ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ವತಿಯಿಂದ ಆಯೋಜಿಸಲಾಗುತ್ತಿರುವ ರೋಟರಿ ಕ್ರಿಕೆಟ್ ಪ್ರೀಮಿಯರ್ ಲೀಗ್ (ಆರ್‌ಸಿಪಿಎಲ್) ಸೀಸನ್-3 ಕ್ರಿಕೆಟ್ ಪಂದ್ಯಾವಳಿಗಳು ಅ. 23, 24 ಮತ್ತು 25ರಂದು ನಗರದ ಗುರುನಾನಕ್ ಎಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ಮೂರು ದಿನ ನಡೆಯಲಿವೆ ಎಂದು ಕ್ಲಬ್‌ನ ಅಧ್ಯಕ್ಷೆ ಸ್ಪೂರ್ತಿ ಧನ್ನೂರ್ ತಿಳಿಸಿದರು
ಕನ್ನಡಪ್ರಭ ವಾರ್ತೆ ಬೀದರ್
ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ವತಿಯಿಂದ ಆಯೋಜಿಸಲಾಗುತ್ತಿರುವ ರೋಟರಿ ಕ್ರಿಕೆಟ್ ಪ್ರೀಮಿಯರ್ ಲೀಗ್ (ಆರ್‌ಸಿಪಿಎಲ್) ಸೀಸನ್-3 ಕ್ರಿಕೆಟ್ ಪಂದ್ಯಾವಳಿಗಳು ಅ. 23, 24 ಮತ್ತು 25ರಂದು ನಗರದ ಗುರುನಾನಕ್ ಎಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ಮೂರು ದಿನ ನಡೆಯಲಿವೆ ಎಂದು ಕ್ಲಬ್‌ನ ಅಧ್ಯಕ್ಷೆ ಸ್ಪೂರ್ತಿ ಧನ್ನೂರ್ ತಿಳಿಸಿದರು.ಅವರು ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿದ್ದು, 122 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. ಐಪಿಎಲ್ ಮಾದರಿಯ ಹರಾಜು ಪ್ರಕ್ರಿಯೆ ಮೂಲಕ ಎಂಟು ತಂಡಗಳ ಮಾಲೀಕರು ಆಟಗಾರರನ್ನು ತಮ್ಮ ತಂಡಗಳಿಗೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಬಸವರಾಜ ಪಾಟೀಲ್ ಅವರ ಪ್ರಾಯೋಜಕತ್ವದಲ್ಲಿ ಚಾಂಪಿಯನ್ ಟ್ರೋಫಿ ಹಾಗೂ 50 ಸಾವಿರ ರು. ನಗದು ಬಹುಮಾನ ನೀಡಲಾಗುವುದು. ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ್ ಹಾಗೂ ಭೀಮರಾವ್ ಪಾಟೀಲ್ ಅವರು ಪ್ರಾಯೋಜಕತ್ವದ ಮೂಲಕ ಸಹಕರಿಸಿದ್ದಾರೆ ಎಂದರು.ರನ್ನರ್‌ಅಪ್ ತಂಡಕ್ಕೆ ಟ್ರೋಫಿ ಹಾಗೂ 25 ಸಾವಿರ ರು. ನಗದು ಬಹುಮಾನ ನೀಡಲಾಗುವುದು. ಈ ಬಹುಮಾನದ ಪ್ರಾಯೋಜಕತ್ವವನ್ನು ತಾಳಂಪಳ್ಳಿ ಗ್ರೂಪ್‌ನ ಮಾಲೀಕ ಸಂತೋಷ್ ತಾಳಂಪಳ್ಳಿ ವಹಿಸಿಕೊಂಡಿದ್ದಾರೆ. ಅ. 23ರಂದು ಬೆಳಿಗ್ಗೆ 7 ಗಂಟೆಗೆ ಪಂದ್ಯಗಳು ಆರಂಭವಾಗಲಿದ್ದು, ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಎನ್‌ಎಸ್‌ಎಸ್‌ಕೆ ಹಾಗೂ ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ರೋಟರಿ ಜಿಲ್ಲಾ ಗವರ್ನರ್ ಕೇಶವ ರೆಡ್ಡಿ ಸೇರಿದಂತೆ ಎಂಟು ತಂಡಗಳ ಮಾಲೀಕರು, ರೋಟರಿ ಸದಸ್ಯರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
ಅ. 25ರಂದು ಸಮಾರೋಪ ಸಮಾರಂಭ ಹಾಗೂ ಟ್ರೋಫಿ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ್, ಭೀಮರಾವ್ ಪಾಟೀಲ್ ಹಾಗೂ ಸಂತೋಷ ತಾಳಂಪಳ್ಳಿ ಭಾಗವಹಿಸಲಿದ್ದಾರೆ.ಮೊದಲ ಆವೃತ್ತಿಯಲ್ಲಿ ಉಳಿದ ಹಣದಿಂದ ಸುಮಾರು 7 ಲಕ್ಷ ರು.ಗಳನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ವಿನಿಯೋಗಿಸಲಾಗಿದೆ. ಎರಡನೇ ಆವೃತ್ತಿಯಲ್ಲಿ ಉಳಿದ 15 ಲಕ್ಷಕ್ಕೂ ಅಧಿಕ ಮೊತ್ತವನ್ನು ಜಿಲ್ಲೆಯ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗೆ ಬಳಸಲಾಗಿದೆ. 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ನೀಡುವ ಮೂಲಕ ಅವರ ಶಿಕ್ಷಣಕ್ಕೆ ಕ್ಲಬ್ ನೆರವಾಗಿದೆ ಎಂದು ವಿವರಿಸಿದರು.
ಈ ಬಾರಿ ‘ಹೆಣ್ಣು ಮಗುವನ್ನು ಸಬಲೀಕರಣಗೊಳಿಸಿ " ಬೇಟಿ ಬಚಾವೋ, ಬೇಟಿ ಪಢಾವೋ’ ಎಂಬ ಆಶಯದೊಂದಿಗೆ ಪಂದ್ಯಾವಳಿ ಆಯೋಜಿಸಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್‌ನ ಉಪಾಧ್ಯಕ್ಷ ಮಂಜುನಾಥ ಹೂಗಾರ, ಕಾರ್ಯದರ್ಶಿ ಅಭಿಷೇಕ ಚಿಂತಾಮಣಿ, ಕ್ರಿಕೆಟ್ ಪಂದ್ಯಾವಳಿಯ ನಿರ್ದೇಶಕ ಸಂಗಮೇಶ ವಡಗಾವೆ, ನಿರ್ದೇಶಕ ಸಚಿನ್ ಕೊಳ್ಳೂರು ಹಾಗೂ ತಂಡದ ಮಾಲೀಕ ಕಿರಣ್ ಬೆಲ್ದಾಳೆ ಉಪಸ್ಥಿತರಿದ್ದರು.-------
ಬೀದರ್ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ರಿಕೆಟ್ ಪಂದ್ಯಾವಳಿಯ ಕರ ಪತ್ರ ಬಿಡುಗಡೆ ಮಾಡಲಾಯಿತು.