ಸಾರಾಂಶ
ರೋಟರಿ ಜಿಲ್ಲಾಮಟ್ಟದ ಪ್ರಥಮ ವರ್ಷದ ಕಬಡ್ಡಿ ಪಂದ್ಯಾಟ । ಪಿರಿಯಾಪಟ್ಟಣ ರನ್ನರ್‌ಅಪ್‌ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ರೋಟರಿ ಜಿಲ್ಲಾಮಟ್ಟದ ಪ್ರಥಮ ವರ್ಷದ ಕಬಡ್ಡಿ ಪಂದ್ಯಾಟದಲ್ಲಿ ಮಿಸ್ಟಿ ಹಿಲ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು.ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾದ ರೋಟರಿ ಜಿಲ್ಲೆ 3181ರ ರೋಟರಿ ಸದಸ್ಯರ ಕಬಡ್ಡಿ ಪಂದ್ಯಾಟದಲ್ಲಿ ಮಿಸ್ಟಿ ಹಿಲ್ಸ್ ತಂಡವು ಪಿರಿಯಾಪಟ್ಟಣ ಮಿಡ್ ಟೌನ್ ತಂಡವನ್ನು ಮಣಿಸಿ ಪ್ರಶಸ್ತಿ ಜಯಿಸಿತು. ಈ ಮೂಲಕ 25 ಸಾವಿರ ರು. ನಗದು ಮತ್ತು ಟ್ರೋಫಿಯನ್ನು ಪಡೆದುಕೊಂಡಿದೆ.ದ್ವಿತೀಯ ಬಹುಮಾನ ಪಡೆದ ಪಿರಿಯಾಪಟ್ಟಣ ಮಿಡ್ ಟೌನ್ ತಂಡ, 15 ಸಾವಿರ ರು. ನಗದು ಮತ್ತು ಟ್ರೋಫಿ ಪಡೆದರೆ, ಸೆಂಟ್ರಲ್ ಪುತ್ತೂರು ತಂಡ ತೃತೀಯ ಮತ್ತು ಹುಣಸೂರು ರೋಟರಿ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಮಡಿಕೇರಿ ರೋಟರಿ ವುಡ್ಸ್ ತಂಡವು ಅತ್ಯಂತ ಶಿಸ್ತುಬದ್ಧ ತಂಡ ಪ್ರಶಸ್ತಿ ಪಡೆಯಿತು.
ಆಲ್ ರೌಂಡರ್ ಆಟಗಾರ ಪ್ರಶಸ್ತಿಯನ್ನು ಪಿರಿಯಾಪಟ್ಟಣ ಮಿಡ್‌ನ ಸುನಿಲ್ ಪಡೆದುಕೊಂಡರೆ, ಅತ್ಯುತ್ತಮ ಕ್ಯಾಚ್ ಪ್ರಶಸ್ತಿಯನ್ನು ಕುಲ್ಲೇಟಿರ ಅಜಿತ್ ನಾಣಯ್ಯ ತಮ್ಮದಾಗಿಸಿಕೊಂಡರು. ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಮಿಸ್ಟಿ ಹಿಲ್ಸ್ ತಂಡದ ನಾಯಕ ದುಗ್ಗಳ ಕಪಿಲ್ ಪಡೆದುಕೊಂಡರು.ನಗರದ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ರೋಟರಿ ಜಿಲ್ಲಾ ಗವರ್ನರ್ ವಿಕ್ರಂದತ್ತ ಮತ್ತು ನಿಯೋಜಿತ ಗವರ್ನರ್ ಸತೀಶ್ ಬೋಳಾರ್ ವಿತರಿಸಿದರು.
ಈ ಸಂದರ್ಭ ಮಾತನಾಡಿದ ವಿಕ್ರಂದತ್ತ, ಇದೇ ಮೊದಲ ಬಾರಿಗೆ ರೋಟರಿ ಜಿಲ್ಲೆಯಲ್ಲಿ ಆಯೋಜಿತ ಕಬಡ್ಡಿ ಪಂದ್ಯಾಟವನ್ನು ಮಿಸ್ಟಿ ಹಿಲ್ಸ್ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿದೆ. ಮುಂದಿನ ವರ್ಷ ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ಕಬಡ್ಡಿ ಪಂದ್ಯಾಟ ಆಯೋಜಿಸಲಾಗುತ್ತಿದೆ. ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಗೆ 120 ವರ್ಷಗಳು ತುಂಬಿರುವ ಈ ಸಂದರ್ಭ ಕಬಡ್ಡಿಯ ಮೂಲಕ ಮತ್ತಷ್ಟು ಸಂಭ್ರಮ ಲಭಿಸಿದೆ ಎಂದು ಶ್ಲಾಘಿಸಿದರು.ರೋಟರಿ ಸದಸ್ಯರು ಪ್ರತೀ ವರ್ಷ ನೀಡುವ ದೇಣಿಗೆಯು ವಿಶ್ವವ್ಯಾಪಿ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಅತ್ಯುತ್ತಮ ಕಾರ್ಯಗಳಿಗೆ ವಿಶ್ವವ್ಯಾಪಿ ವಿನಿಯೋಗವಾಗುತ್ತಿದೆ ಎಂದರು.
ಸಮಾಜದ ಸಂತೋಷವನ್ನು ಮಾತ್ರ ನೋಡಿ ಎಲ್ಲರೂ ಖುಷಿಯಾಗಿದ್ದಾರೆ ಎಂದು ನಂಬುವ ಬದಲಿಗೆ, ಸಮಾಜದಲ್ಲಿ ಇನ್ನೂ ಸಂತೋಷವನ್ನೇ ಕಾಣದೇ ಸಂಕಷ್ಟದಲ್ಲಿಯೇ ಇರುವ ಅನೇಕರ ಜೀವನದಲ್ಲಿ ರೋಟರಿ ಸದಸ್ಯರು ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ರೋಟರಿ ಸಹಾಯಕ ಗವರ್ನರ್ ದೇವಣಿರ ಕಿರಣ್, ವಲಯ ಸೇನಾನಿ ಅನಿತಾ ಪೂವಯ್ಯ ಹಾಜರಿದ್ದರು. ಎಸ್.ಎಂ. ಚೇತನ್ ಸಂಪಾದಕತ್ವದಲ್ಲಿ ಪ್ರಕಟಿತ ರೋಟೋ ಮಿಸ್ಟ್ ವಾರ್ತಾಸಂಚಿಕೆಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಸ್ವಾಗತಿಸಿದರು. ಕಾರ್ಯದರ್ಶಿ ಕಟ್ಟೆಮನೆ ಸೋನಜಿತ್ ವಂದಿಸಿದರು. ಮಿಸ್ಟಿ ಹಿಲ್ಸ್ ನಿರ್ದೇಶಕ ಅನಿಲ್ ಎಚ್.ಟಿ. ಬಹುಮಾನ ಪ್ರಕಟಿಸಿದರು.ಕಬಡ್ಡಿ ಆಯೋಜನಾ ಸಮಿತಿ ಸಂಚಾಲಕ ಜಯಂತ್ ಪೂಜಾರಿ, ಸಹಸಂಚಾಲಕ ದುಗ್ಗಳ ಕಪಿಲ್, ರೋಟರಿ ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗ, ರೋಟರಿ ವಲಯ 6ರ ವಿವಿಧ ರೋಟರಿ ಸಂಸ್ಥೆಗಳಿಂದ ಸದಸ್ಯರು ಪಾಲ್ಗೊಂಡಿದ್ದರು.