ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಎಸ್ಎಂಎಸ್ಐಎಂಎಸ್ ಆರ್) ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ.
ಸ್ಪೇನ್‌ನಲ್ಲಿ ಕುಳಿತು 12 ಸಾವಿರ ಕಿ.ಮೀ. ದೂರದಲ್ಲಿನ ಸತ್ಯ ಸಾಯಿ ಗ್ರಾಮದಲ್ಲಿ ಕೋಲಾರದ ಮಹಿಳೆಗೆ ಉಚಿತ ಆಪರೇಷನ್
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಸ್ಪೇನ್ನ ಬಾರ್ಸಿಲೋನಾದಲ್ಲಿ ಕುಳಿತು ವೈದ್ಯರೊಬ್ಬರು 12 ಸಾವಿರ ಕಿ.ಮೀ.ಗೂ ಹೆಚ್ಚು ದೂರದಲ್ಲಿರುವ ಕರ್ನಾಟಕದ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಎಸ್ಎಂಎಸ್ಐಎಂಎಸ್ ಆರ್) ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ. ಭಾರತೀಯ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸಾ ಕ್ಷೇತ್ರದ ಪ್ರಮುಖ ವೈದ್ಯರಾದ ಡಾ. ಸುಧೀರ್ ಶ್ರೀವಾಸ್ತವ ಅವರು ಬಾರ್ಸಿಲೋನಾದಲ್ಲಿ ನಡೆದ ಯುರೋಪಿಯನ್ ಅಸೋಸಿಯೇಷನ್ ಫಾರ್ ಕಾರ್ಡಿಯೋ-ಥೊರಾಸಿಕ್ ಸರ್ಜರಿ (ಇಎಸಿಟಿಎಸ್) ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾಗಲೇ ದೂರದಿಂದಲೇ ರೋಬೋಟ್ ನಿಯಂತ್ರಿಸಿ ಶಸ್ತ್ರಚಿಕಿತ್ಸೆ ನಡೆಸಿದರು.
ಕೋಲಾರ ಜಿಲ್ಲೆಯ 26 ವರ್ಷದ ಮಹಿಳೆ ಹೃದಯದ ಮೇಲಿನ ಎರಡು ಕವಾಟಗಳ ನಡುವೆ ಜನ್ಮತಃ ರಂಧ್ರವಿರುವ ಸಮಸ್ಯೆಯಿಂದ ಬಳಲುತ್ತಿದ್ದರು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಆಟ್ರಿಯಲ್ ಸೆಪ್ಟಲ್ ಡಿಫೆಕ್ಟ್ (ಎಎಸ್ ಡಿ) ಎಂದು ಕರೆಯಲಾಗುತ್ತದೆ. ಈ ಸಮಸ್ಯೆಗೆ ರೋಬೋಟಿಕ್ ತಂತ್ರಜ್ಞಾನದ ನೆರವಿನಿಂದ ಚಿಕಿತ್ಸೆ ನೀಡಲಾಯಿತು.ಬಾರ್ಸಿಲೋನಾದಲ್ಲಿ ಅಳವಡಿಸಲಾಗಿದ್ದ ರೋಬೋಟಿಕ್ ಶಸ್ತ್ರಚಿಕಿತ್ಸಾ ಕನ್ಸೋಲ್ ಮೂಲಕ ಡಾ. ಸುಧೀರ್ ಶ್ರೀವಾಸ್ತವ ಅವರು ಮುದ್ದೇನಹಳ್ಳಿಯ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿದ್ದ ‘ಎಸ್‌ಎಸ್‌ಐ ಮಂತ್ರ’ ರೋಬೋಟಿಕ್ ವ್ಯವಸ್ಥೆಯನ್ನು ನಿಯಂತ್ರಿಸಿದರು. ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಯಿತು.
ಮಣಿಪಾಲ್ ಆಸ್ಪತ್ರೆಯ ಜೈಪುರ ಘಟಕದ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಹಾಗೂ ರೋಬೋಟಿಕ್ ಶಸ್ತ್ರಚಿಕಿತ್ಸಕ ಡಾ. ಲಲಿತ್ ಮಲಿಕ್ ಮತ್ತು ಮುದ್ದೇನಹಳ್ಳಿಯ ಸಂಸ್ಥೆಯ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ. ಸಿ. ಎಸ್. ಹಿರೇಮಠ ಅವರು ಆಸ್ಪತ್ರೆಯಲ್ಲಿ ಉಪಸ್ಥಿತರಿದ್ದು, ಶಸ್ತ್ರಚಿಕಿತ್ಸೆಗೆ ಅಗತ್ಯವಾದ ನೆರವು ನೀಡಿದರು. ರೋಗಿಯ ಆರೋಗ್ಯದ ಮೇಲೂ ನಿರಂತರ ನಿಗಾ ವಹಿಸಿದರು.ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಸುಮಾರು ಆರು ಗಂಟೆಗಳ ನಂತರ ಉಸಿರಾಟಕ್ಕೆ ಅಳವಡಿಸಿದ್ದ ಟ್ಯೂಬ್ ಅನ್ನು ತೆಗೆದುಹಾಕಲಾಯಿತು ಎಂದು ಆಸ್ಪತ್ರೆ ತಿಳಿಸಿದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಮೂರು ಸಣ್ಣ ಛೇದನಗಳನ್ನು ಮಾಡಲಾಗಿದ್ದು, ಪ್ರತಿಯೊಂದೂ ಐದು ಮಿಲಿ ಮೀಟರ್‌ಗಿಂತ ಕಡಿಮೆ ಗಾತ್ರದ್ದಾಗಿತ್ತು. ರಕ್ತಸ್ರಾವ ಮತ್ತು ಶಸ್ತ್ರಚಿಕಿತ್ಸೆಯ ನಂತರದ ನೋವು ಕಡಿಮೆಯಾಗಿತ್ತು ಎಂದು ಸಂಸ್ಥೆ ಹೇಳಿದೆ.
ಅಂತರವನ್ನೂ ಮೀರಿದ ತಂತ್ರಜ್ಞಾನ:ಈ ಹಿಂದೆ ಮುದ್ದೇನಹಳ್ಳಿಯ ಇದೇ ಆಸ್ಪತ್ರೆಯಲ್ಲಿ ಗುರುಗ್ರಾಮ್‌ನಿಂದ ರೋಬೋಟಿಕ್ ವ್ಯವಸ್ಥೆಯನ್ನು ನಿಯಂತ್ರಿಸಿ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೀಗ ಸ್ಪೇನ್‌ನ ಬಾರ್ಸಿಲೋನಾದಿಂದ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಈ ತಂತ್ರಜ್ಞಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಸುವ ಸಾಧ್ಯತೆಯನ್ನು ತೋರಿಸಲಾಗಿದೆ.
ದೂರದಿಂದಲೇ ರೋಬೋಟ್ ನಿಯಂತ್ರಿಸಿ ನಡೆಸುವ ಶಸ್ತ್ರಚಿಕಿತ್ಸೆಯು ಭವಿಷ್ಯದಲ್ಲಿ ಗ್ರಾಮೀಣ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆಯಿರುವ ಪ್ರದೇಶಗಳಿಗೂ ಪರಿಣತ ವೈದ್ಯರ ಸೇವೆ ತಲುಪಿಸಲು ನೆರವಾಗಬಹುದು. ವೈದ್ಯಕೀಯ ಶಿಕ್ಷಣ, ಶಸ್ತ್ರಚಿಕಿತ್ಸಾ ತರಬೇತಿ ಮತ್ತು ವಿವಿಧ ದೇಶಗಳ ತಜ್ಞ ವೈದ್ಯರ ಸಹಯೋಗಕ್ಕೂ ಇದು ಅವಕಾಶ ಕಲ್ಪಿಸಲಿದೆ. ಆದರೆ ಇಂತಹ ಶಸ್ತ್ರಚಿಕಿತ್ಸೆಗಳಿಗೆ ವಿಶ್ವಾಸಾರ್ಹ ಸಂವಹನ ವ್ಯವಸ್ಥೆ, ಸ್ಥಳೀಯ ವೈದ್ಯಕೀಯ ತಂಡದ ಸಮನ್ವಯ ಹಾಗೂ ಸೂಕ್ತ ಸುರಕ್ಷತಾ ಕ್ರಮಗಳು ಅತ್ಯಗತ್ಯ.ಬಡ ಮಹಿಳೆಗೆ ಉಚಿತ ಚಿಕಿತ್ಸೆ:
ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಇಬ್ಬರು ಮಕ್ಕಳ ತಾಯಿ. ಅವರ ಪತಿ ಆಟೋರಿಕ್ಷಾ ಚಾಲಕರಾಗಿದ್ದು, ಕುಟುಂಬ ಆರ್ಥಿಕವಾಗಿ ಹಿಂದುಳಿದಿದೆ. ಇಂತಹ ದುಬಾರಿ ಚಿಕಿತ್ಸೆಯನ್ನು ಪಡೆಯುವುದು ಈ ಕುಟುಂಬಕ್ಕೆ ಕಷ್ಟಸಾಧ್ಯವಾಗಿತ್ತು. ಆದರೆ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಶಸ್ತ್ರಚಿಕಿತ್ಸೆ ಸೇರಿದಂತೆ ಆಸ್ಪತ್ರೆಯ ಸಂಪೂರ್ಣ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಿದೆ.ಸಿಕೆಬಿ-1 ಸತ್ಯಸಾಯಿ ಗ್ರಾಮದ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಹಿಳೆಯೊಬ್ಬರಿಗೆ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ ನಡೆಸುತ್ತಿರುವುದು.
ಸಿಕೆಬಿ-2 ಬಾರ್ಸಿಲೋನಾದಿಂದ ಮಹಿಳೆಗೆ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ ನಡೆಸುತ್ತಿರುವ ಡಾ. ಸುಧೀರ್ ಶ್ರೀವಾಸ್ತವ