ಸಾರಾಂಶ
ಇತ್ತೀಚಿನ ದಿನಗಳಲ್ಲಿ ಬಹುಸಂಖ್ಯೆಯ ಜನರಲ್ಲಿ ನಿದ್ರಾಹೀನತೆ ಕಾಣತೊಡಗಿದೆ ಎಂದು ನರರೋಗ ತಜ್ಞ ಡಾ. ದತ್ತಾ ನಾಡಿಗೇರ ಹೇಳಿದರು.
ಹುಬ್ಬಳ್ಳಿ: ಉತ್ತಮ ಆರೋಗ್ಯದ ನಿರ್ವಹಣೆಯಲ್ಲಿ ನಿದ್ರೆಯ ಪಾತ್ರ ಪ್ರಮುಖವಾಗಿದೆ. ಪ್ರತಿದಿನ 7-8 ಗಂಟೆಯ ಸುಖ ನಿದ್ರೆಯು ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಣೆ ಮಾಡುವುದರ ಜತೆಗೆ ಚಯಾಪಚಯ, ಒತ್ತಡ, ಮೆದುಳಿನ, ಹೃದಯ ಸೇರಿದಂತೆ ದೇಹದ ವಿವಿಧ ಅವಯವಗಳ ದೀರ್ಘ ಬಾಳಿಕೆಗೆ ಸಹಕಾರಿಯಾಗಲಿದೆ ಎಂದು ನರರೋಗ ತಜ್ಞ ಡಾ. ದತ್ತಾ ನಾಡಿಗೇರ ಹೇಳಿದರು.
ವಿಶ್ವ ನಿದ್ರೆ ದಿನದ ಪ್ರಯುಕ್ತ ಗೋಕುಲ ರಸ್ತೆಯ ನಿರಾಮಯ ಮೆಡಿಕಲ್ ಸೆಂಟರ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಬಹುಸಂಖ್ಯೆಯ ಜನರಲ್ಲಿ ನಿದ್ರಾಹೀನತೆ ಕಾಣತೊಡಗಿದೆ. ಮೂರರಲ್ಲಿ ಒಬ್ಬರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ, ಅವರಲ್ಲಿ ಅತೀ ಸಣ್ಣ ವಯಸ್ಸಿನಲ್ಲೇ ಹೃದ್ರೋಗ, ಬಿಪಿ, ಶುಗರ್ ಸೇರಿದಂತೆ ಇತರೆ ಸಮಸ್ಯೆಗಳು ಕಾಣತೊಡಗಿವೆ. ಅದನ್ನು ನಿವಾರಿಸಲು ‘ನಾರ್ಥ್ ಕರ್ನಾಟಕ ಸ್ಲೀಪ್ ಸೆಂಟರ್’ ತೆರೆಯಲಾಗಿದ್ದು, ಅನೇಕರು ಚಿಕಿತ್ಸೆ ಪಡೆದು ಪ್ರತಿದಿನ ನೆಮ್ಮದಿಯ ನಿದ್ರೆ ಮಾಡುತ್ತಿದ್ದಾರೆ ಎಂದರು.
ಹೃದ್ರೋಗ ತಜ್ಞ ಡಾ. ಅಮೀತ ಸತ್ತೂರ ಮಾತನಾಡಿ, ಆಲ್ಕೊಹಾಲ್ ಸೇವನೆ, ಅನಿಯಮಿತ ಮಲಗುವ ಸಮಯದ ಅಭ್ಯಾಸ, ಅತಿಯಾದ ಕೆಫೀನ್ ಸೇವನೆ, ದೀರ್ಘಕಾಲದ ನೋವು, ರಾತ್ರಿ ಪಾಳಿ ಕೆಲಸ ಮತ್ತು ಒತ್ತಡಗಳಿಂದ ನಿದ್ರಾಹೀನತೆ ಉಂಟಾಗಬಹುದು. ಈ ಅಂಶಗಳನ್ನು ಪರಿಹರಿಸಿ ಆರೋಗ್ಯಕರ ನಿದ್ರೆಯ ಅಭ್ಯಾಸ ರೂಢಿಸಿಕೊಳ್ಳುವುದು ಮತ್ತು ನಿದ್ರೆಯ ಮಹತ್ವವನ್ನು ಜನರಿಗೆ ತಿಳಿಸುವುದೇ ನಾರ್ಥ್ ಕರ್ನಾಟಕ ಸ್ಲೀಪ್ ಸೆಂಟರ್‌ನ ಮುಖ್ಯ ಉದ್ದೇಶವಾಗಿದೆ ಎಂದರು.ಈ ಸಂದರ್ಭದಲ್ಲಿ ಡಾ. ರಾಜೇಂದ್ರ ದುಗ್ಗಾಣಿ, ಡಾ. ಹರೀಶ ಜೋಶಿ ಸೇರಿದಂತೆ ಹಲವರಿದ್ದರು. ಸುಖ ನಿದ್ರೆಗಾಗಿ ವಾಕಥಾನ್
ವಿಶ್ವ ನಿದ್ರೆ ದಿನದ ಪ್ರಯುಕ್ತ ಶುಕ್ರವಾರ ನಿರಾಮಯ ಮೆಡಿಕಲ್ ಸೆಂಟರ್‌ನಿಂದ ಹಳೇ ಬಸ್ ನಿಲ್ದಾಣದ ವರೆಗೆ ವಾಕಥಾನ್ ನಡೆಯಿತು. ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ವಾಕಥಾನ್‌ಗೆ ಚಾಲನೆ ನೀಡಿದರು. ರಸ್ತೆಯುದ್ದಕ್ಕೂ ನಿದ್ರೆ ಬಗ್ಗೆ ಜಾಗೃತಿ, ಸಮಸ್ಯೆ ಮತ್ತು ಪರಿಹಾರೋಪಾಯಗಳ ಬಗ್ಗೆ ಬಿತ್ತಿಚಿತ್ರಗಳನ್ನು ಪ್ರದರ್ಶಿಸಿದರು.