ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ದೇವಸ್ಥಾನ, ಶಾಲೆ, ಪ್ರಾಚ್ಯವಸ್ತು ಸಂಗ್ರಹಾಲಯ ಸೇರಿದಂತೆ ರೈತರ ಜಮೀನು ಆರ್‌ಟಿಸಿಗಳಲ್ಲಿ ವಕ್ಫ್ ಬೋರ್ಡ್ ಎಂದು ನಮೂದಾಗಿರುವುದನ್ನು ಖಂಡಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಕುವೆಂಪು ವೃತ್ತದ ಬಳಿಯ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ರಾಜ್ಯ ಸರ್ಕಾರ, ವಕ್ಫ್ ಬೋರ್ಡ್, ಅಧಿಕಾರಿಗಳು ಹಾಗೂ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಘೋಷಣೆ ಕೂಗಿದರು.
ಕೈಯಲ್ಲಿ ಕಬ್ಬಿನ ಜೊಲ್ಲೆ ಹಾಗೂ ನಾಡ ಧ್ವಜ ಹಿಡಿದು ಹೆದ್ದಾರಿಯಲ್ಲಿ ವಕ್ಫ್ ಬೋರ್ಡ್ ಎಂದು ನಮೂದಾಗಿರುವ ಆರ್‌ಟಿಸಿ ಸುಟ್ಟು, ಉರುಳಿ ಸೇವೆ ನಡೆಸಿದರು. ಕೂಡಲೇ ವಕ್ಫ್ ಬೋರ್ಡ್ ಹೆಸರನ್ನು ಕೈಬಿಡುವಂತೆ ಆಗ್ರಹಿಸಿದರು.ಶಂಕರ್ ಬಾಬು ಮಾತನಾಡಿ, ಈ ಹಿಂದಿನ ಸರ್ಕಾರಗಳು ಬಹುತೇಕ ರೈತರ ಕಣ್ಣೀರೊರೆಸುವ ಕೆಲಸ ಮಾಡುತ್ತಿದ್ದವು, ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಕಣ್ಣಲ್ಲಿ ರಕ್ತ ಬರಿಸುವಂತೆ ನಡೆದುಕೊಳ್ಳುತ್ತಿದೆ. ನಮ್ಮ ತಾತ, ಮುತ್ತಾತಂದಿರ ಕಾಲದಿಂದಲೂ ಬೇಸಾಯ ಮಾಡಿಕೊಂಡು ಬರುತ್ತಿರುವ ಜಮೀನಿನ ಆರ್‌ಟಿಸಿಗಳಲ್ಲಿ ವಕ್ಫ್ ಬೋರ್ಡ್ ಎಂಬ ಗುಮ್ಮನನ್ನು ರೈತರ ಜಮೀನು ಹಾಗೂ ಐತಿಹಾಸಿಕ ಕಟ್ಟಡಗಳಲ್ಲಿ ಸೇರಿಸುತ್ತಿರುವುದು ವಿಪಾರ್‍ಯಾಸ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ನಮೂದಿಸಿರುವ ವಕ್ಫ್ ಮಂಡಳಿ ಹೆಸರು ಕೈ ಬಿಡಬೇಕು. ಜನಪ್ರತಿನಿಧಿಗಳು ಈ ಸಂಬಂಧ ರೈತರೊಂದಿಗೆ ಧ್ವನಿಯಾಗಿ ನಿಲ್ಲಬೇಕು. ಇಲ್ಲದಿದ್ದರೆ ಜನಪ್ರತಿನಿಧಿಗಳು ಹೋದಲೆಲ್ಲ ಕಪ್ಪು ಪಟ್ಟಿ ತೋರಿಸಿ ಮಸಿ ಬಳಿಯುವ ಮೂಲಕ ತಕ್ಕ ಶಾಸ್ತಿ ಮಾಡುವುದಾಗಿ ಎಚ್ಚರಿಕೆ ನೀಡಿದರು.ಗೌರವಾಧ್ಯಕ್ಷ ಬಳ್ಳೇಕೆರೆ ಶ್ರೀಕಾಂತ್ ಮಾತನಾಡಿ, ರೈತರ ಪಾಲಿಗೆ ವಕ್ಫ್ ಬೋರ್ಡ್ ನಿಜಕ್ಕೂ ಮರಣ ಶಾಸನವಾಗಿದೆ. ದೇಶದ ಕಾನೂನು ಒಂದಾದರೆ ಮುಸ್ಲಿಂ ವಕ್ಫ್ ಬೋರ್ಡ್ ಮತ್ತೊಂದು ಕಾನೂನು ನೀಡಿರುವುದು ಇದು ಯಾವ ದೇಶದ ಸಂವಿಧಾನ ಎಂದು ಪ್ರಶ್ನಿಸಿದರು.
ಕೇವಲ ಕೆಲ ಮಂದಿ ರೈತರಿಗಷ್ಟೆ ವಕ್ಫ್ ಬೋರ್ಡ್ ಗುಮ್ಮನ ಮಾಹಿತಿ ತಿಳಿದಿದೆ. ಮುಂದೆ ಅದೆಷ್ಟು ರೈತರಿಗೆ ತೊಂದರೆ ಎದುರಾಗಲಿದೆ. ಸಾರ್ವಜನಿಕರು ಈಗಲೇ ಎಚ್ಚೆತ್ತುಕೊಂಡು ಈ ವಕ್ಫ್ ಬೋರ್ಡ್ ಗುಮ್ಮನನ್ನು ರಾಜ್ಯದಿಂದಲೇ ತೊಲಗಿಸಬೇಕು ಎಂದು ಕರೆ ನೀಡಿದರು.ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಗೌಡ, ಬಾಳೆಹಣ್ಣು ಮಂಜು, ಛಾಯಾದೇವಿ, ಅಂಕಶೆಟ್ಡಿ, ಸತ್ಯಮೂರ್ತಿ, ಕೂಡಲಕುಪ್ಪೆ ಕುಮಾರ್, ಬೋರಪ್ಪ, ಗಾಯಿತ್ರಮ್ಮ, ಮಂಗಳಮ್ಮ, ಮಾದಮ್ಮ, ಸುರೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.