ಸೋರುತ್ತಿದ್ದ ಶಂಕರಿಕೊಪ್ಪ ಶಾಲೆಗೆ ಮೇಲ್ಚಾವಣಿ

| Published : Aug 02 2024, 12:52 AM IST

ಸಾರಾಂಶ

ಶಿಥಿಲಗೊಂಡು ಮಳೆಯ ಕಾರಣಕ್ಕೆ ಸೋರುತ್ತಿದ್ದ ಶಂಕರಿಕೊಪ್ಪ ಗ್ರಾಮದ ಸರ್ಕಾರಿ ಶಾಲೆ ಕಟ್ಟಡ ಕುರಿತ ಕನ್ನಡಪ್ರಭ ವರದಿಗೆ ಸ್ಪಂದಿಸಿರುವ ಅಧಿಕಾರಿಗಳು ಶಾಲೆಗೆ ತಗಡಿನ ಮೇಲ್ಚಾವಣಿ ಹೊದಿಸಿ ಕ್ರಮವಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನ ಶಂಕರಿಕೊಪ್ಪ ಗ್ರಾಮದ ಸರ್ಕಾರಿ ಶಾಲೆ ಕಟ್ಟಡ ಶಿಥಿಲಗೊಂಡು ಅಧಿಕ ಮಳೆಯ ಕಾರಣ ಸೋರುತ್ತಿದ್ದ ಕಾರಣ ಕಟ್ಟಡವನ್ನು ಅಧಿಕಾರಿಗಳು ವೀಕ್ಷಣೆ ನಡೆಸಿ ತಗಡಿನ ಮೇಲ್ಚಾವಣಿ ಹೊದಿಸಿ ಸೋರದಂತೆ ರಕ್ಷಣೆ ನೀಡಿ, ಕನ್ನಡಪ್ರಭ ವರದಿಗೆ ಸ್ಪಂದಿಸಿದ್ದಾರೆ.

ತಾಲೂಕಿನ ಶಕುನವಳ್ಳಿ ಗ್ರಾ.ಪಂ.ವ್ಯಾಪ್ತಿಗೆ ಬರುವ ಶಂಕರಿಕೊಪ್ಪ ಗ್ರಾಮ ಸೊರಬ ಪಟ್ಟಣದಿಂದ ೩೬ ಕಿ.ಮೀ. ದೂರದಲ್ಲಿದ್ದು, ಗಡಿ ಪ್ರದೇಶದ ಗ್ರಾಮವೆಂದು ಗುರ್ತಿಸಿಕೊಂಡಿದೆ. ಗ್ರಾಮದಲ್ಲಿ ಸುಮಾರು ೧೨೦ ಮನೆಗಳಿವೆ. ಕಳೆದ ೨೦೧೨-೧೩ರಲ್ಲಿ ಪ್ರಾರಂಭಗೊಂಡ ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ೧೨ ವರ್ಷಗಳು ಸಂದಿವೆ. ಪ್ರಸಕ್ತ ಸಾಲಿನಲ್ಲಿ ೩೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಸತತ ಸುರಿಯುತ್ತಿರುವ ಮಳೆಯಿಂದ ಇಡೀ ಕಟ್ಟಡ ಒದ್ದೆಯಾಗಿ ಮೇಲ್ಚಾವಣಿಯಿಂದ ಒಸರುತ್ತಿದ್ದ ನೀರು ಮತ್ತು ಒದ್ದೆಯಾದ ನೆಲೆ ದಲ್ಲಿಯೇ ಮಕ್ಕಳು ಕುಳಿತು ಪಾಠ ಕೇಳುವ ದುಸ್ಥಿತಿ ಇತ್ತು. ಇದೂ ಅಲ್ಲದೇ ಗೋಡೆಯಿಂದ ಒಸರುವ ನೀರು ವಿದ್ಯುತ್ ಸಂಪರ್ಕ ಕಲ್ಪಿಸುವ ಫ್ಯೂಝ್ ಒದ್ದೆ ಯಾಗುತ್ತಿದ್ದು, ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಯಿತ್ತು. ಈ ಬಗ್ಗೆ ಗ್ರಾಮಸ್ಥರು ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು ಕಳೆದ ನಾಲ್ಕು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಈ ಬಗ್ಗೆ ಜುಲೈ ೨೩ರಂದು ‘ಸೋರುತಿದೆ ಶಂಕರಿಕೊಪ್ಪ ಸರ್ಕಾರಿ ಶಾಲೆ!’ ಎನ್ನುವ ಶೀರ್ಷಿಕೆ ಅಡಿಯಲ್ಲಿ ಕನ್ನಡಪ್ರಭ ವರದಿ ಮಾಡಿತ್ತು. ವರದಿ ಹಿನ್ನೆಲೆಯಲ್ಲಿ ಕಳೆದ ನಾಲೈದು ದಿನಗಳ ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ ಶಂಕರಿಕೊಪ್ಪ ಶಾಲೆಗೆ ಭೇಟಿ ನೀಡಿ ಇಲಾಖೆ ಅನುದಾನದಲ್ಲಿ ಸುಮಾರು ೧.೫೦ ಲಕ್ಷ ರು. ವೆಚ್ಚದಲ್ಲಿ ಆರ್‌ಸಿಸಿ ಶಾಲಾ ಕಟ್ಟಡದ ಮೇಲ್ಚಾವಣಿಗೆ ತಾತ್ಕಾಲಿಕ ತಗಡಿನ ಹೊದಿಕೆ ಹಾಕಲಾಗಿದೆ. ಜೊತೆಗೆ ಎಸ್‌ಡಿಎಂಸಿ ವತಿಯಿಂದ ಕಬ್ಬಿಣದ ಬಾಗಿಲಿಗೆ ತಾಗಿ ಕೊಂಡಂತಿದ್ದ ವಿದ್ಯುತ್ ಫ್ಯೂಝ್‌ನ್ನು ತೆಗೆಸಿ, ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಸಿಬ್ಬಂದಿಗಳೊಂದಿಗೆ ಶಂಕರಿಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ ಸೋರುತ್ತಿದ್ದ ಶಾಲೆಗೆ ತಗಡಿನ ಹೊದಿಕೆ ಹಾಕಲಾಗಿದೆ. ಇದರಿಂದ ಮಕ್ಕಳು ನಿರಾತಂಕವಾಗಿ ಪಾಠ-ಪ್ರವಚನ ಕೇಳಲು ಅನುವು ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಜಿ.ಪಂ. ಇಂಜಿನಿಯರ್ ಇಲಾಖೆ ವತಿಯಯಿಂದ ಮೇಲ್ಚಾವಣಿಯ ಸುತ್ತಲೂ ೪ ಅಡಿ ಎತ್ತರದ ಗೋಡೆ ನಿರ್ಮಿಸಿಕೊಡಲು ೫ ಲಕ್ಷ ರು. ವೆಚ್ಚದ ಎಸ್ಟಮೇಟ್ ತಯಾರಿಸ ಲಾಗಿದೆ. ಮಳೆಯ ನಂತರ ಕಾಮಗಾರಿ ಪ್ರಾರಂಭವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀಕಾಂತ್ ಶಂಕರಿಕೊಪ್ಪ.