ದೇಶ ನಿರ್ಮಾಣದಲ್ಲಿ ಸದೃಢ ಯುವಕರ ಪಾತ್ರ ಪ್ರಮುಖ: ಜಿ.ಎನ್. ಪಾಟೀಲ

| Published : Jun 03 2024, 12:31 AM IST

ಸಾರಾಂಶ

ಬಾಗಲಕೋಟೆಯ ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ ಜಿಲ್ಲಾ ಉಪಾಧ್ಯಕ್ಷ ಜಿ.ಎನ್. ಪಾಟೀಲ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದೇಶ ಕಟ್ಟುವಲ್ಲಿ ಸದೃಢ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅದಕ್ಕೆ ವಿದ್ಯಾರ್ಥಿಗಳು ದೇಶವನ್ನು ರೂಪಿಸುವ ರೂವಾರಿಗಳಾಗಿದ್ದಾರೆ. ಅವರಿಗೆ ಸೂಕ್ತವಾದ ತರಬೇತಿ ನೀಡಿ ದೇಶದ ಮುಖ್ಯವಾಹಿನಿಗೆ ತರಲು ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಸದೃಢ ಯುವಕರು ದೇಶದ ಸಂಪತ್ತಾಗಲು ಶಾಲಾ ಕಾಲೇಜುಗಳು ಶ್ರಮಿಸಬೇಕೆಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ ಜಿಲ್ಲಾ ಉಪಾಧ್ಯಕ್ಷ ಜಿ.ಎನ್. ಪಾಟೀಲ ಹೇಳಿದರು.

ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್ ಬುದ್ಧರೋವರ್ಸ್‌ ಮತ್ತು ಸೇವಾ ಭಾರತಿ ರೇಂಜರ್ಸ್‌ ಘಟಕಗಳು, ರೆಡ್‌ ಕ್ರಾಸ್‌, ಎನ್.ಸಿ.ಸಿ, ಎನ್.ಎಸ್.ಎಸ್ ಮತ್ತು ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ದೇಶಕಟ್ಟುವ ಮನೋಭಾವ ಬೆಳೆಸುತ್ತವೆ. ಇದರಿಂದ ದೇಶ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ, ವಿದ್ಯಾರ್ಥಿಗಳು ಜೀವನದಲ್ಲಿ ಯೋಗ ಮತ್ತು ಯೋಗ್ಯತೆ ಗಳಿಸಿಕೊಂಡು ಆಪೇಕ್ಷಿತ ಕಾರ್ಯಗಳನ್ನು ಮಾಡಿದಾಗ ಅದರ ಫಲ ಯೋಗ್ಯವಾಗಿರುತ್ತದೆ. ಅಂತಹ ಯೋಗ ಮತ್ತು ಯೋಗ್ಯತೆ ಗಳಿಸಲು ಶಿಬಿರಗಳು ಸಹಕಾರಿಯಾಗುತ್ತವೆ. ಅದಕ್ಕಾಗಿ ಇಂತಹ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡು, ಶಿಬಿರದ ಸದಪಯೋಗ ಪಡೆಯುವಂತೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ ಕಾರ್ಯದರ್ಶಿ ಎಸ್.ಎಸ್. ದಳವಾಯಿ ಮಾತನಾಡಿ, ಶಿಬಿರದ ಉದ್ದೇಶ ಮತ್ತು ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಸಾಂಸ್ಕೃತಿಕ ವಿಭಾಗ ಸಂಚಾಲಕ ಡಾ.ಜಿ.ಜಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ರೆಡ್‌ ಕ್ರಾಸ್‌ , ಎನ್.ಸಿ.ಸಿ, ಎನ್.ಎಸ್.ಎಸ್. ರೇಂಜರ್ಸ್‌, ರೋವರ್ಸ್‌ ಘಟಕಗಳ ಸಂಚಾಲಕ ನೀಲಪ್ಪಕುರಿ, ಡಾ.ಭಾಸ್ಕರ ಮುಂಡೆವಾಡಿ, ಶಶಿಧರ ಕುಂಬಾರ, ಡಾ. ಸುಮಂಗಲಾ ಮೇಟಿ, ಪರಸಪ್ಪ ತಳವಾರ ಉಪಸ್ಥಿತರಿದ್ದರು.

ಶಿಬಿರದ ಪ್ರಥಮ ದಿನದಂದು ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿಒಟ್ಟು 22 ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಜ್ಯೋತಿ ಕೊಟಿಕಲ್ಲ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಾ.ಸುಮಂಗಲಾ ಮೇಟಿ ಸ್ವಾಗತಿಸಿದರು. ಪರಸಪ್ಪ ತಳವಾರ ವಂದಿಸಿದರು. ಡಾ.ಚಂದ್ರಶೇಕರ ಕಾಳನ್ನವರ ನಿರೂಪಿಸಿದರು.