ರೋಹಿಣಿ, ಮೃಗಶಿರಾ ಮಳೆಗೆ ಒಡೆದು ಹೋದ ಜಮೀನ ಬದು

| Published : Jun 10 2024, 12:45 AM IST

ಸಾರಾಂಶ

ನರಗುಂದ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ರೋಹಿಣಿ ಮತ್ತು ಮೃಗಶಿರಾ ಮಳೆಗಳು ಉತ್ತಮವಾಗಿ ಸುರಿಯುತ್ತಿದ್ದು, ಅನ್ನದಾತರೆಗೆ ಹೊಸ ಹುಮ್ಮಸ್ಸು ತಂದಿದೆ.

ಎಸ್.ಜಿ. ತೆಗ್ಗಿನಮನಿ.

ಕನ್ನಡಪ್ರಭ ವಾರ್ತೆ ನರಗುಂದ

ಜಮೀನುಗಳ ರಕ್ಷಣೆಗೆಂದು ನಿರ್ಮಿಸಿದ ಬದುಗಳು ರೋಹಿಣಿ, ಮೃಗಶಿರಾ ಮಳೆ ಅಬ್ಬರಕ್ಕೆ ಒಡೆದಿದ್ದು, ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿ ಅಪಾರ ಪ್ರಮಾಣದ ಹಾನಿಯಾಗಿದೆ.

ತಾಲೂಕಿನಲ್ಲಿ ಪ್ರಸಕ್ತ ವರ್ಷ ಮುಂಗಾರು ಮಳೆ ತಡವಾಗಿ ಪ್ರಾರಂಭವಾದರೂ ಕಳೆದೊಂದು ವಾರದಿಂದ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ರೋಹಿಣಿ ಮತ್ತು ಮೃಗಶಿರಾ ಮಳೆಗಳು ಉತ್ತಮವಾಗಿ ಸುರಿಯುತ್ತಿದ್ದು, ಅನ್ನದಾತರೆಗೆ ಹೊಸ ಹುಮ್ಮಸ್ಸು ತಂದಿದೆ ಎಂದು ಹೇಳಬಹುದು.ರೋಹಿಣಿ ಮಳೆ ನಂತರ ಎರಡು ದಿನಗಳಿಂದ ಮೃಗಶಿರಾ ಮಳೆ ಉತ್ತಮವಾಗಿ ಆಗುತ್ತಿದೆ. ತಾಲೂಕಿನಲ್ಲಿ ಶನಿವಾರ ಸಂಜೆ ಸತತ ಎರಡು ಗಂಟೆ ಅಬ್ಬರದ ಮಳೆ ಆಗಿದ್ದರಿಂದ ರೈತರ ಜಮೀನುಗಳು ಕೆರೆಯಂತಾಗಿವೆ.

ಒಡೆದ ಬದುಗಳು

ಹಿಂದಿನ ವರ್ಷ ಮಳೆಯಿಲ್ಲದೆ ರೈತ ಸಮುದಾಯ ಸಾಕಷ್ಟು ತೊಂದರೆಗೆ ಸಿಲುಕಿತ್ತು. ಕಳೆದ ಕೆಲ ದಿನಗಳಿಂದ ಉತ್ತಮ ಮಳೆ ಬೀಳುತ್ತಿದ್ದು, ಅನ್ನದಾತರಿಗೆ ಒಂದ ಕಡೆ ಸಂತೋಷವಾದರೆ ಮತ್ತೊಂದೆಡೆ ಮಳೆ ಅವಾಂತರ ಸೃಷ್ಟಿಸಿ ಸಂಕಷ್ಟ ತಂದಿದೆ. ಲಕ್ಷಾಂತರ ಹಣ ಖರ್ಚು ಮಾಡಿ ನಾಲ್ಕು ದಿಕ್ಕುಗಳಲ್ಲಿ ಬದು(ಒಡ್ಡು) ನಿರ್ಮಿಸಿದ್ದರು. ಆದರೆ, ರೋಹಿಣಿ ಮತ್ತು ಮೃಗಶಿರಾ ಮಳೆ ವಾಡಿಕೆಗಿಂತ ಹೆಚ್ಚು ಸುರಿಯುತ್ತಿರುವುದರಿಂದ ಬದುಗಳಿಗೆ ಹಾನಿಯಾಗಿ ಜಮೀನುಗಳ ಫಲವತ್ತಾದ ಮಣ್ಣು ಕೊಚ್ಚಿಕೊಂಡಿದೆ.

ಸಂಕಷ್ಟಮಣ್ಣು ರಕ್ಷಣೆಗೆ ನಿರ್ಮಿಸಿದ ಬದುಗಳು ನಿರಂತರ ಮಳೆಗೆ ಕಿತ್ತುಕೊಂಡು ಹೋಗಿ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ಜಮೀನುಗಳು ಶಕ್ತಿ ಕಳೆದುಕೊಳ್ಳುತ್ತಿವೆ. ಇದು ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ.

ಅಣ್ಣಪ್ಪಗೌಡ ಪಾಟೀಲ, ಮೂಗನೂರ ಗ್ರಾಮದ ರೈತರು.