ರೋಟರಿ ಸಂಸ್ಥೆ ಸಮಾಜಮುಖಿ ಕೆಲಸ ಮಾಡುತ್ತಿದೆ: ದೇವಾನಂದ್‌

| Published : Sep 15 2024, 01:48 AM IST

ರೋಟರಿ ಸಂಸ್ಥೆ ಸಮಾಜಮುಖಿ ಕೆಲಸ ಮಾಡುತ್ತಿದೆ: ದೇವಾನಂದ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಾಜಮುಖಿ ಕೆಲಸಗಳಿಗೆ ಒತ್ತು ನೀಡುವ ರೋಟರಿ ಸಂಸ್ಥೆ ಸಮುದಾಯದ ಆರೋಗ್ಯ, ಸ್ವಾಸ್ಥ್ಯ ಹಾಗೂ ಜೀವನಮಟ್ಟ ಸುಧಾರಿಸಲು ಹಲವಾರು ವರ್ಷಗಳಿಂದ ಶ್ರಮಿಸುತ್ತಿದೆ ಎಂದು ರೋಟರಿ ಕಾಫಿ ಲ್ಯಾಂಡ್ ಜಿಲ್ಲಾ ರಾಜ್ಯಪಾಲ ದೇವಾನಂದ್ ಹೇಳಿದರು.

ಜಿಲ್ಲಾ ರೋಟರಿ ಕಾಫಿ ಲ್ಯಾಂಡ್ ವತಿಯಿಂದ ಜಿಲ್ಲಾ ಯೋಜನಾ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಾಜಮುಖಿ ಕೆಲಸಗಳಿಗೆ ಒತ್ತು ನೀಡುವ ರೋಟರಿ ಸಂಸ್ಥೆ ಸಮುದಾಯದ ಆರೋಗ್ಯ, ಸ್ವಾಸ್ಥ್ಯ ಹಾಗೂ ಜೀವನಮಟ್ಟ ಸುಧಾರಿಸಲು ಹಲವಾರು ವರ್ಷಗಳಿಂದ ಶ್ರಮಿಸುತ್ತಿದೆ ಎಂದು ರೋಟರಿ ಕಾಫಿ ಲ್ಯಾಂಡ್ ಜಿಲ್ಲಾ ರಾಜ್ಯಪಾಲ ದೇವಾನಂದ್ ಹೇಳಿದರು.

ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಜಿಲ್ಲಾ ರೋಟರಿ ಕಾಫಿ ಲ್ಯಾಂಡ್ ನಿಂದ ಶುಕ್ರವಾರ ಏರ್ಪಡಿಸಿದ್ಧ ಜಿಲ್ಲಾ ಯೋಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೋಟರಿ ಈ ಬಾರಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ಸುರಕ್ಷತೆ, ಹಸಿರು, ನೀರು, ಸಾಮಾಜಿಕ ನ್ಯಾಯ ಹಾಗೂ ಆರೋಗ್ಯ ಮತ್ತು ಸ್ವಚ್ಛತಾ ಜಾಗೃತಿ ಎಂಬ ನಾಲ್ಕು ಅಂಶಗಳು ಒಳಗೊಂಡಿರುವ ಯೋಜನಾ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಲ್ಲಿ ಅರಿವು ಮೂಡಿಸಲು ಮುಂದಾಗುತ್ತಿದೆ ಎಂದು ತಿಳಿಸಿದರು.

ಸಮಾಜದಲ್ಲಿನ ಪ್ರತಿಯೊಬ್ಬರು ಪರಿಸರದ ವೃಕ್ಷಗಳನ್ನು ಉಳಿಸಿ, ಬೆಳೆಸಲು ಕಾಳಜಿ ವಹಿಸಬೇಕು. ಮರ ಗಿಡಗಳ ಉಪಯೋಗವನ್ನು ನಾವುಗಳು ಅರಿತಾಗ ಮಾತ್ರ ಸಸ್ಯದ ಮಹತ್ವ ತಿಳಿಯಲಿದೆ ಎಂದ ಅವರು, ಪರಿಸರ ಮನುಷ್ಯನ ಅವಿಭಾಜ್ಯ ಅಂಗವಾಗಿದ್ದು ಹಾನಿಗೊಳಗಾಗದಂತೆ ಜಾಗ್ರತೆ ವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಹಸಿರು, ನೀರು ಜೀವ ಸಂಕುಲಕ್ಕೆ ಮಹತ್ವ ನೀಡುತ್ತದೆ. ಕುಡಿಯುವ ನೀರು ಪ್ರಾಮುಖ್ಯತೆ ಬಹುಶಃ ರಾಜಧಾನಿ ನಿವಾಸಿಗಳಿಗೆ ಅರಿವಿದೆ. ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಪಡಬೇಕು. ಕರಾವಳಿ ಭಾಗದಲ್ಲೆ ನೀರಿನ ಅಭಾವ ಉಂಟಾಗಿತ್ತು. ನೀರಿನ ಬಗ್ಗೆ ನಿರ್ಲಕ್ಷ್ಯ ತೋರುವುದನ್ನು ಕೈಬಿಟ್ಟು ಹೆಚ್ಚಿನ ಮಹತ್ವ ಕೊಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಕೃಷ್ಣಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. 18ರ ಪ್ರಾಯದ ಮುನ್ನ ದ್ವಿಚಕ್ರ ವಾಹನ ಚಲಾಯಿಸುವುದು ಕಾನೂನಿನಲ್ಲಿ ಅಪರಾಧ. ಹೀಗಾಗಿ ಲೈಸೆನ್ಸ್ ಪಡೆದುಕೊಂಡು ಬೈಕ್ ಅಥವಾ ಕಾರು ಚಲಾಯಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ಪಿ.ತನೋಜ್‍ಕುಮಾರ್, ವಿದ್ಯಾರ್ಥಿ ಗಳಿಗೆ ಸಾಮಾಜಿಕ ನ್ಯಾಯ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಲಾಗಿದೆ. ಸಮಾಜದಲ್ಲಿ ಸಾತ್ವಿಕ ಬದುಕು ರೂಪಿಸಿಕೊಳ್ಳುವ ಪಾಠವನ್ನು ತಜ್ಞರಿಂದ ತಿಳಿಸುವ ಕಾರ್ಯ ಮಾಡಿದ್ದು, ಈ ನೀತಿಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕಿದೆ ಎಂದರು.

ವಕೀಲ ಹಳೇಕೋಟೆ ತೇಜಸ್ವಿ ಸಾಮಾಜಿಕ ನ್ಯಾಯ, ಕೃಷಿ ಅಧಿಕಾರಿ ವೆಂಕಟೇಶ್ ಎಸ್.ಚವ್ಹಾಣ್‌ ಹಸಿರು, ನೀರು ಹಾಗೂ ಸರ್ಕಾರಿ ವೈದ್ಯ ಡಾ.ಎಂ.ಚಂದ್ರಶೇಖರ್ ಆರೋಗ್ಯ ಮತ್ತು ಸ್ವಚ್ಛಾತೆ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಜಿ.ಬಿ.ವಿರೂಪಾಕ್ಷ, ರೋಟರಿ ಸಹಾಯಕ ರಾಜ್ಯಪಾಲ ನಸೀನ್‍ ಹುಸೈನ್, ವಲಯ ಸೇನಾನಿ ಜಿ.ಎಲ್.ವೆಂಕಟೇಶ್, ರೋಟರಿ ಕಾರ್ಯದರ್ಶಿ ನಾಗೇಶ್ ಕೆಂಜಿಗೆ, ಸದಸ್ಯರಾದ ಎಂ.ಆನಂದ್, ಗುರು ಮೂರ್ತಿ, ರುದ್ರೇಶ್, ವಿವೇಕ್, ಸುರೇಶ್, ರಾಘವೇಂದ್ರ ಉಪಸ್ಥಿತರಿದ್ದರು.13 ಕೆಸಿಕೆಎಂ 2

ಚಿಕ್ಕಮಗಳೂರಿನ ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಜಿಲ್ಲಾ ರೋಟರಿ ಕಾಫಿ ಲ್ಯಾಂಡ್ ನಿಂದ ಶುಕ್ರವಾರ ಏರ್ಪಡಿಸಿದ್ಧ ಜಿಲ್ಲಾ ಯೋಜನಾ ಕಾರ್ಯಕ್ರಮವನ್ನು ರೋಟರಿ ಕಾಫಿ ಲ್ಯಾಂಡ್ ಜಿಲ್ಲಾ ರಾಜ್ಯಪಾಲ ದೇವಾನಂದ್ ಉದ್ಘಾಟಿಸಿದರು.