್ ಗಮನಿಸುತ್ತಿರುವಾಗ ಬೆಳಗಿನ ಜಾವ 2.10ಕ್ಕೆ ಸಿಸಿಟಿವಿ ಫೂಟೇಜ್ ಗಮನಿಸುತ್ತಿರುವಾಗ ಅಂಗಡಿ ಒಳಗೆ ಕಳ್ಳ ಇರುವುದು ಗಮನಿಸಿ ತಂದೆಯಾದ ಪ್ರಕಾಶ್ ಅವರಿಗೆ ವಿಷಯ ತಿಳಿಸಿ ತಂದೆ ಮಗ ಇಬ್ಬರೂ ಸುಮಾರು 2.4೦ಕ್ಕೆ ಅಂಗಡಿಗೆ ಬಂದಿದ್ದಾರೆ. ಪ್ರಜ್ವಲ್ ಅವರು ಅಂಗಡಿಯ ಸಮೀಪ ಹೋಗಿ ನೋಡಿದಾಗ ಅಂಗಡಿಯ ಬೀಗ ಹಾಕಿದ್ದು ಹಾಗೆ ಇದೆ ಆದರೆ ಅಂಗಡಿಯ ಹಿಂಬದಿ ಹೋಗಿ ನೋಡಿದಾಗ ಕಳ್ಳರು ತಮ್ಮ ಅಂಗಡಿ ಪಕ್ಕದ ಶ್ರೀನಿವಾಸಪುರ ಗ್ರಾಮದ ಹರೀಶ್ ರವರ ಶ್ರೀ ರೇಣುಕಾಂಬ ಎಲೆಕ್ಟ್ರಾನಿಕ್ಸ್ ಅಂಗಡಿ ಹಿಂಬದಿ ಗೇಟ್ ಅನ್ನು ಮುರಿದು ಒಳಗೆ ಬಂದು ಹರೀಶ್ ಅವರ ಅಂಗಡಿಯಲ್ಲಿ ಕ್ಯಾಷಿಯರ್ ಡ್ರಾ ಕೆಳಗೆ ಇಟ್ಟಿದ್ದ ₹ 5 ಲಕ್ಷ ಹಣ ತೆಗೆದುಕೊಂಡು ನಂತರ ಪಕ್ಕದ ಅಂದರೆ ಪ್ರಕಾಶ್ ಅವರ ಅಂಗಡಿಯ ಗೋಡೆಗೆ ಕನ್ನ ಕೊರೆದು ಜ್ಯೂಯಲರಿ ಅಂಗಡಿಯ ಒಳಗೆ ಬಂದ್ದಿದ್ದಾರೆ.ಅಂಗಡಿಯ ಶೋ ಕೇಸ್‌ನಲ್ಲಿ ಇದ್ದ ಸುಮಾರು 175 ಗ್ರಾಂ ಬೆಲೆ ರು. 9,84,000 ಹಾಗೂ 6 ಕೆಜಿ 450 ಗ್ರಾಂ ಬೆಳ್ಳಿಯ ವಸ್ತುಗಳು ಅದರ ಬೆಲೆ ರೂ.3,87, ೦೦೦ ಹಾಗು 25 ಸೆಂಟ್ ವಜ್ರದ ಆಭರಣ ಬೆಲೆ ರೂ. 20,000 ಮತ್ತು 5 ಲಕ್ಷ ನಗದು ಸೇರಿ ರೂ. 18, 55, 000 ಬೆಲೆ ಬಾಳುವ ಆಭರಣ ಹಾಗು ನಗದನ್ನು ಕಳ್ಳತನ ಮಾಡಿದ್ದಾರೆ. ವಿಷಯ ತಿಳಿಯುತ್ತದ್ದಂತೆ ಸ್ಥಳಕ್ಕೆ ಆಗಮಿಸಿದ ಪೋಲೀಸರು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.