ಜಾನಪದ ಕಲೆ ಉಳಿಸುವಲ್ಲಿ ಮಹಿಳೆಯ ಪಾತ್ರ ಹಿರಿದು: ಪ್ರೊ.ಸುಲೋಷನಾ ಅಭಿಮತ

| Published : Mar 28 2024, 12:55 AM IST

ಜಾನಪದ ಕಲೆ ಉಳಿಸುವಲ್ಲಿ ಮಹಿಳೆಯ ಪಾತ್ರ ಹಿರಿದು: ಪ್ರೊ.ಸುಲೋಷನಾ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ಜಾನಪದ ಎಂಬುದು ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆಯ ಮೂಲವೇ ಆಗಿದೆ, ಜಾನಪದ ಮತ್ತು ಜನರ ಬದುಕಿನಲ್ಲಿ ಅವಿನಾಭಾವ ಸಂಬಂಧವಿದ್ದು, ನಡೆ, ನುಡಿ, ಆಹಾರ, ವೇಷಭೂಷಣ, ಕೃಷಿ, ಕಲೆ ಇವೆಲ್ಲವೂ ಜನಪದದ ಭಾಗಗಳಾಗಿವೆ.

ಕನ್ನಡಪ್ರಭ ವಾರ್ತೆ ಬೇಲೂರು

ಜಾನಪದ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ಮಹಿಳೆಯ ಪಾತ್ರ ಹಿರಿದಾಗಿದೆ ಎಂದು ಗಂಧದಕೋಠಿ ಸರ್ಕಾರಿ ‌ಮಹಿಳಾ ಕಾಲೇಜು ನಿವೃತ್ತ ಪ್ರಾಂಶುಪಾಲರು ಪ್ರೊ.ಸುಲೋಚನ ಹೇಳಿದರು.

ಪಟ್ಟಣದ ವೈಡಿಡಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ‌ಜಾನಪದ ಪರಿಷತ್ತು ಮತ್ತು ವೈಡಿಡಿ ಕಾಲೇಜ ಐಕ್ಯೂಎಸಿ ಹಾಗೂ ಸಮಾಜಶಾಸ್ತ್ರ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಜಾನಪದ ಸಾಹಿತ್ಯ ಮತ್ತು ಸಮಾಜದಲ್ಲಿ ಮಹಿಳೆ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನಪದ ಹಾಡು, ಗಾದೆ ಮಾತುಗಳು ಜನರ ಬಾಯಿಂದ ಬಾಯಿಗೆ ಹರಿದು ಬಂದಿದ್ದು, ಅದರ ಸೊಗಡು ನಾಶವಾಗುವುದು ಸಾಧ್ಯವಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಮಹಿಳೆಗೆ ಕೆಲವೊಂದು ಅವಕಾಶಗಳು ಉದಾರವಾಗಿ ದೊರೆತರೂ ಆಕೆಯ ಮೇಲೆ ಅತ್ಯಾಚಾರ, ವ್ಯಭಿಚಾರಗಳು ಹೆಚ್ಚಾಗಿವೆ. ಹೆಣ್ಣು, ಗಂಡು ಈ ಜಗತ್ತಿನ ಎರಡು ಸಮಾನ ಕಣ್ಣುಗಳಾಗಿದ್ದು, ಇಬ್ಬರೂ ಪಾವಿತ್ರ್ಯ ಉಳಿಸಿಕೊಳ್ಳಬೇಕು, ಮಹಿಳೆ ಸಂವೇದನಾಶೀಲಳಾಗಬೇಕು ಎಂದರು.

ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ವೈ.ಎಸ್.ಸಿದ್ದೇಗೌಡ ಮಾತನಾಡಿ, ಪ್ರಸ್ತುತ ಅಧುನಿಕ ‌ಸಮಾಜದಲ್ಲಿ ಮಹಿಳೆಯರು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ತನ್ನದೆಯಾದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಇಂತಹ ದಿನಗಳಲ್ಲೂ ಮಹಿಳೆಯರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಅತ್ಯಾಚಾರದ ಪ್ರಕರಣಗಳು ‌ನಡೆಯುತ್ತಿರುವುದು ನಿಜಕ್ಕೂ ಶೋಚನೀಯ, ಇಂತಹ ಸಂದರ್ಭಗಳಲ್ಲಿ ಮಹಿಳೆಯರಿಗೆ ಸಂವಿಧಾನದ ಕಾನೂನಿನಲ್ಲಿ ನೀಡಿದ ಕಾಯ್ದೆಗಳು ಯಥಾವತ್ತಾಗಿ ಜಾರಿಯಾದರೆ ಮಾತ್ರ ಈ ಪ್ರಕರಣಗಳನ್ನು ತಡೆಗಟ್ಟಬಹುದು, ಕರ್ನಾಟಕ ಜಾನಪದ ಪರಿಷತ್ತು ವಿಭಿನ್ನ ಕಾರ್ಯಕ್ರಮಗಳ ಮೂಲಕ ಜಾನಪದ ಸೊಗಡಿನ ಮಹತ್ವ ತಿಳಿಸುತ್ತಾ ಬಂದಿದೆ, ಇಂತಹ ಸಾಹಿತ್ಯ ಸಂರಕ್ಷಣೆ ಮುಖ್ಯವಾಗಿದೆ ಎಂದರು.

ವೈಡಿಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಡಾ.ಎಚ್.ಎಂ.ಮಹೇಶ್ ಮಾತನಾಡಿ, ಜಾನಪದ ಎಂಬುದು ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆಯ ಮೂಲವೇ ಆಗಿದೆ, ಜಾನಪದ ಮತ್ತು ಜನರ ಬದುಕಿನಲ್ಲಿ ಅವಿನಾಭಾವ ಸಂಬಂಧವಿದ್ದು, ನಡೆ, ನುಡಿ, ಆಹಾರ, ವೇಷಭೂಷಣ, ಕೃಷಿ, ಕಲೆ ಇವೆಲ್ಲವೂ ಜನಪದದ ಭಾಗಗಳಾಗಿವೆ. ಇಂತಹ ಜಾನಪದ ಸಾಹಿತ್ಯ ಪ್ರಕಾರ ಉಳಿಸುವಲ್ಲಿ ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ತು ಮುಂದಾಗಿರುವುದು ನಿಜಕ್ಕೂ ಸಂತೋಷವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಕಲಾವತಿ ಮಧುಸೂದನ್, ಹಾಸನ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಸಹ ಪ್ರಾಧ್ಯಾಪಕ ಡಾ.ಸುರೇಶ್, ವೈಡಿಡಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಡಾ. ಎಚ್.ಎಂ.ಮಹೇಶ್, ನಿವೃತ್ತ ಪ್ರಾಂಶುಪಾಲರು ಡಾ.ಡಿ.ಜಿ.ಕೃಷ್ಣೇಗೌಡ, ವೈಡಿಡಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಹೆಬ್ಬಾಳು ಹಾಲಪ್ಪ, ಉಪನ್ಯಾಸಕ ವೀರಭದ್ರಪ್ಪ, ಜಾವಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಧನಂಜಯ,ಪದ್ಮೇಗೌಡ, ಸಾಹಿತಿ ಇಂದಿರಮ್ಮ ಸೇರಿ ವಿದ್ಯಾರ್ಥಿಗಳು ಹಾಜರಿದ್ದರು.