ಬೇಡಿಕೆ ಈಡೇರಿಕೆಗಾಗಿ ಪೌರಕಾರ್ಮಿಕರಿಂದ ಉರುಳು ಸೇವೆ

| Published : Jan 03 2025, 12:34 AM IST

ಸಾರಾಂಶ

ಪಾಲಿಕೆ ಆಯುಕ್ತರು ಸರ್ಕಾರದ ಆದೇಶದಂತೆ 127 ಪೌರಕಾರ್ಮಿಕರಿಗೆ ನೇರ ನೇಮಕಾತಿ ಆದೇಶ ಪತ್ರ ನೀಡಬೇಕು. ಕಾನೂನು ಬಾಹಿರ ಗುತ್ತಿಗೆ ಪದ್ಧತಿ ರದ್ದುಪಡಿಸಿ 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.

ಹುಬ್ಬಳ್ಳಿ:

ನೇರ ನೇಮಕಾತಿ ಹಾಗೂ ನೇರ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ಕಾರ್ಮಿಕರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಗುರುವಾರ 24ನೇ ದಿನಕ್ಕೆ ಕಾಲಿಟ್ಟಿದ್ದು, ನಗರದ ಪಾಲಿಕೆ ಕಚೇರಿ ಎದುರು 30ಕ್ಕೂ ಅಧಿಕ ಪೌರಕಾರ್ಮಿಕರು ಉರುಳು ಸೇವೆ ಮಾಡುವ ಮೂಲಕ ಪ್ರತಿಭಟಿಸಿದರು.

ಪಾಲಿಕೆ ಆಯುಕ್ತರು ಸರ್ಕಾರದ ಆದೇಶದಂತೆ 127 ಪೌರಕಾರ್ಮಿಕರಿಗೆ ನೇರ ನೇಮಕಾತಿ ಆದೇಶ ಪತ್ರ ನೀಡಬೇಕು. ಕಾನೂನು ಬಾಹಿರ ಗುತ್ತಿಗೆ ಪದ್ಧತಿ ರದ್ದುಪಡಿಸಿ 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಆದೇಶ ಹೊರಡಿಸಿ 8 ವರ್ಷ ಕಳೆದರೂ ಪಾಲಿಕೆ ಆಯುಕ್ತರು 134 ಪೌರಕಾರ್ಮಿಕರ ಮೊದಲನೇ ನೇರ ನೇಮಕಾತಿ ಅಧಿಸೂಚನೆಯನ್ನು ಇಂದಿಗೂ ಪೂರ್ಣಗೊಳಿಸಿಲ್ಲ. ನಗಾರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ ಅವರು ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಭರವಸೆ ನೀಡಿ 23 ದಿನ ಕಳೆದರೂ ಸರ್ಕಾರದ ಆದೇಶ ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದಾರೆ. ಸರ್ಕಾರ ಕೂಡಲೇ ಎಲ್ಲ ಬೇಡಿಕೆ ಈಡೇರಿಸಬೇಕು. ಇಲ್ಲದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ, ಅನಿತಾ ಈನಗೊಂಡ, ಸಂಜಯ ಯರಮಸಾಳ, ಭಾಗ್ಯಲಕ್ಷ್ಮೀ ಮಾದರ, ಕಮಲವ್ವ ಕಲಕ್ಕನವರ, ಪದ್ಮಾ ಚಿಕ್ಕಣವರ, ರೇಣುಕಾ ಹೊಸಮನಿ, ಗಾಳೆಪ್ಪ ರಣತುರ, ದೊಡ್ಡಪ್ಪ ವಂದಾಲ, ರತ್ನವ್ವ ಮಸರಕಲ್, ಹುಸೇನಮ್ಮ ನಗರಗುಂಡ, ಹುಲಗಪ್ಪ ಮರ್ಥಾಡ, ಶರೀಫ್ ಮಸರಕಲ್, ನಾಗೇಶ ಚುರಮುರಿ ಸೇರಿದಂತೆ ಹಲವರಿದ್ದರು.