ಕಲಿಕೆಯಲ್ಲಿ ವಿಜ್ಞಾನ ಪಾತ್ರವೇ ಹೆಚ್ಚು ಮಹತ್ವದ್ದು: ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್

| Published : Jul 14 2024, 01:37 AM IST

ಕಲಿಕೆಯಲ್ಲಿ ವಿಜ್ಞಾನ ಪಾತ್ರವೇ ಹೆಚ್ಚು ಮಹತ್ವದ್ದು: ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ವಿಜ್ಞಾನವೆಂಬುವುದು ಪ್ರತಿಯೊಬ್ಬ ವಿದ್ಯಾರ್ಥಿಗೂ ಜ್ಞಾನದ ಸಂಪತ್ತಾಗಿದೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಕೌಶಲ್ಯತೆ ಗುರುತಿಸಲು ವಿಜ್ಞಾನ ಪ್ರಧಾನವಾಗಿದೆ

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ವಿಜ್ಞಾನದಿಂದ ಇಂದು ನಾವು ಜಗತ್ತನ್ನೇ ಗೆಲ್ಲಬಹುದಾಗಿದೆ. ಭಾರತೀಯರು ಈಗಾಗಲೇ ವಿಜ್ಞಾನ ಯುಗವನ್ನು ಪ್ರವೇಶಿಸಿ ಅನೇಕ ವರ್ಷಗಳೇ ಸಂದಿವೆ. ವಿಶೇಷವಾಗಿ ಶಿಕ್ಷಣದ ಕಲಿಕೆಯಲ್ಲಿ ವಿಜ್ಞಾನದ ಪಾತ್ರ ತುಂಬಾ ಮಹತ್ವದ್ದು. ಆದ್ದರಿಂದ ಪ್ರತಿಯೊಬ್ಬರೂ ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಿ ವಿದ್ಯಾರ್ಥಿಗಳಿಗೆ ಭವಿಷ್ಯಕ್ಕೆ ಭದ್ರಬುನಾದಿಹಾಕಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ತಿಳಿಸಿದರು.

ಅವರು, ಶನಿವಾರ ರೋಟರಿ ಬಾಲಭವನದಲ್ಲಿ ಚಿತ್ರದುರ್ಗ ಸೈನ್ಸ್ ಫೌಂಡೇಶನ್, ಶಿಕ್ಷಣ ಇಲಾಖೆ, ರೋಟರಿ ಕ್ಲಬ್, ಹೊಂಗಿರಣ ವಿದ್ಯಾ ಸಂಸ್ಥೆ ಹಾಗೂ ಚಳ್ಳಕೆರೆ ವಿಜ್ಞಾನ ಕ್ಲಬ್ ಸಹಯೋಗದಲ್ಲಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ವಿಜ್ಞಾನ ಉಪನ್ಯಾಸ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ವಿಜ್ಞಾನವೆಂಬುವುದು ಪ್ರತಿಯೊಬ್ಬ ವಿದ್ಯಾರ್ಥಿಗೂ ಜ್ಞಾನದ ಸಂಪತ್ತಾಗಿದೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಕೌಶಲ್ಯತೆ ಗುರುತಿಸಲು ವಿಜ್ಞಾನ ಪ್ರಧಾನವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚಿತ್ರದುರ್ಗ ಸೈನ್ಸ್ ಫೌಂಡೇಷನ್‌ನ ಎಚ್.ಎಸ್.ಟಿ.ಸ್ವಾಮಿ, ಕಳೆದ ಹಲವಾರು ವರ್ಷಗಳಿಂದ ಚಿತ್ರದುರ್ಗ ಸೈನ್ಸ್ ಫೌಂಡೇಷನ್ ನಗರ ಹಾಗೂ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಮಾರ್ಗದರ್ಶನದೊಂದಿಗೆ ವಿಶೇಷ ಕಾರ್ಯಗಾರ ಸಹ ನಡೆಸಿಕೊಂಡು ಬಂದಿದೆ ಎಂದರು.

ಜೈವಿಕ ತಂತ್ರಜ್ಞಾನದಲ್ಲಿ ಸೂಕ್ಷ್ಮಾಣುವಿನ ಪಾತ್ರ ಕುರಿತು ಉಪನ್ಯಾಸ ನೀಡಿದ ಪ್ರಾಧ್ಯಾಪಕ ಡಾ.ಎಸ್.ಶಿಶುಪಾಲ, ವಿದ್ಯಾರ್ಥಿಗಳು ತಮ್ಮದೇಯಾದ ವಿಷಯದಲ್ಲಿ ಪರಿಣಿತಿ ಹೊಂದಲು ಮುಂದಾಗುತ್ತಾರೆ. ಆದರೆ, ವಿಜ್ಞಾನ ವಿಷಯ ಬಂದಾಗ ಮಾತ್ರ ಎಲ್ಲರೂ ಆತಂಕಕ್ಕೀಡಾಗುತ್ತಾರೆ. ಕಾರಣ ಯಾವುದೇ ವಿಚಾರ ಪ್ರಸ್ತಾಪಿಸಿ ಸೂಕ್ತ ಮಾಹಿತಿ ನೀಡಲು ವಿಜ್ಞಾನದ ಅವಶ್ಯಕತೆ ಇದೆ. ವಿಜ್ಞಾನದಿಂದ ಮಾತ್ರ ನಾವು ಸಾಧನೆಯತ್ತ ಹೆಜ್ಜೆ ಇಡಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೌಂಡೇಶನ್ ಅಧ್ಯಕ್ಷ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ವಹಿಸಿ ಮಾತನಾಡಿ, ಮಾನವ ಪರಿವರ್ತನೆಗೆ ಸುಗಮವಾದ ಹಾದಿ ಎಂದರೆ ಅದು ವಿಜ್ಞಾನದಿಂದ ಮಾತ್ರ. ವಿಜ್ಞಾನ ಇಂದು ಎಲ್ಲೆಡೆ ಆವರಿಸಿಕೊಂಡಿದೆ. ವಿಜ್ಞಾನ ವಿಷಯದಲ್ಲಿ ಮಾತ್ರ ವಿದ್ಯಾರ್ಥಿಗಳು ಸುಜ್ಞಾನಿಗಳಾಲು ಸಾಧ್ಯವೆಂದರು.

ವಿಜ್ಞಾನ ವಿಷಯ ಪರಿವೀಕ್ಷಕ ಎಚ್.ಗೋವಿಂದಪ್ಪ, ನಿವೃತ್ತ ಪ್ರಾಧ್ಯಾಪಕ ಶಿವಲಿಂಗಪ್ಪ, ರೋಟರಿ ಕ್ಲಬ್ ಅಧ್ಯಕ್ಷ ಆರ್.ನಾಗೇಶ್, ಎಚ್.ಎಸ್.ನಾಗೇಶ್, ಕೆ.ವಿ.ನಾಗಲಿಂಗಾರೆಡ್ಡಿ, ವಿಜ್ಞಾನ ಕ್ಲಬ್ ಅಧ್ಯಕ್ಷ ಎನ್.ಬಸವರಾಜ್, ಎಚ್.ಮಂಜುನಾಥ, ನಾಗಭೂಷಣ್ ಮುಂತಾದವರು ಉಪಸ್ಥಿತರಿದ್ದರು.