ಸಾರಾಂಶ
ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶ ಒಡೆಯುವ ಮಾತುಗಳನ್ನಾಡಿದ್ದಾರೆ. ಇಂತಹ ಆಡಳಿತಗಾರರು ಮುಂದುವರಿದರೆ ಪ್ರತ್ಯೇಕತೆ ಅನಿವಾರ್ಯವಾಗಲಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದರೆ ಪ್ರತ್ಯೇಕತೆಯ ಕೂಗು ಜೋರಾಗಲಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ಎಚ್ಚರಿಸಿದರು.ನಗರದ ರೋಟರಿ ಸಭಾಂಗಣದಲ್ಲಿ ಕರ್ನಾಟಕ ಅಂಬೇಡ್ಕರ್ ಸೇನೆಯು ಡಾ.ಬಿ.ಆರ್. ಅಂಬೇಡ್ಕರ್ 68ನೇ ಪರಿನಿಬ್ಬಾಣ ದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ವಿಚಾರ ಸಂಕಿರಣ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶ ಒಡೆಯುವ ಮಾತುಗಳನ್ನಾಡಿದ್ದಾರೆ. ಇಂತಹ ಆಡಳಿತಗಾರರು ಮುಂದುವರಿದರೆ ಪ್ರತ್ಯೇಕತೆ ಅನಿವಾರ್ಯವಾಗಲಿದೆ. ಗುಲಾಮಗಿರಿ ಬದುಕು ನಮಗೆ ಬೇಡ. ದೇಶದಲ್ಲಿ ಅಂಬೇಡ್ಕರ್ ಅವರನ್ನು ಹಿಂಬಾಲಿಸುವ 40 ಕೋಟಿ ಜನರಿದ್ದು, ಅವರನ್ನು ಅವಹೇಳನ ಮಾಡಿದರೆ ಪ್ರತ್ಯೇಕತೆಯ ಕೂಗು ಏಳಲಿದೆ ಎಂದರು.ಅಮಿತ್ ಶಾ ಹೇಳಿಕೆ ಖಂಡಿಸಿ ದೇಶಾದಾದ್ಯಂತ ಹೋರಾಟ ನಡೆಯುತ್ತಿವೆ. ಆದರೆ, ಕ್ಷಮೆ ಕೇಳುವ ಕನಿಷ್ಠ ಸೌಜನ್ಯವನ್ನು ತೋರಿಲ್ಲ. ಅಮಿತ್ ಶಾ ಅವರಿಗೆ ಮಾನ- ಮರ್ಯಾದೆ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಅವರು ಅಗ್ರಹಿಸಿದರು.
ನಳಂದ ಬುದ್ಧವಿಹಾರದ ಬೋಧಿರತ್ನ ಭಂತೇಜಿ ವಾತನಾಡಿ, ನಮ್ಮೆಲ್ಲರಿಗೂ ಬದುಕಿನ ದೃಷ್ಟಿ ನೀಡಿದವರು ಬಾಬ ಸಾಹೇಬರು. ಮದ್ಯಪಾನ ಸೇರಿದಂತೆ ದುಶ್ಚಟಗಳಿಂದ ದೂರ ಇರಬೇಕು. ಮಹಾರಾಷ್ಟ್ರದಲ್ಲಿ ದಲಿತ ಫ್ಯಾಂಥರ್ಸ್ ಸಂಘಟನೆಯ ಮೂಲಕ ಪ್ರತಿ ಗ್ರಾಮದಲ್ಲೂ ಕ್ರಾಂತಿ ಮಾಡಿದರು. ಅದೇ ಮಾದರಿಯಲ್ಲಿ ಕರ್ನಾಟಕ ಅಂಬೇಡ್ಕರ್ ಸೇನೆ ಇರುವ ಊರುಗಳಲ್ಲಿ ಸಮುದಾಯವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.ಇದೇ ವೇಳೆ ಡಾ. ಅಂಬೇಡ್ಕರ್ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿದ್ದರಾಜು ಹನುಮನಪುರ ಮಾತನಾಡಿದರು. ಅಹಿಂದ ಮುಖಂಡ ಜೆ. ಚಿಕ್ಕಜವರಪ್ಪ, ಕಾಂಗ್ರೆಸ್ ಮುಖಂಡ ವಿ.ಸಿ. ಶ್ರೀನಿವಾಸಮೂರ್ತಿ, ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ನಾಗೇಂದ್ರ ಬಸವಟ್ಟಿಗೆ, ಜಿಲ್ಲಾಧ್ಯಕ್ಷ ಅಭಿಲಾಷ್ ಎಂ.ಸಿ. ಮೂಕನಹಳ್ಳಿ, ಮಂಜು ಶಂಕರಪುರ ಮೊದಲಾದವರು ಇದ್ದರು.