ಸಾರಾಂಶ
ಹೂವಿನಹಡಗಲಿ: ಭಾರತವನ್ನು ಬ್ರಿಟಿಷರಿಂದ ಮುಕ್ತ ಮಾಡಲು ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ ಮಹತ್ವದಾಗಿದೆ ಎಂದು, ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಟಿ. ಅಕ್ಷತಾ ಹೇಳಿದರು.
ಇಲ್ಲಿನ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಭಾಂಗಣದಲ್ಲಿ ಜರುಗಿದ, ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಸ್ವಾತಂತ್ರ್ಯ ಹೋರಾಟದಲ್ಲಿ ಶೇ. 70ರಷ್ಟು ವಕೀಲರು ಭಾಗವಹಿಸುವ ಜತೆಗೆ, ಬ್ರಿಟಿಷರು ರಚಿಸುತ್ತಿದ್ದ ಕಾನೂನುಗಳ ಜ್ಞಾನವನ್ನು ಪಡೆದುಕೊಂಡು, ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಹೋರಾಟಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.ದೇಶದ ಪ್ರಥಮ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರೂ ವಕೀಲರಾಗಿದ್ದರು. ಅವರ ಜನ್ಮ ದಿನಾಚರಣೆ ಅಂಗವಾಗಿ ವಕೀಲರ ದಿನ ಆಚರಿಸುತ್ತ ಬಂದಿದ್ದೇವೆ. ಅನೇಕ ವಕೀಲರು ಈ ವರೆಗೂ ಕಕ್ಷಿದಾರರಿಂದ ಹಣ ಪಡೆದೇ ಉಚಿತವಾಗಿ, ಬಡವರಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದಾರೆ. ವಕೀಲ ವೃತ್ತಿಯನ್ನು ಸೇವೆ ಎಂದು ಪರಿಗಣಿಸಿ ಸೇವೆ ಸಲ್ಲಿಸಬೇಕು, ಭಾರತ ಸದೃಢ ದೇಶವಾಗಿರಲು ವಕೀಲರೂ ಕಾರಣರಾಗಿದ್ದಾರೆ ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕರಾದ ನಿರ್ಮಲಾ, ವಕೀಲರ ಸಂಘದ ಮಹಿಳಾ ಪ್ರತಿನಿಧಿ ಎಚ್.ಎಸ್. ಸುಜಾತಾ, ಅಧ್ಯಕ್ಷತೆ ವಹಿಸಿದ್ದ ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ. ವಸಂತಕುಮಾರ ಸೇರಿದಂತೆ ಇತರರು ಮಾತನಾಡಿದರು.ತಾಲೂಕು ವಕೀಲರ ಸಂಘದ ಉಪಾಧ್ಯಕ್ಷೆ ಜ್ಯೋತಿ ಮಲ್ಲಣ್ಣ, ಸಹಕಾರ್ಯದರ್ಶಿ ಎಸ್. ಬಸವರಾಜ, ಖಜಾಂಚಿ ಎಂ.ಪಿ.ಎಂ. ಪ್ರಸನ್ನಕುಮಾರ, ಕಾರ್ಯದರ್ಶಿ ಡಿ. ಸಿದ್ದನಗೌಡ ಉಪಸ್ಥಿತರಿದ್ದರು.
ವಕೀಲರಾದ ಶಿವಲಿಂಗಪ್ಪ ಸೂರಣಗಿ ನಿರೂಪಿಸಿದರು, ವರ್ಷ ಬೆಳಗಾವಿ ಪ್ರಾರ್ಥಿಸಿದರು.ವಕೀಲರ ದಿನಾಚರಣೆ ಅಂಗವಾಗಿ ವಕೀಲರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಮತ್ತು ಸಿಬ್ಬಂದಿ ಇವರಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.