ರೋಜಗಾರ ಮೇಳದಿಂದ 10 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳಿಗೆ ಉದ್ಯೋಗ

| Published : Oct 25 2025, 01:00 AM IST

ಸಾರಾಂಶ

ದೇಶಾದ್ಯಂತ 17ನೇ ರೋಜಗಾರ ಮೇಳವನ್ನು ಹುಬ್ಬಳ್ಳಿ, ಬೆಂಗಳೂರು, ಮೈಸೂರು ಸೇರಿದಂತೆ ದೇಶದ 40 ಸ್ಥಳಗಳಲ್ಲಿ ಆಯೋಜಿಸಿದ್ದು, ಒಟ್ಟು 51 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗದ ನೇಮಕಾತಿ ಪತ್ರ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ:

ಕಳೆದ ಐದಾರು ವರ್ಷಗಳಲ್ಲಿ ರೋಜಗಾರ ಮೇಳದ ಮೂಲಕ 10 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳಿಗೆ ಉದ್ಯೋಗ ಕಲ್ಪಿಸಿಕೊಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ನೀಡಿದ ಆಶ್ವಾಸನೆ ಈಡೇರಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಅವರು ಇಲ್ಲಿನ ವಿದ್ಯಾನಗರದಲ್ಲಿರುವ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಆಡಿಟೋರಿಯಂ ಸಭಾಂಗಣದಲ್ಲಿ ಶುಕ್ರವಾರ ಭಾರತೀಯ ಅಂಚೆ ಇಲಾಖೆಯು ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ರೋಜಗಾರ ಮೇಳ ಉದ್ಘಾಟಿಸಿ ಮಾತನಾಡಿದರು.

ದೇಶಾದ್ಯಂತ 17ನೇ ರೋಜಗಾರ ಮೇಳವನ್ನು ಹುಬ್ಬಳ್ಳಿ, ಬೆಂಗಳೂರು, ಮೈಸೂರು ಸೇರಿದಂತೆ ದೇಶದ 40 ಸ್ಥಳಗಳಲ್ಲಿ ಆಯೋಜಿಸಿದ್ದು, ಒಟ್ಟು 51 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗದ ನೇಮಕಾತಿ ಪತ್ರ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ಮೇಲೆ ಏನು ಮಾಡಿದ್ದಾರೆ ಎಂದು ಕೇಳುವ ಪ್ರತಿಪಕ್ಷದ ನಾಯಕರಿಗೆ ಈ ಮೇಳ ಉತ್ತರ ನೀಡಿದೆ ಎಂದರು.

ಯುವಕರು ತಮ್ಮ ಸಾಮರ್ಥ್ಯ, ಶ್ರಮ ಹಾಗೂ ನಿಷ್ಠೆಯಿಂದ ದೇಶದ ಅಭಿವೃದ್ಧಿಗೆ ಪಾತ್ರರಾಗಬೇಕು. ಸರ್ಕಾರವು ಎಲ್ಲ ಕ್ಷೇತ್ರಗಳಲ್ಲಿ ಪಾರದರ್ಶಕತೆ ಹಾಗೂ ಭ್ರಷ್ಟಾಚಾರ ರಹಿತ ವ್ಯವಸ್ಥೆ ತರಲು ಬದ್ಧವಾಗಿದೆ. ಸರ್ಕಾರಿ ಉದ್ಯೋಗಗಳ ಭರ್ತಿ ಪ್ರಕ್ರಿಯೆಯು ಸಂಪೂರ್ಣವಾಗಿ ನ್ಯಾಯಸಮ್ಮತವಾಗಿದ್ದು, ಅರ್ಹತೆಯ ಆಧಾರದಲ್ಲೇ ನೇಮಕಾತಿ ನಡೆಯುತ್ತಿದೆ ಎಂದು ಜೋಶಿ ಹೇಳಿದರು.

ನಾಗರಿಕರ ವಿಶ್ವಾಸ ಗೆಲ್ಲಿರಿ:

ಯುವಜನತೆಗೆ ಉದ್ಯೋಗಗಳ ಕೊರತೆ ಇಲ್ಲ. ಆದರೆ, ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಜವಾಬ್ದಾರಿ ಯುವಸಮುದಾಯದ ಮೇಲಿದೆ. ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ಯುವಜನತೆಯು ತಂತ್ರಜ್ಞಾನ, ವಿಜ್ಞಾನ ಹಾಗೂ ನವೀನ ಆವಿಷ್ಕಾರಗಳಲ್ಲಿ ತೊಡಗಿಸಿಕೋಳ್ಳಬೇಕು. ಇದೇ ಹೊಸ ಭಾರತದ ಶಕ್ತಿ. ಸರ್ಕಾರಿ ಕೆಲಸ ದೇವರ ಕೆಲಸ ಎಂಬ ನುಡಿಗೆ ಅರ್ಥ ಬರಬೇಕಾದರೆ ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ತೊಡಗಿಸಿಕೊಳ್ಳಬೇಕು. ನಾಗರಿಕರ ವಿಶ್ವಾಸವನ್ನು ಗೆಲ್ಲುವ ಕಾರ್ಯವೇ ನಿಜವಾದ ದೇಶಸೇವೆ ಎಂದರು.

ಅಭಿವೃದ್ಧಿಗೆ ಕೈಜೋಡಿಸಿ:

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ವಿದ್ಯಾರ್ಥಿಗಳು ಶ್ರಮವಹಿಸಿ ಅಭ್ಯಸಿಸಿ ಉತ್ತಮ ಅಂಕ ಪಡೆದ ಫಲವಾಗಿ ಇಂದು ನೇರವಾಗಿ ಉದ್ಯೋಗ ಪತ್ರ ಪಡೆಯುತ್ತಿದ್ದೀರಿ. ನೀವು ಸರ್ಕಾರಿ ನೌಕರರಾದ ಬಳಿಕ ಭ್ರಷ್ಟಾಚಾರ ರಹಿತ ಸೇವೆ ನೀಡಲು ಬದ್ಧರಾಗುವ ಮೂಲಕ ದೇಶದ ಅಭಿವೃದ್ಧಿಗೆ ನೀವು ಕೈಜೋಡಿಸುವಂತೆ ಮನವಿ ಮಾಡಿದರು.

ಈ ವೇಳೆ ಭಾರತೀಯ ಅಂಚೆ ಇಲಾಖೆಯ ನಿರ್ದೇಶಕಿ ವಿ. ತಾರಾ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ನೇಮಕಾತಿ ಆದೇಶ ಪತ್ರ ವಿತರಣೆ

ಅಂಚೆ ಇಲಾಖೆ 42, ರೈಲ್ವೆ ಇಲಾಖೆ 14, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 5, ಸಿಆರ್‌ಪಿಎಫ್‌ನ ನಾಲ್ವರು ಸೇರಿ ಧಾರವಾಡ ಜಿಲ್ಲೆಯಲ್ಲಿ 65 ಜನ ಹೊಸ ಉದ್ಯೋಗಿಗಳಿಗೆ ನೇಮಕಾತಿ ಆದೇಶ ಪತ್ರವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿತರಿಸಿದರು.