ಸಮಾಜ ಸೇವೆಯಲ್ಲಿ ಯುವಕರ ಪಾತ್ರ ಮಹತ್ವದ್ದು: ಶಂಕರ ಬಿದರಿ

| Published : Jan 13 2025, 12:46 AM IST

ಸಾರಾಂಶ

ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದ್ದು, ದೊರೆತ ಈ ಹುದ್ದೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಇಲಾಖೆಯ ಗೌರವ ಹೆಚ್ಚಿಸಬೇಕಿದೆ ಎಂದು ನಿವೃತ್ತ ಡಿಜಿಪಿ ಶಂಕರ ಬಿದರಿ ಹೇಳಿದರು.

ಧಾರವಾಡ: ಸಮಾಜ ಸೇವೆಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದ್ದು, ಅಂತೆಯೇ ಎಲ್ಲ ಇಲಾಖೆಗಳಿಗಿಂತ ಪೊಲೀಸ್ ಇಲಾಖೆ ಪ್ರಮುಖವಾಗಿದೆ ಎಂದು ನಿವೃತ್ತ ಡಿಜಿಪಿ ಶಂಕರ ಬಿದರಿ ಹೇಳಿದರು.

ಇಲ್ಲಿಯ ಕ್ಲಾಸಿಕ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಕ್ಲಾಸಿಕ್ ಕೆಎಎಸ್ ಮತ್ತು ಐಎಎಸ್ ಸ್ಟಡಿ ಸರ್ಕಲ್ ಆಯೋಜಿಸಿದ್ದ ಪಿಎಸ್‌ಐ ಮತ್ತು ಪೊಲೀಸ್ ಕಾನ್‌ಸ್ಟೇಬಲ್ ಸಾಧಕರ ಸನ್ಮಾನ ಉದ್ಘಾಟಿಸಿದ ಅವರು, ಪೊಲೀಸ್ ಇಲಾಖೆಯಲ್ಲಿ ಪಿಎಸ್‌ಐ ಹಾಗೂ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ನೇಮಕವಾಗಿದ್ದು, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದ್ದು, ದೊರೆತ ಈ ಹುದ್ದೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಇಲಾಖೆಯ ಗೌರವ ಹೆಚ್ಚಿಸಬೇಕಿದೆ ಎಂದರು.

ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಯ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಹಾಗೂ ಎದುರಿಸಿದ ಸವಾಲುಗಳನ್ನು ಇದೇ ಸಂದರ್ಭದಲ್ಲಿ ಬಿದರಿ ಅವರು ಹಂಚಿಕೊಂಡರು. ಹುಬ್ಬಳ್ಳಿ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಶಂಕರ ಬೆಳ್ಳುಬ್ಬಿ, ಸಮಾಜದ ರಕ್ಷಣೆಗೆ ನಿಮಗೆ ದೊರೆತ ಈ ಹುದ್ದೆಯನ್ನು ಬಳಸಿಕೊಳ್ಳಿ. ಇತರರಿಗೆ ಮಾದರಿಯಾಗಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್ ಸಂಸ್ಥೆಯ ನಿರ್ದೇಶಕ ಲಕ್ಷ್ಮಣ ಎಸ್. ಉಪ್ಪಾರ ಮಾತನಾಡಿ, ಕ್ಲಾಸಿಕ್ ಸಂಸ್ಥೆಯು ಕಳೆದ 27 ವರ್ಷಗಳಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡುತ್ತಿದ್ದು, ಈ ವರೆಗೆ ಲಕ್ಷಾಂತರ ಅಭ್ಯರ್ಥಿಗಳು ತರಬೇತಿ ಪಡೆದು, ಸಾವಿರಾರು ಅಭ್ಯರ್ಥಿಗಳು ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಹೊಂದಿ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ.

ಇತ್ತೀಚೆಗೆ ನಡೆದ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಸಂಸ್ಥೆಯಿಂದ 75ಕ್ಕೂ ಹೆಚ್ಚು ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು, ಅವರಲ್ಲಿ 50ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಗುತ್ತಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿ ಮೂರುಸಾವಿರ ಮಠದ ರಾಜಯೋಗೀಂದ್ರ ಮಹಾಸ್ವಾಮೀಜಿ, ಇಲಾಖೆ ಕಾರ್ಯವನ್ನು ಸಂಬಳಕ್ಕಾಗಿ ಅಲ್ಲದೇ ಸೇವಾ ಮನೋಭಾವನೆಯಿಂದ ಮಾಡಬೇಕು. ಪೊಲೀಸ್ ಇಲಾಖೆಯಲ್ಲಿ ತಮ್ಮ ಸೇವೆ ಆದರ್ಶವಾಗಿರಲಿ ಎಂದು ಆಶೀರ್ವದಿಸಿದರು.

ಕ್ಲಾಸಿಕ್ ಸಂಸ್ಥೆಯಲ್ಲಿ ತರಬೇತಿ ಪಡೆದು ಹಾಗೂ ಮಾದರಿ ಪರೀಕ್ಷೆ ಬರೆದು ಮತ್ತು ಸ್ಪರ್ಧಾ ಸ್ಫೂರ್ತಿ ಮಾಸಪತ್ರಿಕೆ ಓದಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾದ 50ಕ್ಕೂ ಹೆಚ್ಚು ಪಿಎಸ್‌ಐ ಹಾಗೂ 50ಕ್ಕೂ ಪೊಲೀಸ್ ಕಾನ್‌ಸ್ಟೇಬಲ್ ಅಭ್ಯರ್ಥಿಗಳನ್ನು ಸನ್ಮಾನಿಸಿದರು.

ಜಾನಪದ ಕಲಾವಿದ ಶಂಬಯ್ಯ ಹಿರೇಮಠ ಹಾಗೂ ಸಂಗಡಿಗರು ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಸ್ಪರ್ಧಾ ಸ್ಫೂರ್ತಿ ಮಾಸಪತ್ರಿಕೆಯ ಪ್ರಕಾಶಕರಾದ ರೇಣುಕಾ ಉಪ್ಪಾರ, ಶೈಕ್ಷಣಿಕ ಸಲಹೆಗಾರ ಪ್ರೊ. ಎಂ.ವೈ. ಸಾವಂತ, ಎಸಿಪಿ ಪ್ರಶಾಂತ ಸಿದ್ದನಗೌಡರ ಇದ್ದರು. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು.