ಸಮಾಜದ ಅಭಿವೃದ್ಧಿಗೆ ಶಿಕ್ಷಣದ ಪಾತ್ರ ಬಹುಮುಖ್ಯ: ದಿನಕರ ಶೆಟ್ಟಿ

| Published : Jun 12 2024, 12:36 AM IST

ಸಮಾಜದ ಅಭಿವೃದ್ಧಿಗೆ ಶಿಕ್ಷಣದ ಪಾತ್ರ ಬಹುಮುಖ್ಯ: ದಿನಕರ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕ ಸಮಾಜವಾದ ಗಾಣಿಗ ಸಮಾಜದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಳೆದ 24 ವರ್ಷದಿಂದ ಪ್ರತಿಭಾ ಪುರಸ್ಕಾರದ ಮೂಲಕ ಪ್ರೋತ್ಸಾಹಿಸುವ ಕಾರ್ಯಕ್ರಮ ಯಶಸ್ವಿಯಾಗಿ ಮಾಡುತ್ತಾ ಬಂದಿರುವುದು ಪ್ರಶಂಸಾರ್ಹವಾಗಿದೆ.

ಹೊನ್ನಾವರ: ಸುಶಿಕ್ಷಿತ ಸಮಾಜದ ಅಭಿವೃದ್ದಿಗೆ ಶಿಕ್ಷಣವು ಪ್ರಮುಖ ಪಾತ್ರ ವಹಿಸಲಿದ್ದು, ಪಾಲಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವಂತೆ ಶಾಸಕ ದಿನಕರ ಶೆಟ್ಟಿ ಸಲಹೆ ನೀಡಿದರು.

ಬಾಳೆಗದ್ದೆಯ ವೆಂಕ್ರಟಮಣ ಸಭಾಭವನದಲ್ಲಿ ಜರುಗಿದ ಶ್ರೀನಿಧಿ ಸೇವಾವಾಹಿನಿ ತಾಲೂಕು ಗಾಣಿಗ ಸಮಾಜ ಸೇವಾ ಸಂಘದ ಪ್ರತಿಭಾ ಪುರಸ್ಕಾರ, ನೋಟ್‌ಬುಕ್ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚಿಕ್ಕ ಸಮಾಜವಾದ ಗಾಣಿಗ ಸಮಾಜದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಳೆದ 24 ವರ್ಷದಿಂದ ಪ್ರತಿಭಾ ಪುರಸ್ಕಾರದ ಮೂಲಕ ಪ್ರೋತ್ಸಾಹಿಸುವ ಕಾರ್ಯಕ್ರಮ ಯಶಸ್ವಿಯಾಗಿ ಮಾಡುತ್ತಾ ಬಂದಿರುವುದು ಪ್ರಶಂಸಾರ್ಹವಾಗಿದೆ. ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ನೋಟ್‌ಬುಕ್ ವಿತರಣೆ ಕಾರ್ಯಕ್ರಮವು ಇತರರಿಗೂ ಮಾದರಿಯಾಗಿದೆ ಎಂದರು.

ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಮಾತನಾಡಿ, ಸಮಾಜವು ಕಳೆದ ಹಲವು ವರ್ಷದಿಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹ ನೀಡುತ್ತಾ ಸಮಾಜದ ಸಾಧಕರನ್ನು ಪರಿಚಯಿಸುವ ಕಾರ್ಯ ಮಾಡುತ್ತಿದೆ. ಮಕ್ಕಳಿಗೆ ಮೊಬೈಲ್ ನೀಡುವ ಕೆಲಸ ಪಾಲಕರು ಮಾಡುತ್ತಿದ್ದಾರೆ. ಮೊಬೈಲ್ ಬದಲು ಪುಸ್ತಕ ನೀಡುವ ಕೆಲಸವಾಗಬೇಕಿದೆ ಎಂದರು.

ನಿವೃತ್ತ ಸೈನಿಕ ಸುಬ್ರಹ್ಮಣ್ಯ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. 85ಕ್ಕಿಂತ ಅಧಿಕ ಅಂಕ ಪಡೆದ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಸಿಗ್ರೋಡ್ ಸರ್ಕಾರಿ ಪ್ರೌಡಶಾಲೆಯ ಮುಖ್ಯಾಧ್ಯಾಪಕ ಶಂಕರ ಶೆಟ್ಟಿ ಮಾತನಾಡಿ, ಶ್ರೀನಿಧಿ ಸಂಘದವರು 24 ವರ್ಷದ ಕಾರ್ಯಕ್ರಮದಲ್ಲಿ ತಾಲೂಕಿನ 23 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 25 ವರ್ಷಕ್ಕೆ 40ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಸನ್ಮಾನ ಪಡೆಯುವಂತಾಗಲಿ. ಸಂಘದಿಂದ ಸಹಾಯ ಪಡೆದ ವಿದ್ಯಾರ್ಥಿಗಳು ಉದ್ಯೋಗಕ್ಕೆ ಸೇರಿದಾಗ ಸಹಕಾರ ನೀಡುವ ಗುಣ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀನಿಧಿ ಸೇವಾ ವಾಹಿನಿ ಅಧ್ಯಕ್ಷ ಕೇಶವ ಶೆಟ್ಟಿ ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ ಶೆಟ್ಟಿ, ಉದ್ದಿಮೆದಾರರಾದ ದೇವದಾಸ ಶೆಟ್ಟಿ, ವಿದ್ಯುತ್ ಗುತ್ತಿಗೆದಾರರಾದ ಎಸ್.ಕೆ. ಶೆಟ್ಟಿ, ಸಂಘದ ಉಪಾಧ್ಯಕ್ಷ ಸಂದೇಶ ಶೆಟ್ಟಿ ಇದ್ದರು. ಮಂಜುನಾಥ ಶೆಟ್ಟಿ ಸ್ವಾಗತಿಸಿ, ಜಿ.ಆರ್. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಮಹೇಶ ಶೆಟ್ಟಿ ವರದಿ ವಾಚಿಸಿದರು.