ಸಾರಾಂಶ
ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ದೋಟಿಹಾಳ ಗ್ರಾಪಂನಿಂದ ಸದೃಢ ಭಾರತಕ್ಕಾಗಿ ವಿದ್ಯಾರ್ಥಿಗಳ ಸಂಕಲ್ಪ ಎಂಬ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ, ಸದಸ್ಯರು ಸಸಿಗೆ ನೀರು ಹಾಕುವ ಮೂಲಕ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಂಪನ್ಮೂಲ ವ್ಯಕ್ತಿ ಬಿಆರ್‌ಸಿ ಶರಣಪ್ಪ ತೆಮ್ಮಿನಾಳ ಮಾತನಾಡಿ, ದೇಶವು ಸದೃಢವಾಗಿರಬೇಕಾದರೆ ಅದರಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗಿದೆ. ಎಲ್ಲ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಬದುಕು ಹಾಗೂ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದರು.ವಿದ್ಯಾರ್ಥಿಗಳು ಆತ್ಮವಿಶ್ವಾಸ, ನಿರಂತರ ಕಲಿಕೆಯಿಂದ ವಿದ್ಯೆಯನ್ನು ಕಲಿಯಬೇಕು. ಇದು ಯಾವುದೇ ಹಣ ಕೊಟ್ಟು ಪಡೆಯುವ ವಸ್ತುವಲ್ಲ, ಉತ್ತಮ ವಿದ್ಯೆ ಕಲಿತ ವಿದ್ಯಾರ್ಥಿಗಳ ಬದುಕು ಸುಂದರವಾಗಿರುತ್ತದೆ. ಸಮಾಜದಲ್ಲಿನ ಪ್ರಸ್ತುತತೆಯ ಅರಿವಾಗುತ್ತದೆ. ಎಲ್ಲ ವಿದ್ಯಾರ್ಥಿಗಳು ಒಳ್ಳೆಯ ಸಂಸ್ಕಾರಯುತ ವಿದ್ಯೆ ಕಲಿಯಬೇಕು ಎಂದರು.ಜೀವನದಲ್ಲಿ ಸಾಧನೆ ಮಾಡಲು ಅದೃಷ್ಟ ಹಾಗೂ ಅವಕಾಶಕ್ಕಾಗಿ ಕಾಯಬಾರದು. ನಮ್ಮಲ್ಲಿ ಅಗಾಧವಾದ ಶಕ್ತಿ ಇದೆ, ಶ್ರಮ, ಏಕಾಗ್ರತೆ, ಅಚಲ ನಂಬಿಕೆ, ಶ್ರದ್ಧೆ ಈ ಎಲ್ಲವನ್ನು ಬಳಸಿಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಹೆತ್ತ ತಂದೆ ತಾಯಿ, ಕಲಿಸಿದ ಶಿಕ್ಷಕರಿಗೆ, ಗ್ರಾಮಕ್ಕೆ ಒಳ್ಳೆಯ ಹೆಸರನ್ನು ತಂದು ಕೊಡುವ ಕೆಲಸ ಮಾಡಬೇಕು ಎಂದರು.ಇನ್ನೋರ್ವ ಉಪನ್ಯಾಸಕ ಕಿರಣರಾಮ್ ಮಾತನಾಡಿ, ದೇಶದಲ್ಲಿರುವ ನಾವು ದೇಶಕ್ಕೆ ಏನ್ನನಾದರೂ ಕೊಡುಗೆ ನೀಡಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಗಬೇಕು. ಸದೃಢ, ಸಂಸ್ಕಾರಯುತ ಭಾರತ ನಿರ್ಮಾಣದಲ್ಲಿ ಯುವ ಜನಾಂಗ ಪ್ರಮುಖ ಪಾತ್ರ ವಹಿಸುವ ಜತೆಗೆ ದೇಶದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮವ್ವ ವಡ್ಡರ, ಉಪಪ್ರಾಂಶುಪಾಲ ಡಿ.ಸುರೇಶ, ಗ್ರಾಪಂ ಸದಸ್ಯರಾದ ಶಿವನಗೌಡ ಪಾಟೀಲ, ಲಕ್ಷ್ಮವ್ವ ಸಕ್ರಿ, ನಾಗಮ್ಮ ಜುಮಲಾಪುರ, ಷರೀಫಾಭಿ ಯರಡೋಣಿ ಸೇರಿದಂತೆ ಎಸ್ಡಿಎಮ್ಸಿ ಅಧ್ಯಕ್ಷರು ಹಾಗೂ ಸದಸ್ಯರು ಶಿಕ್ಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.