ರೋಟರಿ ಸಂಸ್ಥೆ ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು ಭಾರತದಿಂದ ಪೋಲಿಯೋ ನಿರ್ಮೂಲನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ನೊಣವಿನಕೆರೆ ಕಾಡಸಿದ್ದೇಶ್ವರಮಠದ ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ರೋಟರಿ ಸಂಸ್ಥೆ ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು ಭಾರತದಿಂದ ಪೋಲಿಯೋ ನಿರ್ಮೂಲನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ನೊಣವಿನಕೆರೆ ಕಾಡಸಿದ್ದೇಶ್ವರಮಠದ ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ತಿಳಿಸಿದರು.

ನಗರದ ರೋಟರಿ ಸಂಸ್ಥೆ ೭೦ಲಕ್ಷ ರು.ಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ನೂತನ ರೋಟರಿ ಭವನದ ಶಂಕುಸ್ಥಾಪನೆಯನ್ನು ಗುರುವಾರ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಗಳು, ಮುಂದಿನ ದಿನಗಳಲ್ಲಿಯೂ ಸಮಾಜದ ಏಳಿಗೆ ಹಾಗೂ ಸಮೃದ್ಧಿಗೆ ಪೂರಕವಾದ ಇನ್ನಷ್ಟು ಉತ್ತಮ ಕಾರ್ಯಗಳನ್ನು ರೋಟರಿ ಸಂಸ್ಥೆ ಕೈಗೊಳ್ಳಲಿ. ಅಸಾಮಾನ್ಯರಿಗೆ ಇವರ ಸೇವೆ ತಲುಪಲಿ ಎಂದು ಆಶಿಸಿದರು.

ನಂತರ ಮಾತನಾಡಿದ ಶಾಸಕ ಕೆ. ಷಡಕ್ಷರಿ, ತಾವು ರೋಟರಿ ಕ್ಲಬ್‌ನ ಹಿರಿಯ ಸದಸ್ಯರಾಗಿದ್ದು, ಸಂಸ್ಥೆಯು ಆರಂಭದಿಂದಲೂ ಉತ್ತಮ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ. ಮುಂದೆಯೂ ರೋಟರಿ ಸಂಸ್ಥೆಯು ವಿವಿಧ ಸಂಘ-ಸಂಸ್ಥೆಗಳೊಂದಿಗೆ ಒಗ್ಗೂಡಿ ಜನಪರ ಹಾಗೂ ಸಮಾಜಮುಖಿ ಕಾರ್ಯಗಳನ್ನು ನಡೆಸಲಿ. ರೋಟರಿ ಸಂಸ್ಥೆಯ ಎಲ್ಲಾ ಉತ್ತಮ ಕಾರ್ಯಗಳಿಗೆ ತಮ್ಮ ಸಂಪೂರ್ಣ ಬೆಂಬಲವಿರುತ್ತದೆ ಎಂದು ಭರವಸೆ ನೀಡಿದರು.ರೋಟರಿಯ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ನೂತನ ಕಟ್ಟಡವನ್ನು ನಿರ್ಮಿಸಿ, ಇದರ ಮೂಲಕ ಇನ್ನಷ್ಟು ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅವರು ಕರೆ ನೀಡಿದರು.ಕಾರ್ಯಕ್ರಮದಲ್ಲಿ ತಿಪಟೂರು ರೋಟರಿ ಅಧ್ಯಕ್ಷ ಪ್ರಕಾಶ್ ಕೆ. ಹಾಗೂ ರೋಟರಿ ಟ್ರಸ್ಟ್ ಅಧ್ಯಕ್ಷ ಬಿ.ಸಿ. ಪ್ರಭುಸ್ವಾಮಿ, ರೋಟರಿ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.