ಸಾರಾಂಶ
-ಆದಿ ಜಾಂಬವ ಅಭಿವೃದ್ಧಿ ನಿಮಗದ ಅಧ್ಯಕ್ಷ ಜಿ.ಎಸ್. ಮಂಜುನಾಥ ಪ್ರತಿಪಾದನೆ । ನಿವೃತ್ತಿ ಅಂಚಿನಲ್ಲಿರುವ ಐವರು ಪೌರ ಕಾರ್ಮಿಕರ ಸನ್ಮಾನ
------ಕನ್ನಡಪ್ರಭವಾರ್ತೆ ಚಿತ್ರದುರ್ಗ
ಪೌರಕಾರ್ಮಿಕರ ನೇಮಕಾತಿಗೆ ನಿಗದಿಪಡಿಸಿರುವ ಮೀಸಲಾತಿ ಹಾಗೂ ರೋಸ್ಟರ್ ನಿಯಮ ಸಡಿಲಿಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಹಾಗೂ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ ಹೇಳಿದರು.ನಗರಸಭೆಯಿಂದ ರಾಜೇಂದ್ರ ನಗರದ ಅಂಬೇಡ್ಕರ್ ಕಲ್ಯಾಣ ಮಂಟಪ ಆವರಣದಲ್ಲಿ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೇ.99 ರಷ್ಟು ಪರಿಶಿಷ್ಟ ಜಾತಿ ಜನರೇ ಪೌರ ಕಾರ್ಮಿಕ ಕೆಲಸ ಮಾಡುತ್ತಾರೆ. ಪರಿಶಿಷ್ಟ ಜಾತಿಯಲ್ಲೂ ಅತಿ ಹಿಂದುಳಿದವರು ಮಾತ್ರ ಹೆಚ್ಚಾಗಿ ಪೌರಕಾರ್ಮಿಕ ವೃತ್ತಿಯನ್ನು ಆಯ್ದುಕೊಳ್ಳುತ್ತಾರೆ ಎಂದರು.
ಇಂತಹ ಸಂದರ್ಭದಲ್ಲಿ ಪೌರ ಕಾರ್ಮಿಕರ ನೇಮಕಾತಿಯಲ್ಲಿ ಜಾತಿ, ಮಹಿಳಾ ಮತ್ತು ಅಂಗವಿಕಲರ ಆಧಾರಿತ ಮೀಸಲಾತಿ ಹಾಗೂ ರೋಸ್ಟರ್ ನಿಯಮ ಅನ್ವಯಿಸುವುದರಿಂದ ಬಹಳಷ್ಟು ಪೌರಕಾರ್ಮಿಕ ಹುದ್ದೆಗಳು ಭರ್ತಿಯಾಗದೇ ಉಳಿಯುತ್ತಿವೆ ಎಂದು ಹೇಳಿದರು.ಈ ಕಾರಣಕ್ಕಾಗಿ ನಗರಗಳಲ್ಲಿ ಪೌರಕಾರ್ಮಿಕ ಸಮಸ್ಯೆ ತಲೆದೋರುತ್ತದೆ. ಈಗಾಗಲೇ ನೇರ ಪಾವತಿಯಡಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ಸಹ ಖಾಯಂ ನೇಮಕಾತಿ ಮಾಡಿಕೊಳ್ಳಲು ಅಡಚರಣೆ ಉಂಟಾಗುತ್ತಿದೆ ಎಂದರು.
ಪೌರಕಾರ್ಮಿಕರ ನೇಮಕಾತಿಯಲ್ಲಿನ ತೊಂದರೆಗಳ ಬಗ್ಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಂದ ವರದಿ ಪಡೆದು, ಸೆ.27 ರಂದು ಬೀದರ್ ನಲ್ಲಿ ನಡೆಯಲಿರುವ ಪೌರಕಾರ್ಮಿರ ದಿನಾಚರಣೆ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರೊಂದಿಗೆ ಚರ್ಚಿಸುವುದಾಗಿ ಜಿ.ಎಸ್.ಮಂಜುನಾಥ ಹೇಳಿದರು.ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಜಾರಿಗೊಳಿಸಿ ಮನೆ ಮನೆಗಳಿಂದ ಕಸ ಸಂಗ್ರಹಿಸಲು ಆರಂಭಿಸಿದ ಮೇಲೆ, ನಗರಸಭೆಯ ದ್ವಿತೀಯ ಹಾಗೂ ಪ್ರಥಮ ದರ್ಜೆ ಸಹಾಯಕರು, ಕಂದಾಯ ಅಧಿಕಾರಿಗಳ ಹುದ್ದೆಗಳನ್ನು ಕಡಿತಗೊಳಿಸಿ, ಅವುಗಳ ಬದಲಿಗೆ ಆರೋಗ್ಯ ನಿರೀಕ್ಷಕರು, ಪರಿಸರ ಅಭಿಯಂತರರನ್ನು ನಗರಸಭೆ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ 700 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕ ಹುದ್ದೆ ಎಂಬ ನಿಯಮ ಬದಲಿಸಿ, 1000 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕನನ್ನು ನೇಮಕಾತಿ ಮಾಡಿಕೊಳ್ಳಲು ನಿಯಮ ತರಲಾಗಿದೆ. ಇದರಿಂದ ಬಹಳಷ್ಟು ಪೌರಕಾರ್ಮಿಕ ಹುದ್ದೆಗಳು ರದ್ದಾದವು ಎಂದರು.ನಗರಸಭೆಗೆ ವಿವಿಧ ಇಲಾಖೆಗಳಿಂದ ಎರವಲು ಸೇವೆಯ ಮೇಲೆ ಅಧಿಕಾರಿಗಳು ಬರುವುದನ್ನು ತಡೆಯಲಾಗಿದೆ. ಪೌರಕಾರ್ಮಿಕರ ಹೋರಾಟದ ಫಲವಾಗಿ ಸರ್ಕಾರದಿಂದಲೇ ವೇತನ ನೀಡಲಾಗುತ್ತಿದೆ. ಇದರ ಜತೆಗೆ ಪೌರ ಕಾರ್ಮಿಕರಿಗೆ ನಗರಸಭೆಯ ಶೇ. 24.5 ಜಮೀನು ಖರೀದಿಸಿ ನಿವೇಶನಗಳನ್ನು ಹಂಚುವಂತೆ ಜಿ.ಎಸ್.ಮಂಜುನಾಥ್ ಅಧಿಕಾರಿಗಳಲ್ಲಿ ಕೋರಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಪೌರ ಕಾರ್ಮಿಕರು ಜಗದ ಕೊಳೆ ತೊಳೆಯುವ ಜಲಗಾರರು. ಇಂತಹ ಪೌರಕಾರ್ಮಿಕರ ಮಕ್ಕಳು, ಉತ್ತಮ ವಿದ್ಯಾಭ್ಯಾಸ ಹೊಂದಿ ಉನ್ನತ ಹುದ್ದೆಗಳಿಗೆ ಏರುವಂತಾಗಬೇಕು ಎಂದರು.ಪೌರಾಯುಕ್ತೆ ಎಂ. ರೇಣುಕಾ ಮಾತನಾಡಿ, ಸೆ.23 ರಂದು ಪೌರಕಾರ್ಮಿಕ ದಿನಾಚರಣೆ ಆಚರಿಸುತ್ತಾ ಬರಲಾಗುತ್ತಿದೆ. ನಗರದ ಸಾರ್ವಜನಿಕರು ಪೌರಕಾರ್ಮಿಕರನ್ನು ಗೌರವದಿಂದ ಕಾಣಬೇಕು. ತುಂಬಾ ಕಷ್ಟಪಟ್ಟು ನಗರದ ಸ್ವಚ್ಛತೆಗಾಗಿ ದುಡಿಯುವ ಪೌರಕಾರ್ಮಿರಿಗೆ ಸರ್ಕಾರದಿಂದ ನೆರವು ಹಾಗೂ ಸೌಲಭ್ಯ ನೀಡಲಾಗುತ್ತಿದೆ ಎಂದರು.
ವೇತನದ ಜತೆಗೆ ₹2000 ಸಂಕಷ್ಟ ಭತ್ಯೆ, ಭಾನುವಾರವೂ ಕೆಲಸ ನಿರ್ವಹಿಸುವುದರಿಂದ ವಾರ್ಷಿಕ 21 ದಿನಗಳ ವಿಶೇಷ ಭತ್ಯೆ, ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ₹7000 ಪ್ರೋತ್ಸಾಹಧನ ನೀಡಲಾಗುತ್ತಿದೆ. ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿ 90 ಮನೆಗಳನ್ನು ನಿರ್ಮಿಸಲು ಕ್ರಮ ವಹಿಸುವುದಾಗಿ ಹೇಳಿದರು.ಪೌರಕಾರ್ಮಿಕರಾದ ಜಯಣ್ಣ. ಎನ್. ದೇವೆಂದ್ರಪ್ಪ, ನಾಗೇಂದ್ರಪ್ಪ, ಇಸಾಕ್ ಹಾಗೂ ದುರ್ಗೇಶಪ್ಪ, ಆರೋಗ್ಯ ಇಲಾಖೆ ಶುಶ್ರೂಷಕ ಮಲ್ಲಣ್ಣವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಪೌರಕಾರ್ಮಿಕರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಗರಸಭೆ ಅಧ್ಯಕ್ಷೆ ಸುಮಿತಾ ರಘು, ಉಪಾಧ್ಯಕ್ಷೆ ಶ್ರೀದೇವಿ ಜಿ.ಎಸ್, ಸದಸ್ಯರಾದ ಎಚ್. ಶ್ರೀನಿವಾಸ, ಭಾಗ್ಯಮ್ಮ, ಅನುರಾಧ, ತಾರಕೇಶ್ವರಿ, ನಸರುಲ್ಲಾ, ಕೆ.ಬಿ. ಸುರೇಶ್, ಶಬ್ಬೀರ್ ಅಹಮದ್, ರಮೇಶಾಚಾರ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಪೌರಕಾರ್ಮಿಕ ಸಂಘದ ಅಧ್ಯಕ್ಷ ದುರ್ಗೇಶ್ ಇದ್ದರು.
======ಫೋಟೊ: ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ನಿವೃತ್ತಿ ಅಂಚಿನಲ್ಲಿರುವ ಐದು ಮಂದಿ ಪೌರ ಕಾರ್ಮಿಕರನ್ನುಸನ್ಮಾನಿಸಲಾಯಿತು.23 ಸಿಟಿಡಿ6