ಸಾರಾಂಶ
ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಅಭಿಮತ । ಜಿಲ್ಲಾ ವಕೀಲರ ಭವನಕ್ಕೆ ಭೇಟಿ ನೀಡಿ ಮತಯಾಚನೆಕನ್ನಡಪ್ರಭ ವಾರ್ತೆ ಚಿತ್ರದುರ್ಗದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ನ್ಯಾಯವಾದಿಗಳೇ ಆಗಿದ್ದು, ದೇಶ ಕಟ್ಟುವಲ್ಲಿ ತಮ್ಮ ಪಾತ್ರ ಮಹತ್ವದ್ದಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಹೇಳಿದರು.
ಜಿಲ್ಲಾ ವಕೀಲರ ಭವನಕ್ಕೆ ಶನಿವಾರ ಭೇಟಿ ನೀಡಿ ಹಾಗೂ ನೂರಾರು ವಕೀಲರನ್ನು ಅವರಿದ್ದಲ್ಲಿಗೆ ತೆರಳಿ ಮತಯಾಚಿಸಿ ಮಾತನಾಡಿದರು. ಸ್ವತಂತ್ರ ಭಾರತದಲ್ಲಿ ಆಡಳಿತ ಚುಕ್ಕಾಣಿ ಹಿಡಿದು ಅಧಿಕಾರ ನಡೆಸಿದವರು, ದೇಶದ ಅಭಿವೃದ್ಧಿಗೆ ಉತ್ತಮ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿದವರಲ್ಲಿ ಬಹುತೇಕರು ವಕೀಲರೇ ಆಗಿದ್ದಾರೆ. ಆ ಗತವೈಭವ ಮರುಕಳಿಸಬೇಕಿದೆ ಎಂದು ಹೇಳಿದರು. ಸಿದ್ದರಾಮಯ್ಯ ಸ್ವತಃ ವಕೀಲರಾಗಿದ್ದ ಕಾರಣ ಭ್ರಷ್ಟಚಾರ ಮುಕ್ತ ಆಡಳಿತ ನೀಡಲು ಸಾಧ್ಯವಾಗಿದೆ. ಜೊತೆಗೆ ಅವರನ್ನು ಟೀಕಿಸಲು ಕೂಡ ವಿಪಕ್ಷ ಹತ್ತಾರು ಬಾರಿ ಯೋಚಿಸುತ್ತಾರೆ. ನಿಜಲಿಂಗಪ್ಪ, ಬಂಗಾರಪ್ಪ ಹೀಗೆ ರಾಜಕಾರಣದಲ್ಲಿ ಉನ್ನತ ಸ್ಥಾನಮಾನ ಅಲಂಕರಿಸಿದವರು ವಕೀಲರಾಗಿದ್ದರು ಎಂಬುದು ವಿಶೇಷ ಎಂದರು.ಪಕ್ಷ ರಾಜಕಾರಣಕ್ಕೆ ಪ್ರವೇಶಿಸಿ ನಿಷ್ಟೆ, ತಾಳ್ಮೆ ವಹಿಸಿದರೇ ಉನ್ನತ ಹುದ್ದೆ ಅಲಂಕರಿಸಿದ ಬಹಳಷ್ಟು ವಕೀಲರ ರಾಜಕೀಯ ಬದುಕು ನಮ್ಮ ಕಣ್ಣ ಮುಂದೆ ಇದೆ ಎಂದರು. ಪ್ರಸ್ತುತ ಪ್ರಜಾಪ್ರಭತ್ವ ಸಂಕಷ್ಟಕ್ಕೆ ಸಿಲುಕಿದೆ. ಸುಳ್ಳು ಸುದ್ದಿಗಳೇ ವೈಭವಿಕರಣಗೊಳ್ಳುತ್ತೀವೆ. ಸಾಮಾನ್ಯ ಜನರನ್ನು ಸುಳ್ಳುಗಳ ಮೂಲಕ ದಿಕ್ಕುತಪ್ಪಿಸುವ ಕೆಲಸ ನಡೆಯುತ್ತಿದೆ. ಬಡ, ಮಧ್ಯಮ ವರ್ಗದ ಜನರ ಬದುಕನ್ನು ಉತ್ತಮಗೊಳಿಸುವ ಗ್ಯಾರಂಟಿ ಯೋಜನೆಗಳ ಕುರಿತು ಅವಹೇಳನಕಾರಿ ಹೇಳಿಕೆಗಳು ಬರುತ್ತಿವೆ. ಈ ಸಂದರ್ಭ ವಕೀಲರ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೇಳಿದರು. ಸಮಾಜದ ಸ್ವಾಸ್ತ್ಯ ಕೆಡಿಸುವ ಚಟುವಟಿಕೆಗಳ ವಿರುದ್ಧ ಕಾನೂನು ಹೋರಾಟ ನಡೆಸುವ ಶಕ್ತಿ ವಕೀಲರಲ್ಲಿ ಹೆಚ್ಚು ಮತ್ತು ಸುಲಭ ಆಗಲಿದೆ. ಆದ್ದರಿಂದ ಈ ಸಂಕಷ್ಟ ಸಂದರ್ಭದಲ್ಲಿ ನಿಮ್ಮಗಳ ಹೊಣೆಗಾರಿಕೆ ಹೆಚ್ಚು ಇದೆ ಎಂದು ಹೇಳಿದರು.
ಪ್ರಸ್ತುತ ಸುಳ್ಳು ಮತ್ತು ಸತ್ಯದ ಮಧ್ಯೆ ಚುನಾವಣೆ ನಡೆಯುತ್ತಿದೆ. ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷ ಭರವಸೆಗಳನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಜೋಡೆತ್ತು ಸರ್ಕಾರ ಆರು ತಿಂಗಳಲ್ಲಿ ಸಮರ್ಥವಾಗಿ ಜಾರಿಗಳಿಸಿದೆ. ಆದರೆ, ಭಾಜಪ ತಾನೇ ಹೇಳಿದ ಭರವಸೆಗಳಲ್ಲಿ ಒಂದನ್ನು ಈಡೇರಿಸಿಲ್ಲ. ಜಿಲ್ಲೆಯ ಜನರ ಹೋರಾಟದ ಫಲ ಜಾರಿಗೊಂಡಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಸಿದ್ದರಾಮಯ್ಯ ಅನುದಾನ ಕೊಟ್ಟಿದ್ದರು. ಆದರೆ, ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದ 5300 ಕೋಟೆಯಲ್ಲಿ ಒಂದು ರು. ಕೂಡ ಬಿಡುಗಡೆ ಮಾಡಿಲ್ಲ. ರಾಜ್ಯಕ್ಕೆ ಬರಪರಿಹಾರ ಕೊಡುತ್ತಿಲ್ಲ. ಜಿಎಸ್.ಟಿ ಪಾಲು ಕೊಡುತ್ತಿಲ್ಲ. ಇಂತಹ ತಾರತಮ್ಯದ ವಿರುದ್ಧ ಕನ್ನಡಿಗರಾದ ನಾವು ಹೋರಾಡಬೇಕಿದೆ. ಅದರ ಮುಂಚೂಣಿಯನ್ನು ವಕೀಲರೇ ವಹಿಸಿಕೊಳ್ಳಬೇಕು ಎಂದು ಕೋರಿದರು.ವಕೀಲರ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಮಾಜಿ ಅಧ್ಯಕ್ಷ ಶಿವುಯಾದವ್,ಕಾಂಗ್ರೆಸ್ ಲೀಗಲ್ ಸೆಲ್ ಅಧ್ಯಕ್ಷರಾದ ಸುದರ್ಶನ್ , ಮಾಜಿ ಪ್ರಧಾನ ಕಾರ್ಯದರ್ಶಿ ದಯಾನಂದ್, ಲೋಕೇಶ್, ಕುಮಾರ್, ಚಂದ್ರಪ್‍ಒ,ಕುಮಾರ್ ಗೌಡ,ವೀರಣ್ಣ, ಮಂಜುಳಾ, ಶಿವಕುಮಾರ್, ರಾಮು, ಮಾಲತೇಶ್, ರಾಮು ಇತರರಿದ್ದರು.