ಸಾರಾಂಶ
ಬಳ್ಳಾರಿ: ನಗರ ಹೊರಹೊಲಯದ ಬಾಲಾಜಿ ನಗರ ಕ್ಯಾಂಪ್ ಬಳಿ ನೂತನವಾಗಿ ಕೃಷ್ಣ ಶಿಲೆಯಿಂದ ನಿರ್ಮಿಸಲಾಗಿರುವ ಅಮೃತೇಶ್ವರ ದೇವಸ್ಥಾನದಲ್ಲಿ ಸ್ಫಟಿಕ ಲಿಂಗ ಪ್ರತಿಷ್ಠಾಪನೆ ಮತ್ತು ಕುಂಭಾಭೀಷೇಕ ಕಾರ್ಯಕ್ರಮಕ್ಕೆ ಚಿತ್ರನಟ ರಾಕಿಂಗ್ ಸ್ಟಾರ್ ಯಶ್ ಆಗಮಿಸಿ, ಪೂಜೆ ಸಲ್ಲಿಸಿದರು.
ತೆಲುಗು ಚಿತ್ರ ನಿರ್ಮಾಪಕ ಹಾಗೂ ವಿತರಕ ಕೊರ್ರಪಾಟಿ ರಂಗನಾಥ ಸಾಯಿ ಅವರು ಯಶ್ ಅವರನ್ನು ದೇವಸ್ಥಾನ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಯಶ್ ಸೇರಿದಂತೆ ತೆಲುಗು ಚಿತ್ರರಂಗದ ನಿರ್ದೇಶಕರು, ಹಿನ್ನೆಲೆ ಗಾಯಕರು ಆಗಮಿಸಿದ್ದರು.ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಚಂದ್ರಮೌಳಿ ಹಾಗೂ ಕುಟುಂಬ ಸದಸ್ಯರು, ತೆಲುಗು ಹಿನ್ನೆಲೆ ಗಾಯಕಿ ಮಂಗ್ಲಿ ಅವರು ಪಾಲ್ಗೊಂಡು ದೇವರ ದರ್ಶನ ಪಡೆದರು. ಈ ವೇಳೆ ನಿರ್ಮಾಪಕ ಹಾಗೂ ಡಿಸ್ಟ್ರಿಬ್ಯೂಟರ್ ಕೊರ್ರಪಾಟಿ ರಂಗನಾಥ ಸಾಯಿ, ಕೊರ್ರಪಾಟಿ ರಜಿನಿ, ಸಾಯಿ ಶಿವಾನಿ, ರಾಮಕೃಷ್ಣ, ಸುನೀತಾ ಇದ್ದರು. ಯಶ್ ನೋಡಲು ಸಾವಿರಾರು ಯುವಕರು ದೇವಸ್ಥಾನ ಮುಂಭಾಗದಲ್ಲಿ ಜಮಾಯಿಸಿದ್ದರು. ಯುವಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ದೇವಸ್ಥಾನದಲ್ಲಿ ವಿಶೇಷ ಪೂಜೆ: ಬಾಲಾಜಿ ನಗರ ಕ್ಯಾಂಪ್‌ನಲ್ಲಿ ನೂತನವಾಗಿ ನಿರ್ಮಿಸಿದ ಅಮೃತೇಶ್ವರ ದೇವಸ್ಥಾನದಲ್ಲಿ ಸ್ಫಟಿಕ ಲಿಂಗ ಪ್ರತಿಷ್ಠಾಪನೆ ನಿಮಿತ್ತ ಬೆಳಗ್ಗೆಯಿಂದ ದೇವಸ್ಥಾನದಲ್ಲಿ ರುದ್ರ ಪಾರಾಯಣ, ಮಹಾಮಂಗಳಾರತಿ, ರುದ್ರಕ್ರಮಾರ್ಚಣೆ, ಅಷ್ಟಾವಧಾನ ಸೇವೆ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಫೆ. 25ರಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಗೋಪೂಜೆ, ಗಂಗೆಪೂಜೆ, ಯಾಗಶಾಲಾ ಪ್ರವೇಶ, ಗುರುದೇವತಾ ಪ್ರಾರ್ಥನೆ, ದೇವಾನಂದಿ ಮಹಾಸಂಕಲ್ಪ, ಮಹಾಕುಂಭಾಭಿಷೇಕ, ಮಹಾರುದ್ರಯಾಗ ಸೇರಿದಂತೆ ನಾನಾ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು.₹14 ಕೋಟಿ ವೆಚ್ಚ: ದೇವಸ್ಥಾನವನ್ನು ₹14 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ₹1 ಕೋಟಿ ವೆಚ್ಚದ ಎರಡೂವರೆ ಅಡಿ ಎತ್ತರದ ಸ್ಫಟಿಕದ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಶಿವನ ದೇವಾಲಯದ ಎಡ ಮತ್ತು ಬಲಭಾಗದಲ್ಲಿ ಗಣಪತಿ ಹಾಗೂ ಪಾರ್ವತಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈಶಾನ್ಯದಲ್ಲಿ ನವಗ್ರಹ ಸ್ಥಾಪಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ 32 ಅಡಿ ಎತ್ತರದ ಏಕಶಿಲಾ ಆಂಜಿನೇಯಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ದೇವಾಲಯಕ್ಕೆ ವಿಶೇಷ ಕಳೆ ತಂದುಕೊಟ್ಟಿದೆ.
ಸಂಪೂರ್ಣ ಕಲ್ಲು ಹಾಗೂ ಕೃಷ್ಣಶಿಲೆಯಿಂದ ದೇವಸ್ಥಾನ ನಿರ್ಮಿಸಲಾಗಿದೆ. ದೇವಸ್ಥಾನದ ಸುತ್ತ 12 ಜ್ಯೋತಿರ್ಲಿಂಗಗಳನ್ನು ಕೆತ್ತನೆ ಮಾಡಲಾಗಿದೆ. ದೇವಾಲಯ ಪಕ್ಕದಲ್ಲಿ ಕೆರೆಯೊಂದನ್ನು ನಿರ್ಮಿಸಲಾಗಿದ್ದು, ತೆಪ್ಪೋತ್ಸವ, ಕಡೆ ಕಾರ್ತೀಕೋತ್ಸವ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಪೂಜಾ ವಿಧಿ ವಿಧಾನಗಳಿಗೆ ಕೆರೆಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಕೊರ್ರಪಾಟಿ ರಂಗನಾಥ ಸಾಯಿ ನನಗೆ ಆತ್ಮೀಯ: ಯಶ್ಕೊರ್ರಪಾಟಿ ರಂಗನಾಥ ಸಾಯಿ ಅವರು ನನಗೆ ಆತ್ಮೀಯರು. ಹೀಗಾಗಿ ಬಾಲಾಜಿ ಕ್ಯಾಂಪ್‌ಗೆ ಆಗಮಿಸಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದೇನೆ ಎಂದು ರಾಕಿಂಗ್ ಸ್ಟಾರ್ ಯಶ್ ತಿಳಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕೊರ್ರಪಾಟಿ ರಂಗನಾಥ ಸಾಯಿ ಅವರು ಕೆಜಿಎಫ್ ಚಿತ್ರದ ಹಂಚಿಕೆ ಮಾಡಿದ್ದರು. ಕೆಜಿಎಫ್ ಯಶಸ್ಸಿನಲ್ಲಿ ಸಾಯಿ ಅವರ ಪಾತ್ರವೂ ಇದೆ. ದೇವಸ್ಥಾನ ಕಟ್ಟುವ ಮುಂಚೆಯೇ ನನಗೆ ಹೇಳಿದ್ದರು. ತಪ್ಪದೆ ಬರುತ್ತೇನೆ ಎಂದು ಹೇಳಿದ್ದೆ. ಹೀಗಾಗಿಯೇ ಬಂದೆ ಎಂದರು.ಇತ್ತೀಚೆಗೆ ಬೆಂಗಳೂರಿನ ಅಂಗಡಿಯೊಂದರಲ್ಲಿ ತಮ್ಮ ಮಕ್ಕಳಿಗೆ ತಿಂಡಿ ಕೊಡಿಸಿದ ಫೋಟೊ ವೈರಲ್ ಆಗಿರುವ ಕುರಿತು ಪ್ರತಿಕ್ರಿಯಿಸಿದ ಯಶ್ ಅವರು, ನಾನು ಅದೇ ಅಂಗಡಿಗೆ ಹತ್ತು ಹನ್ನೆರಡು ವರ್ಷದಿಂದ ಹೋಗುತ್ತಿದ್ದೇನೆ. ಈಗ ಪೋಟೊ ಆಚೆ ಬಂದಿದೆ ಅಷ್ಟೇ. ರಾಜಕೀಯ ನನಗೆ ಇಷ್ಟ ಇಲ್ಲ ಎಂದರು.ಯಶ್ ಬೆಂಗಾವಲು ಪಡೆ ಕಾರು ಹರಿದು ಅಭಿಮಾನಿಗೆ ಗಾಯ
ಬಳ್ಳಾರಿ: ರಾಕಿಂಗ್ ಸ್ಟಾರ್ ಯಶ್ ಬೆಂಗಾವಲು ಪಡೆಯ ಕಾರು ಹರಿದು ಅಭಿಮಾನಿಯೋರ್ವ ಗಾಯಗೊಂಡ ಘಟನೆ ನಗರ ಹೊರವಲಯದ ಬಾಲಾಜಿ ಕ್ಯಾಂಪ್‌ನಲ್ಲಿ ಗುರುವಾರ ನಡೆದಿದೆ.ಸಿರುಗುಪ್ಪದ ಪಿಯುಸಿ ವಿದ್ಯಾರ್ಥಿ ಉಮೇಶ್ ಎಂಬ ಯುವಕನ ಪಾದದ ಮೇಲೆ ಕಾಲಿನ ಗಾಲಿ ಹರಿದಿದ್ದರಿಂದ ತೀವ್ರ ಗಾಯವಾಗಿದ್ದು, ವಿಮ್ಸ್ ಟ್ರಾಮಾಕೇರ್ ಸೆಂಟರ್‌ನಲ್ಲಿ ದಾಖಲು ಮಾಡಲಾಗಿದೆ.ಆಂಧ್ರಪ್ರದೇಶದ ಸಿನಿಮಾ ನಿರ್ಮಾಪಕ ಕೊರ್ರಪಾಟಿ ರಂಗನಾಥ ಸಾಯಿ ಅವರು ನಿರ್ಮಿಸಿರುವ ಅಮೃತೇಶ್ವರ ಸ್ಫಟಿಕಲಿಂಗ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಯಶ್ ಆಗಮಿಸಿದ್ದರು. ಯಶ್ ಅವರನ್ನು ನೋಡಲು ಸಾವಿರಾರು ಯುವಕರು ಜಮಾಯಿಸಿದ್ದರು.ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಯಶ್ ತೆರಳುವ ವೇಳೆ ಅನೇಕ ಯುವಕರು ಕಾರನ್ನು ಹಿಂಬಾಲಿಸಿದ್ದಾರೆ. ಇದೇ ವೇಳೆ ಯಶ್ ಬೆಂಗಾವಲು ಪಡೆಯ ಕಾರು ಉಮೇಶ್‌ನ ಪಾದದ ಮೇಲೆ ಹರಿದಿದೆ.