ಟ್ರಾಫಿಕ್ ಸಮಸ್ಯೆಗೆ ರೋಣ ಸವಾರರು ಹೈರಾಣ!

| Published : May 18 2024, 12:35 AM IST

ಸಾರಾಂಶ

ರಸ್ತೆಯುದ್ದಕ್ಕೂ ನಿಲ್ಲುವ ವಾಹನಗಳು ಓವರ್ ಟೆಕ್ ಮಾಡುವ ಸಂದರ್ಭದಲ್ಲಿ ಅಡ್ಡಾದಿಡ್ಡಿ ವಾಹನ ಸಂಚಾರದಿಂದ ಉಂಟಾಗುವ ಟ್ರಾಫಿಕ್ ಜಾಮ್ ಗಂಟೆಗಟ್ಟಲೇ ಮುಂದುವರೆಯುತ್ತದೆ

ಪಿ.ಎಸ್.ಪಾಟೀಲ ರೋಣ

ಹೆಚ್ಚುತ್ತಿರುವ ವಾಹನ ದಟ್ಟನೆ, ಬೆಳೆಯುತ್ತಿರುವ ಜನಸಂಖ್ಯೆಯಿಂದ ಇತ್ತೀಚಿನ ದಿನಗಳಲ್ಲಿ ರೋಣ ಪಟ್ಟಣದಲ್ಲಿನ ಇಕ್ಕಟ್ಟಾದ ರಸ್ತೆಗಳು ವಿಪರೀತ ಟ್ರಾಫಿಕ್‌ ಜಾಮ್‌ ಸಮಸ್ಯೆ ಎದುರಿಸುತ್ತಿದ್ದು, ಇದರಿಂದ ವಾಹನ ಸವಾರರು ರಸ್ತೆ ದಾಟಲು ನಿತ್ಯ ಹೈರಾಣಾಗುತ್ತಿದ್ದಾರೆ.

ಪಟ್ಟಣದ ಬಸ್ ನಿಲ್ದಾಣದಿಂದ ಸೂಡಿ ವೃತ್ತದವರೆಗೆ ಹಾಗೂ ಪೋತದಾರ ರಾಜನ ಕಟ್ಟೆವರೆಗಿನ ರಸ್ತೆಯುದ್ದಕ್ಕೂ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆಗುತ್ತಿದೆ. ಗುರುವಾರ ಮತ್ತು ಮಂಗಳವಾರ ಸಂತೆ ದಿನವಾಗಿದ್ದರಿಂದ ಟ್ರಾಫಿಕ್ ಜಾಮ್ ಹೇಳತೀರದು. ಟ್ರಾಫಿಕ್ ಆಗದಂತೆ ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಸಮಸ್ಯೆಗೆ ಮುಕ್ತಿ ಇಲ್ಲದಂತಾಗಿದೆ. ದಾರಿಯೂದ್ದಕ್ಕೂ ನಿಲ್ಲುವ ವಾಹನ ಸವಾರರ ಮಧ್ಯೆ ನಿತ್ಯವೂ ಪರಸ್ಪರ ಜಗಳ, ನೂಕಾಟ, ತಳ್ಳಾಟಗಳಾಗುತ್ತಿವೆ. ವಾಹನ ಸವಾರರು ಒಂದೇ ಸಮನೇ ಹಾರ್ನ್ (ಶಬ್ದ) ಹಾಕುತ್ತಿರುವುದರಿಂದ ವ್ಯಾಪಾರಸ್ಥರಿಗೆ, ಪಾದಚಾರಿಗಳಿಗೆ ಕಿರಿಕಿರಿಯಾಗುತ್ತಿದೆ.

ರಸ್ತೆಯುದ್ದಕ್ಕೂ ನಿಲ್ಲುವ ವಾಹನಗಳು ಓವರ್ ಟೆಕ್ ಮಾಡುವ ಸಂದರ್ಭದಲ್ಲಿ ಅಡ್ಡಾದಿಡ್ಡಿ ವಾಹನ ಸಂಚಾರದಿಂದ ಉಂಟಾಗುವ ಟ್ರಾಫಿಕ್ ಜಾಮ್ ಗಂಟೆಗಟ್ಟಲೇ ಮುಂದುವರೆಯುತ್ತದೆ. ಬಸ್ ನಿಲ್ದಾಣದಿಂದ ಸೂಡಿ ವೃತ್ತದವರೆಗೆ ವಾಹನಗಳು ರಸ್ತೆಯೂದ್ದಕ್ಕೂ ನಿಲ್ಲುತ್ತವೆ. ಇದರಿಂದ ಬಾಗಲಕೋಟೆ, ಬದಾಮಿ, ಗಜೇಂದ್ರಗಡ, ನವಲಗುಂದ, ಗದಗ, ನರಗುಂದ, ಹುಬ್ಬಳ್ಳಿಗೆ ತೆರಳುವ ಪ್ರಯಾಣಿಕರಿಗೆ ಟ್ರಾಫಿಕ್ ಜಾಮ್‌ ನಾನಾ ರೀತಿಯ ತೊಂದರೆ ತಂದೊಡ್ಡುತ್ತಿದೆ.

ರಸ್ತೆಯಲ್ಲೇ ಪಾರ್ಕಿಂಗ್: ಮೊದಲೇ ಇಕ್ಕಟ್ಟಾದ ರಸ್ತೆ, ಒಂದೇ ಒಂದು ವಾಹನ ಅಡ್ಡಾದಿಡ್ಡಿ ನಿಂತರೆ ಸಾಕು ವಿಪರೀತ ಟ್ರಾಫಿಕ್ ಜಾಮ್ ಆಗುತ್ತದೆ. ಪಟ್ಟಣದಲ್ಲಿ ಪಾರ್ಕಿಂಗ್ ಸಿಸ್ಟಂ ಜಾರಿಯಲ್ಲಿಲ್ಲ. ಪಾದಚಾರಿಗಳು ಫುಟ್ಪಾತ್ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಮಧ್ಯೆಯೇ ಸಂಚರಿಸುತ್ತಾರೆ. ಬಹುತೇಕ ಕಡೆ ರಸ್ತೆಯಲ್ಲಿಯೇ ಜನರು ಗುಂಪು ಗುಂಪಾಗಿ ನಿಂತು ಹರಟೆ ಹೊಡೆಯುತ್ತಾರೆ. ಬೈಕ್, ಕಾರು ಸವಾರರು ತಮ್ಮ ವಾಹನವನ್ನು ರಸ್ತೆಯಲ್ಲಿಯೇ ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಇದರಿಂದ ಟ್ರಾಫಿಕ್ ಜಾಮ್ ಆಗುವಂತೆ ಮಾಡುತ್ತಿದ್ದಾರೆ.

ಟ್ರಾಫಿಕ್‌ ಸಮಸ್ಯೆಗೆ ಮುಕ್ತಿ ಯಾವಾಗ?: ಕಳೆದ 6 ತಿಂಗಳಿನಿಂದ ರೋಣದಲ್ಲಿ ಅತ್ಯಧಿಕ ವಾಹನಗಳು ಸಂಚರಿಸುತ್ತಿವೆ. ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಉಂಟಾಗುವ ಟ್ರಾಫಿಕ್ ಜಾಮ್ ಗೆ ದೂರದ ಸ್ಥಳಗಳಿಗೆ ಹೋಗುವ ಪ್ರಯಾಣಿಕರು, ಯಾತ್ರಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲಾಗುತ್ತಿಲ್ಲ. ಇದರಿಂದ ರೋಣ ಮಾರ್ಗವಾಗಿ ಬೇರಡೆ ತೆರಳಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸ್ಥಳೀಯ ಪುರಸಭೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ, ತಾಲೂಕಾಡಳಿತ ಗಮನ ಹರಿಸಿ ಟ್ರಾಫಿಕ್ ಜಾಮ್ ಆಗದಂತೆ ಕ್ರಮ ಕೈಗೊಳ್ಳಬೇಕಿದೆ.

ಟ್ರಾಫಿಕ್ ಜಾಮ್ ಆಗದಂತೆ ತಡೆಯಲು, ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಅಲ್ಲಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ರಸ್ತೆ ಇಕ್ಕಟ್ಟಾಗಿದ್ದು, ಒಂದು ವಾಹನ ನಿಂತರೆ ಸ್ವಲ್ಪ ಮಟ್ಟಿಗೆ ಸಂಚಾರಕ್ಕೆ ತೊಂದರೆಯಾಗುತ್ತದೆ. ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನಮ್ಮ ಸಿಬ್ಬಂದಿ ಕಾರ್ಯತತ್ಪರರಾಗುವಂತೆ ಸೂಚಿಸಲಾಗಿದೆ ಎಂದು ರೋಣ ಸಿಪಿಐ ಎಸ್.ಎಸ್. ಬೀಳಗಿ ಹೇಳಿದರು.

ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ವಾಹನ ಸವಾರರು ಪಾಲಿಸಬೇಕಾದ ಸಂಚಾರಿ ನಿಯಮಗಳ ಬಗ್ಗೆ ತಿಳಿವಳಿಕೆಗಾಗಿ ಎಲ್ಲೆಲ್ಲಿ ಫಲಕ ಅಳವಡಿಸಬೇಕು, ಅಪಘಾತ ತಡೆಗೆ ಯಾವ ಕ್ರಮ ಕೈಗೊಳ್ಳಬೇಕು, ಜನದಟ್ಟನೆ ಯಾವ ರೀತಿ ನಿಯಂತ್ರಿಸಬೇಕು, ಸ್ಪೀಡ್ ನಿಯಂತ್ರಣಕ್ಕಾಗಿ ರಸ್ತೆಗೆ ಎಲ್ಲೆಲ್ಲಿ ಹಂಪ್ಸ್‌ ಅಳವಡಿಸಬೇಕು, ಎಲ್ಲೆಲ್ಲಿ ಪಾದಚಾರಿ ರಸ್ತೆ ನಿರ್ಮಿಸಬೇಕು ಎಂಬಿತ್ಯಾದಿಗಳ ಕುರಿತು ಕ್ರಮ‌ ಕೈಗೊಳ್ಳಲು ಪ್ರಾಂಪ್ಸಿ ಎಂಬ ಪ್ರತ್ಯೇಕ ಇಲಾಖೆಯಿದೆ. ರೋಣ ಪಟ್ಟಣದಲ್ಲಿ ಸಂಚಾರಿ ನಿಯಮ‌ ಪಾಲನೆಗೆ ಎಲ್ಲಲ್ಲಿ ಜಾಗೃತಿ ಫಲಕ ಅಳವಡಿಸಬೇಕು ಎಂಬುದರ ಕುರಿತು ಪ್ರಾಂಪ್ಸಿ ಇಲಾಖೆಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆಗೆ ಕಳುಹಿಸಲಾಗಿದೆ ಎಂದು ರೋಣ ಎಇಇ ಲೋಕೋಪಯೋಗಿ ಇಲಾಖೆ ಬಲವಂತ ನಾಯಕ ತಿಳಿಸಿದ್ದಾರೆ.