ದೇಶಾಭಿವೃದ್ಧಿಗೆ ಸಹಕಾರ ಸಂಘಗಳ ಪಾತ್ರ ಅಪಾರ: ಶಾಸಕ ಸಿದ್ದು ಸವದಿ

| Published : Nov 18 2024, 12:16 AM IST

ದೇಶಾಭಿವೃದ್ಧಿಗೆ ಸಹಕಾರ ಸಂಘಗಳ ಪಾತ್ರ ಅಪಾರ: ಶಾಸಕ ಸಿದ್ದು ಸವದಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಲಿಂಗಪುರದ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಜರುಗಿದ ತಾಲೂಕು ಮಟ್ಟದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಯಾವುದೇ ದೇಶದ ಪ್ರಗತಿಗೆ ಸಹಕಾರಿ ಸಂಘಗಳ ಕೊಡುಗೆ ಅವಶ್ಯವಾಗಿದೆ. ಭಾರತದಂತ ಜನಸಂಖ್ಯೆಯುಳ್ಳ ದೇಶಕ್ಕೆ ಪೂರ್ವಜರ ಕೊಡುಗೆ ದೊಡ್ಡದಿದೆ. ತಮ್ಮ ತಮ್ಮಲ್ಲಿ ಸಹಕಾರ ವೃದ್ಧಿಸಿಕೊಂಡು ಮಾದರಿ ಜೀವನ ನೆಡೆಸಿದ್ದು ಇಂದು ಜಗತ್ತಿಗೆ ಮಾದರಿ ಸಹಕಾರಿ ತತ್ವಕ್ಕೆ ಕಾರಣವಾಗಿದೆ. ಮನುಷ್ಯ ಅಭಿವೃದ್ಧಿ ಹೊಂದಬೇಕಾದರೆ ಪರಸ್ಪರ ಸಹಕಾರ ಮುಖ್ಯ. ಹಾಗೇ ದೇಶದ ಸಮಗ್ರ ಅಭಿವೃದ್ಧಿಗೆ ಸಹಕಾರಿ ಸಂಘಗಳ ಪಾತ್ರ ಬಹಳ ದೊಡ್ಡದಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

ಸ್ಥಳೀಯ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್‌ ಬಾಗಲಕೋಟೆ, ಮಹಾಲಿಂಗಪುರ ಅರ್ಬನ್‌ ಕೋ ಆಫ್ ಬ್ಯಾಂಕ್, ಪಿಕೆಪಿಎಸ್ ಮಹಾಲಿಂಗಪುರ, ಕನಕದಾಸ ಪತ್ತಿನ ಸಹಕಾರಿ ಸಂಘ, ಶಿವಲಿಂಗೇಶ್ವರ ಅರ್ಬನ್‌ ಕೋ ಆಫ್ ಲಿ. ಸೈದಾಪುರ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿ, ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ ಧ್ಯೇಯ ವಾಕ್ಯದಲ್ಲಿ ಈ ವರ್ಷ ಸಹಕಾರಿ ಸಪ್ತಾಹ ಆಚರಿಸಲಾಗುತ್ತಿದೆ. ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಕೃಷಿ ಪತ್ತಿನ ಸಹಕಾರ ಕ್ಷೇತ್ರಕ್ಕೆ ಬುನಾದಿ ಹಾಕಿದ್ದು. 1904ರಲ್ಲಿ ಗದಗ ಜಿಲ್ಲೆಯ ಕನಗಿನಹಾಳ ಗ್ರಾಮದ ಸಣ್ಣರಾಮನಗೌಡ ಸಿದ್ದರಾಮನಗೌಡ ಪಾಟೀಲ ಅವರು, ಅಂದು ಗ್ರಾಮದಲ್ಲಿನ ಕೆಲ ಸಮಾನ ಮನಸ್ಕ ರೈತರನ್ನು ಒಗ್ಗೂಡಿಸಿ ದೇಶದ ಮೊದಲ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಿದರು ಎಂದರು.

ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದ ಕೆಎಲ್‌ಇ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ಶಿವಲಿಂಗ ಸಿದ್ನಾಳ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನದಲ್ಲಿದ್ದು ಉತ್ತಮ ಅಭಿವೃದ್ಧಿ ಸಾಧಿಸಿದೆ. ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಹೆಚ್ಚಿನ ಪ್ರಗತಿಗೆ ಸಹಕರಿಸಬೇಕು.

ರಾಜ್ಯದ ಸಹಕಾರ ಮಹಾಮಂಡಳವು ರೈತರ ಅಭಿವೃದ್ಧಿಗಾಗಿ ಈ ವರ್ಷ 36 ಲಕ್ಷ ರೈತರಿಗೆ 27 ಸಾವಿರ ಕೋಟಿ ರುಪಾಯಿ ಬೆಳೆ ಸಾಲ ವಿತರಿಸುವ ಗುರಿ ಹೊಂದಿದೆ. ಸಹಕಾರ ಸಂಸ್ಥೆಗಳ ಸದಸ್ಯರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ 41 ಲಕ್ಷ ಸದಸ್ಯರು ನೊಂದಣಿಯಾಗುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ 47 ಸಾವಿರ ಸಹಕಾರ ಸಂಸ್ಥೆಗಳು ಕ್ರಿಯಾಶೀಲ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, 2 ಕೋಟಿ 72 ಲಕ್ಷ ಸದಸ್ಯರಿದ್ದಾರೆ. ದೇಶದಲ್ಲಿ ಸಹಕಾರ ಸಂಘ ಸಂಸ್ಥೆಗಳಲ್ಲಿ ಒಟ್ಟು 30 ಕೋಟಿ ಸದಸ್ಯರಿದ್ದಾರೆ. ಇದು ವಿಶ್ವದ ಅತೀ ದೊಡ್ಡ ಸಹಕಾರ ಕ್ಷೇತ್ರವಾಗಿದೆ.

ಹೈನುಗಾರಿಕೆ ಕೃಷಿ ಪತ್ತಿನ ಸಹಕಾರ ವ್ಯವಸ್ಥೆ, ಪಟ್ಟಣ ಸಹಕಾರ ಬ್ಯಾಂಕುಗಳು, ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಅತ್ಯುತ್ತಮ ಸೇವೆ ಸಲ್ಲಿಸುತ್ತಿವೆ. ಇದರಿಂದ ಉದ್ಯೋಗ ಸೃಷ್ಟಿಯಾಗಿ ರಾಷ್ಟ್ರದ ಜಿಡಿಪಿ ಹೆಚ್ಚಿಸುವ ಪ್ರಮುಖ ಪಾತ್ರ ವಹಿಸುತ್ತಿವೆ. ಮುಂದಿನ 2047ರ ಹೊತ್ತಿಗೆ ಭಾರತ 30 ಟ್ರಿಲಿಯನ್‌ ಅಂದರೆ (ಮೂವತ್ತು ಲಕ್ಷ ಕೋಟಿ )ಆರ್ಥಿಕತೆ ಹೊಂದಿ ವಿಶ್ವದ ಸುಪರ ಪವರ್‌ ದೇಶವಾಗಿ ಹೊರ ಹೊಮ್ಮುವ ಗುರಿ ಹೊಂದಿದೆ. ಇದನ್ನು ಸಾಧಿಸಲು ಸಹಕಾರ ಕ್ಷೇತ್ರದ ಕೊಡುಗೆ ಬಹು ದೊಡ್ಡದಿದೆ ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ ಸಹಜಾನಂದ ಮಹಾಸ್ವಾಮೀಜಿ ಹಾಗೂ ವೇದಿಕೆ ಮೇಲಿರುವ ಎಲ್ಲ ಗಣ್ಯ ಮಾನ್ಯರು ಸಹಕಾರ ಪಿತಾಮಹ ಶ್ರೀ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲರ ಭಾವಚಿತ್ರಕ್ಕೆ ಪುಷ್ಟಾರ್ಪಣೆ ಮಾಡಿದರು.

ನಗರದ ಸಿದ್ದಾರೂಢ ಮಠದ ಪ.ಪೂ.ಷ.ಬ್ರ.ಶ್ರೀ ಸಹಜಾನಂದ ಮಹಾಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಜೀವಕ್ಕೆ ಗಾಳಿ ಎಷ್ಟು ಮುಖ್ಯವೋ ಬದುಕಿಗೆ ಸಹಕಾರ ಅಷ್ಟೇ ಮುಖ್ಯ. ಗಾಳಿ ಇಲ್ಲದಿದ್ದರೆ ಜೀವ ಹೋಗುತ್ತದೆ. ಸಹಕಾರ ಇಲ್ಲದಿದ್ದರೆ ಬದುಕು ನಿಲ್ಲುತ್ತದೆ. ಸಹಕಾರವೇ ಜೀವನ ಸೂತ್ರವಾದರೆ ಬದುಕು ಸ್ವರ್ಗಮಾಯವಾಗುತ್ತದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಬಾಗಲಕೋಟೆ ಜಿಲ್ಲಾ ಸಹಕಾರ ಯೂನಿಯನ್‌ ಉಪಾಧ್ಯಕ್ಷ ರಾಮಗೊಂಡ ಎಸ್.ಮಿರ್ಜಿ.ಸಪ್ತವರ್ಣದ ಸಹಕಾರ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ರಂಗಣ್ಣಗೌಡ ಪಾಟೀಲ, ಲಕ್ಕಪ್ಪ ಪಾಟೀಲ, ರಾಮನಗೌಡ ಪಾಟೀಲ ಮಾತನಾಡಿದರು. ಯಲ್ಲಣ್ಣಗೌಡ ಪಾಟೀಲ, ಶೇಖರ ಅಂಗಡಿ, ಮಹಾಲಿಂಗಪ್ಪಾ ಜಕ್ಕಣ್ಣವರ, ಜಿ.ಎಸ್.ಗೊಂಬಿ, ಮಾಲಾ ಬಾವಲತ್ತಿ, ಚಂದ್ರಶೇಖರ ಆದಬಸಪ್ಪಗೋಳ, ಮಲ್ಲಿಕಾರ್ಜುನ್ ಹುಂಡೇಕಾರ, ಸುರೇಶ ಹಾದಿಮನಿ, ಈರಯ್ಯ ಹಿರೇಮಠ, ವಿಜಯಲಕ್ಷ್ಮಿ ಪಾಟೀಲ, ಮಹಾಲಿಂಗ ನಾಯಕ ಚಿನ್ನಪ್ಪ ಬಾಯಪ್ಪಗೋಳ, ಜಯಶ್ರೀ ಸವದಿ, ಶ್ರೀನಿವಾಸ ಸಾರವಾಡ, ಎಂ.ಎಂ.ಮರನೂರ ಈರಪ್ಪ ಡಿನ್ನಮನಿ ಸೇರಿ ಹಲವರು ವೇದಿಕೆಯಲ್ಲಿ ಇದ್ದರು.

ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ತಾಲೂಕಿನ ಎಲ್ಲ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಸದಸ್ಯರು ಸಿಬ್ಬಂದಿ ಭಾಗವಹಿಸಿದ್ದರು. ಹಲವು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿಂಗರಾಜ ಗುಡಿ ನಿರೂಪಿಸಿ, ವಂದಿಸಿದರು.