ಸಾರಾಂಶ
ಪ್ರಸಕ್ತ ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ರೋಬೋಟಿಕ್ ಆ್ಯಂಡ್ ಅಟೋಮೇಶನ್ ಕೋರ್ಸ್‌ನ 6ನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿರುವ ರಿತುಪರ್ಣ ಅವರು ರೋಲ್ಸ್‌ರೋಯ್ಸ್ ಸಂಸ್ಥೆಯ ಜೆಟ್ ಎಂಜಿನ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ. ಕಂಪನಿಯಲ್ಲಿ ವಾರ್ಷಿಕ 72.3 ಲಕ್ಷ ರು.ಗಳ ವೇತನದ ಆಫರ್‌ನ್ನು ಗಿಟ್ಟಿಸಿಕೊಂಡಿರುವ ರಿತುಪರ್ಣ ಅವರು ಸಂಸ್ಥೆಯ ಅತ್ಯಂತ ಕಿರಿಯ ಉದ್ಯೋಗಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಅಮೆರಿಕದ ಪ್ರತಿಷ್ಟಿತ ಕಂಪನಿಗಳಲ್ಲಿ ಒಂದಾದ ರೋಲ್ಸ್ ರೋಯ್ಸ್ ಕಂಪನಿಯಲ್ಲಿ ಇಂಟರ್ನ್‌ಶಿಪ್ ಬಯಸಿ ಎಂಟು ತಿಂಗಳ ಕಾಲ ಸಂದರ್ಶನ ಎದುರಿಸಿದ ಕರಾವಳಿ ಮಲೆನಾಡಿನ 20ರ ಹರೆಯದ ರಿತುಪರ್ಣ ಕೊನೆಗೂ ತನ್ನ ಕನಸಿನ ಅದೇ ಸಂಸ್ಥೆಯಲ್ಲಿ ಇಂಟರ್ನ್‌ಶಿಪ್ ಬದಲು ನೇರವಾಗಿ ಲಕ್ಷಗಟ್ಟಲೆ ವೇತನದ ಉದ್ಯೋಗವನ್ನೇ ಗಿಟ್ಟಿಸಿಕೊಂಡಿದ್ದಾರೆ.ಪ್ರಸಕ್ತ ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ರೋಬೋಟಿಕ್ ಆ್ಯಂಡ್ ಅಟೋಮೇಶನ್ ಕೋರ್ಸ್‌ನ 6ನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿರುವ ರಿತುಪರ್ಣ ಅವರು ರೋಲ್ಸ್‌ರೋಯ್ಸ್ ಸಂಸ್ಥೆಯ ಜೆಟ್ ಎಂಜಿನ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ. ಕಂಪನಿಯಲ್ಲಿ ವಾರ್ಷಿಕ 72.3 ಲಕ್ಷ ರು.ಗಳ ವೇತನದ ಆಫರ್‌ನ್ನು ಗಿಟ್ಟಿಸಿಕೊಂಡಿರುವ ರಿತುಪರ್ಣ ಅವರು ಸಂಸ್ಥೆಯ ಅತ್ಯಂತ ಕಿರಿಯ ಉದ್ಯೋಗಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.ಮೂಲತಃ ಮಲೆನಾಡಿನ ತೀರ್ಥಹಳ್ಳಿಯ ಸುರೇಶ್ ಹಾಗೂ ಗೀತಾ ದಂಪತಿಯ ಪುತ್ರಿ ರಿತುಪರ್ಣ, ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯಮರವಳ್ಳಿ ಗ್ರಾಮದ ಕೊದೂರಿನಲ್ಲಿ ಜನಿಸಿದ್ದಾರೆ. ಮಂಗಳೂರಿನ ಸೈಂಟ್ ಆಗ್ನೆಸ್‌ನ ಬಳಿಕ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ರೊಬೆಟಿಕ್ ಆ್ಯಂಡ್ ಅಟೋಮಿಷನ್ ಕೋರ್ಸ್‌ನ ವಿದ್ಯಾರ್ಥಿನಿ. ಎಂಜಿನಿಯರಿಂಗ್ ಶಿಕ್ಷಣದ ಪ್ರಥಮ ವರ್ಷದಲ್ಲಿ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಇನ್ನೋವೇಶನ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಈಕೆ ‘ಹಾರ್ವೆಸ್ಟಿಂಗ್ ಅಂಡ್ ಸ್ಪೇಯರ್’ ಎಂಬ ವಿಷಯದ ಅವಿಷ್ಕಾರಕ್ಕೆ ಈಕೆ ಚಿನ್ನ ಮತ್ತು ಕಂಚಿನ ಪದಕ ಪಡೆದಿದ್ದರು. ತನ್ನ ಸಹಪಾಠಿಗಳ ತಂಡ ಕಟ್ಟಿಕೊಂಡು ಮಧ್ಯಪ್ರದೇಶದ ಇಂದೋರ್ ಐಐಟಿ, ಮಂಗಳೂರಿನ ಎನ್‌ಐಟಿಕೆಗೆ ತೆರಳಿ ಹೊಸ ಅನ್ವೇಷಣೆಗಳಲ್ಲಿ ತೊಡಗಿಸಿದ್ದಾರೆ. ನಂತರ ವೈದ್ಯರುಗಳನ್ನು ಸಂಪರ್ಕಿಸಿ ರೊಬೋಟಿಕ್ ಸರ್ಜರಿಯನ್ನು ಗಮನಿಸಿ ಅಲ್ಲಿಯೂ ಅನ್ವೇಷಣೆಯ ಪ್ರಯತ್ನ ಮಾಡಿದ್ದಾರೆ. ಮಂಗಳೂರಿನ ಕಸ ವಿಲೇವಾರಿಗೆ ಸಂಬಂಧಿಸಿ ಪ್ರತ್ಯೇಕ ಆ್ಯಪ್ ಅಭಿವೃದ್ಧಿ ಪಡಿಸುವ ಕೆಲಸದಲ್ಲಿ ಸಹಪಾಠಿಗಳೊಂದಿಗೆ ತೊಡಗಿಸಿಕೊಂಡಿದ್ದಾರೆ.-----------------ರೋಲ್ಸ್‌ರೋಯ್ಸ್‌ನಂತಹ ಕಂಪನಿಯಲ್ಲಿ ಉದ್ಯೋಗ ಸುಲಭವಲ್ಲ. ನಾನು ಬಹಳಷ್ಟುಕಷ್ಟಪಟ್ಟಿದ್ದೇನೆ. ಪ್ರಥಮ ವರ್ಷದಿಂದಲೇ ಅದಕ್ಕೆ ಅಗತ್ಯವಾದ ಸ್ಕಿಲ್ ಸೈಟ್, ಯೂ ಟ್ಯೂಬ್‌ಗಳನ್ನು ನೋಡಿಕೊಂಡಿದ್ದೆ. ಸದ್ಯ ನನಗೆ ರೋಲ್ಸ್‌ರೋಯ್ಸ್‌ನ ವಿಮಾನದ ಎಂಜಿನ್ ತಯಾರಿಸುವ ವಿಭಾಗದಲ್ಲಿ ಉದ್ಯೋಗ ದೊರಕಿದೆ. ಈಗಲೂ ತರಬೇತಿ ಮಾಡುತ್ತಿದ್ದು, ಆರಂಭಿಕ ತರಬೇತಿ ಸಂದರ್ಭ ನನ್ನ ಕೆಲಸವನ್ನು ಗಮನಿಸಿ ನನಗೆ ಮೊದಲು ನಿಗದಿಯಾಗಿದ್ದ ವಾರ್ಷಿಕ 39.58 ಲಕ್ಷ ರು.ಗಳ ಆಫರ್‌ನ್ನು 72.3 ಲಕ್ಷ ರು. ಏರಿಕೆ ಮಾಡಲಾಗಿದೆ.-ರಿತುಪರ್ಣ, ರೋಲ್ಸ್ ರೋಯ್ಸ್ ಉದ್ಯೋಗಿ