ಗಾಜಾಪಟ್ಟಿ ಸುತ್ತ ಇಡೀ ದಿನ ರಾಕೆಟ್ ಮೊರೆತ, ಸೈರನ್ ಎಚ್ಚರಿಕೆ...
KannadaprabhaNewsNetwork | Published : Oct 10 2023, 01:01 AM IST
ಗಾಜಾಪಟ್ಟಿ ಸುತ್ತ ಇಡೀ ದಿನ ರಾಕೆಟ್ ಮೊರೆತ, ಸೈರನ್ ಎಚ್ಚರಿಕೆ...
ಸಾರಾಂಶ
ಹಮಾಸ್ ಉಗ್ರರು ಜನವಸತಿ ಪ್ರದೇಶವನ್ನು ಗುರಿಯಾಗಿಸಿ ರಾಕೆಟ್ ಉಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಸಂಭಾವ್ಯ ಪ್ರಾಣಹಾನಿ ತಪ್ಪಿಸುವ ಸಲುವಾಗಿ ಇಸ್ರೇಲ್ ಸರ್ಕಾರ ಈ ಸೂಚನೆ ಹೊರಡಿಸಿದೆ. ಗಾಜಾಪಟ್ಟಿಯ ಸುತ್ತಮುತ್ತಲಿನ ಸುಮಾರು 20- 25 ಕಿ.ಮೀ. ದೂರದ ವರೆಗೂ ರಾಕೆಟ್ ಉಡಾವಣೆಯ ಮೊರೆತ ಕೇಳುತ್ತಲೇ ಇದೆ.
ಆತ್ಮಭೂಷಣ್ ಕನ್ನಡಪ್ರಭ ವಾರ್ತೆ ಮಂಗಳೂರು ಯುದ್ಧಪೀಡಿತ ಇಸ್ರೇಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯರಿಗೆ ತಾವು ಕೆಲಸ ಮಾಡುತ್ತಿರುವ ಸ್ಥಳದ ಹೆಸರು ಬಹಿರಂಗಪಡಿಸದಂತೆ ಅಲ್ಲಿನ ರಾಯಭಾರ ಕಚೇರಿ ಸೋಮವಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ನಡುವೆ ಇಸ್ರೇಲ್‌ನಲ್ಲಿ ಯುದ್ಧ ಆರಂಭವಾಗಿ ಮೂರು ದಿನಗಳಾಗಿದ್ದು, ಕನ್ನಡಿಗರು ಸೇರಿದಂತೆ ಎಲ್ಲ ಭಾರತೀಯರೂ ಸುರಕ್ಷಿತವಾಗಿದ್ದಾರೆ ಎಂಬುದನ್ನು ರಾಯಭಾರ ಕಚೇರಿ ದೃಢಪಡಿಸಿದೆ. ಹಮಾಸ್ ಉಗ್ರರು ಜನವಸತಿ ಪ್ರದೇಶವನ್ನು ಗುರಿಯಾಗಿಸಿ ರಾಕೆಟ್ ಉಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಸಂಭಾವ್ಯ ಪ್ರಾಣಹಾನಿ ತಪ್ಪಿಸುವ ಸಲುವಾಗಿ ಇಸ್ರೇಲ್ ಸರ್ಕಾರ ಈ ಸೂಚನೆ ಹೊರಡಿಸಿದೆ. ಗಾಜಾಪಟ್ಟಿಯ ಸುತ್ತಮುತ್ತಲಿನ ಸುಮಾರು 20- 25 ಕಿ.ಮೀ. ದೂರದ ವರೆಗೂ ರಾಕೆಟ್ ಉಡಾವಣೆಯ ಮೊರೆತ ಕೇಳುತ್ತಲೇ ಇದೆ ಎಂದು ಅಲ್ಲಿರುವ ಕರ್ನಾಟಕ ಕರಾವಳಿಯ ಕನ್ನಡಿಗರು ಹೇಳುತ್ತಾರೆ. ಇಸ್ರೇಲ್‌ನ ಗಡಿ ಪ್ರದೇಶ ಗಾಜಾಪಟ್ಟಿಯಲ್ಲಿ ಯುದ್ಧ ನಡೆಯುತ್ತಿದ್ದರೂ ಸದ್ಯದ ಮಟ್ಟಿಗೆ ಎಲ್ಲ ಭಾರತೀಯರೂ ಸುರಕ್ಷಿತವಾಗಿದ್ದಾರೆ. ಇಸ್ರೇಲ್‌ನ ಮಿಲಿಟರಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಉಗ್ರರ ರಾಕೆಟ್‌ನ್ನು ಆಕಾಶದಲ್ಲಿ ಅರ್ಧದಲ್ಲೇ ತುಂಡರಿಸುತ್ತಿದೆ. ಅಪ್ಪಿತಪ್ಪಿ ರಾಕೆಟ್ ಅಪ್ಪಳಿಸುವ ಸಾಧ್ಯತೆ ಇದ್ದರೆ, ಕೂಡಲೇ ಸೈರನ್ ಮೊಳಗಿಸಿ ಎಲ್ಲರನ್ನೂ ಸುರಕ್ಷಿತ ಶೆಲ್ಟರ್‌ಗಳಲ್ಲಿ ಅಡಗುವಂತೆ ಸೂಚಿಸಲಾಗುತ್ತದೆ. ಗಾಜಾಪಟ್ಟಿ ಸನಿಹದಲ್ಲಿ ಇರುವ ಕನ್ನಡಿಗರು ಜೀವ ಕೈಯ್ಯಲ್ಲಿ ಹಿಡಿದುಕೊಂಡು ಬದುಕುವ ಸನ್ನಿವೇಶ ಇದ್ದರೂ ಇಸ್ರೇಲ್‌ನ ಯುದ್ಧತಾಂತ್ರಿಕತೆ ಬಗ್ಗೆ ಅದಮ್ಯ ವಿಶ್ವಾಸ ಹೊಂದಿದ್ದು, ಯಾವುದೇ ಅಪಾಯವಾಗದು ಎಂಬ ದೃಢವಿಶ್ವಾಸವನ್ನು ಅಲ್ಲಿರುವ ಕನ್ನಡಿಗರು ವ್ಯಕ್ತಪಡಿಸುತ್ತಾರೆ. ಜಾಲತಾಣಗಳಲ್ಲಿ ಫೇಕ್ ಸುದ್ದಿ ಹಬ್ಬಿಸಬೇಡಿ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ಅಲ್ಲಿನ ಸರ್ಕಾರ ಕೂಡ ಹೇಳಿದ್ದು, ತವರಿನಲ್ಲೂ ಆತಂಕ ಪಡುವ ಅಗತ್ಯ ಇಲ್ಲ. ಸದ್ಯ ಭಾರತೀಯರಿಗೆ ಯಾವುದೇ ಅಪಾಯ ಇಲ್ಲ ಎನ್ನುತ್ತಾರೆ ಸೆಂಟ್ರಲ್ ಇಸ್ರೇಲ್‌ನಲ್ಲಿ ಇರುವ ಮಂಗಳೂರು ಮೂಲದ ಲೆನಾರ್ಡ್ ಫರ್ನಾಂಡಿಸ್. ಹೆಲಿಕಾಪ್ಟರ್ ಮೂಲಕವೂ ಅನೌನ್ಸ್: ಗಾಜಾಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧದ ಪ್ರತಿಯೊಂದು ಸಮಾಚಾರವನ್ನೂ ಇಸ್ರೇಲ್ ತನ್ನ ನಿವಾಸಿಗಳಿಗೆ ತಿಳಿಸುತ್ತಿದೆ. ಸಂಭಾವ್ಯ ರಾಕೆಟ್ ದಾಳಿ ಬಗ್ಗೆ ಸೈರನ್ ಅಲ್ಲದೆ, ಮಿಲಿಟರಿ ಹೆಲಿಕಾಪ್ಟರ್ ಮೂಲಕವೂ ಅನೌನ್ಸ್ ಮಾಡುತ್ತಿದೆ. ತುರ್ತು ಸಂದರ್ಭ ಹೊರತುಪಡಿಸಿ ರಸ್ತೆ ಮೇಲೆ ಸಂಚಾರ, ಮನೆಯಿಂದ ಹೊರಗೆ ಬರುವುದನ್ನು ಪೂರ್ತಿ ನಿರ್ಬಂಧಿಸಲಾಗಿದೆ. ಜನತೆ ಮನೆ, ಕಟ್ಟಡಗಳಲ್ಲಿರುವ ಶೆಲ್ಟರ್‌ಗಳಲ್ಲಿ ಇರಬೇಕು. ರಸ್ತೆ ಬದಿಯ ಶೆಲ್ಟರ್‌ಗಳನ್ನೂ ಉಪಯೋಗಿಸಬಹುದು, ಇಲ್ಲವೇ ರಸ್ತೆ ಬದಿಯಲ್ಲೇ ದಾಳಿಯಾದಾಗ ಮಲಗಿ ರಕ್ಷಿಸಿಕೊಳ್ಳಲು ಸಾಧ್ಯವಿದೆ ಎಂದು ಅಲ್ಲಿನ ನಿವಾಸಿಗಳಿಗೆ ಸರ್ಕಾರ ಮಾಹಿತಿ ನೀಡಿದೆ. ಗಾಜಾಪಟ್ಟಿ ಸಮೀಪದ ಲೂದ್, ಅಸ್ಕಿಲೊನ್, ಹಸ್ದೂದು ಪ್ರದೇಶಗಳಲ್ಲಿ ತೀವ್ರ ತರದ ಯುದ್ಧದ ಪರಿಣಾಮ ಇದ್ದು, ಇಲ್ಲಿ ಕೂಡ ಕನ್ನಡಿಗರು ಇದ್ದಾರೆ. ಗಾಜಾಪಟ್ಟಿಯಲ್ಲಿ ಹೆಚ್ಚಾಗಿ ಕೇರಳಿಗರೇ ಇರುವ ಬಗ್ಗೆ ಮಾಹಿತಿ ಇದೆ ಎನ್ನುತ್ತಾರೆ ಗಾಜಾಪಟ್ಟಿಯಿಂದ ಕೇವಲ 22 ಕಿ.ಮೀ. ದೂರದ ಅಷ್ಕಿಲೊನ್‌ನಲ್ಲಿರುವ ಕಾರ್ಕಳ ಬಜಗೋಳಿ ನಿವಾಸಿ ದೇವದಾಸ್ ಶೆಟ್ಟಿ. ಯುದ್ಧಪೀಡಿತ ಸಮೀಪದ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಅಗತ್ಯಕ್ಕೆ ಮಾತ್ರ ಒಂದೆರಡು ಸಾರಿಗೆ ಸಂಚಾರ ಇದೆ. ಉಳಿದಂತೆ ಬೀದಿ ಬಿಕೋ ಎನ್ನುತ್ತಿದೆ. ಎಲ್ಲ ಕಡೆಯೂ ಯುದ್ಧದ ವಾತಾವರಣ ಇದೆ. ಇಸ್ರೇಲ್‌ನ ವಾಹನಗಳನ್ನೂ ಮಿಲಿಟರಿ ಕಟ್ಟುನಿಟ್ಟು ತಪಾಸಣೆ ನಡೆಸುತ್ತಿದೆ. ಪ್ರತಿ ಮನೆಗೂ ಕಡ್ಡಾಯ ಮಿಲಿಟರಿ ಶಿಕ್ಷಣ! ಇಸ್ರೇಲ್ ತನ್ನ ದೇಶ ರಕ್ಷಣೆಗೆ ಎಷ್ಟರ ಮಟ್ಟಿಗೆ ಸ್ವಾಭಿಮಾನಿಯಾಗಿದೆ ಎಂದರೆ, ಅಲ್ಲಿನ ಪ್ರತಿ ಮನೆಯಲ್ಲಿ ಮಿಲಿಟರಿ ಶಿಕ್ಷಣ ಪಡೆದವರಿದ್ದಾರೆ. ಇದನ್ನು ಅಲ್ಲಿನ ಸರ್ಕಾರವೇ ಕಡ್ಡಾಯ ಮಾಡಿದೆ. 18 ವರ್ಷ ಮೇಲ್ವಟ್ಟ ಯುವಕ, ಯುವತಿ ಕಡ್ಡಾಯವಾಗಿ ಮೂರು ವರ್ಷ ಕಾಲ ಮಿಲಿಟರಿ ತರಬೇತಿ ಪಡೆಯುತ್ತಾರೆ. ಗನ್ ಅವರ ಜತೆಯೇ ಇರುತ್ತದೆ. ನಂತರ ಬೇಕಾದರೆ ದೇಶ ಸೇವೆಗೆ ಮಿಲಿಟರಿ ಸೇರಬಹುದು. ಇಲ್ಲದಿದ್ದರೆ ಸರ್ಕಾರ ಹೇಳಿದಾಗ ಯುದ್ಧದಲ್ಲಿ ಭಾಗವಹಿಸಬೇಕಾಗುತ್ತದೆ. ಸದ್ಯ ನಾಗರಿಕರಿಗೆ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಹೇಳಿಲ್ಲ. ರಾತ್ರಿ ಮಲಗುವಾಗಲೂ ಗನ್‌ನ್ನು ಕುತ್ತಿಗೆಯಲ್ಲಿ ಸುತ್ತಿಕೊಂಡೇ ಇರುತ್ತಾರೆ. ಅಷ್ಟರ ಮಟ್ಟಿಗೆ ಮನೆಗಳಲ್ಲಿ ಕಟ್ಟೆಚ್ಚರ ವಹಿಸುತ್ತಾರೆ. ಹಾಗಾಗಿ ಎಂತಹ ದಾಳಿ ನಡೆದರೂ ಇಸ್ರೇಲಿಗರು ಎದೆಗುಂದದೆ ಹಿಮ್ಮೆಟ್ಟಿಸುತ್ತಾರೆ ಎನ್ನುತ್ತಾರೆ ದೇವದಾಸ್ ಶೆಟ್ಟಿ. ಸೋಮವಾರ ಬೆಳಗ್ಗಿನಿಂದ ನಿರಂತರ ರಾಕೆಟ್ ಹೊಡೆದುಹಾಕುವ ಶಬ್ದ ಕೇಳುತ್ತಿದೆ. ನಾನು 12 ವರ್ಷಗಳಿಂದ ಇಸ್ರೇಲ್‌ನಲ್ಲಿ ಇದ್ದೇನೆ. ಪ್ರತಿ ವರ್ಷ ಗಾಜಾಪಟ್ಟಿಯಲ್ಲಿ ಸಣ್ಣಪುಟ್ಟ ಹೋರಾಟ ನಡೆಯುತ್ತಿರುತ್ತದೆ. ಇಂತಹ ಆಕ್ರಮಣ ಇದುವರೆಗೆ ನೋಡಿಲ್ಲ. । ದೇವದಾಸ್ ಶೆಟ್ಟಿ, ಕೇರ್ ಗೀವರ್ಸ್, ಇಸ್ರೇಲ್