ವಸತಿ ಶಾಲೆ ಮಕ್ಕಳಿಗೆ ಕೊಳೆತ ತರಕಾರಿ, ಅರೆಬೆಂದ ಅನ್ನ!

| Published : Jul 28 2025, 12:37 AM IST

ಸಾರಾಂಶ

ವಸತಿ ಶಾಲೆಯ ಮುಂಭಾಗದಲ್ಲಿ ಮಕ್ಕಳ ಪಾಲಕರು ಪತ್ರಕರ್ತರ ಮುಂದೆ ವಸತಿ ನಿಲಯದ ಅವ್ಯವಸ್ಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು

ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ

ಪಟ್ಟಣದ ಹೊರ ವಲಯದಲ್ಲಿರುವ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಮಕ್ಕಳು ನಿತ್ಯ ಅರೆಬೆಂದ ಅನ್ನ, ಕೊಳೆತ ತರಕಾರಿ ಸಾಂಬಾರು ತಿನ್ನಲಾಗದೇ ವಸತಿ ನಿಲಯ ಬಿಟ್ಟು ಮನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

೬ರಿಂದ ೧೦ನೇ ತರಗತಿ ವರೆಗೆ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಓದುತ್ತಿದ್ದು, ಶನಿವಾರ ಪಂಚಮಿ ಹಬ್ಬದ ರಜೆಗೆಂದು ತೆರಳಲು ಸಜ್ಜಾದ ಮಕ್ಕಳಿಗೆ ಮಧ್ಯಾಹ್ನ ೩ ಗಂಟೆಯಾದರೂ ಊಟ ನೀಡದೇ ಇರುವುದನ್ನು ಮಕ್ಕಳ ಪಾಲಕರು ಕಂಡು ಆಕ್ರೋಶಗೊಂಡರು.

ವಸತಿ ಶಾಲೆಯ ಮುಂಭಾಗದಲ್ಲಿ ಮಕ್ಕಳ ಪಾಲಕರು ಪತ್ರಕರ್ತರ ಮುಂದೆ ವಸತಿ ನಿಲಯದ ಅವ್ಯವಸ್ಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಹಾಲಿಲ್ಲದ ಚಹಾ, ಎಣ್ಣೆಯಿಲ್ಲದ ದೋಸೆ ಇದು ವಸತಿ ಶಾಲೆಯ ಪ್ರಮುಖ ಖಾದ್ಯವಾಗಿದ್ದು, ಗುಣಮಟ್ಟದ ಊಟ, ಉಪಾಹಾರ ಸಿಗದೇ ಮಕ್ಕಳು ಪರದಾಡುತ್ತಿದ್ದಾರೆ ಎಂದರು.

ಮೆನು ಚಾರ್ಟ್‌ ಪಾಲನೆ ಇಲ್ಲ:

ವಸತಿ ನಿಲಯದಲ್ಲಿ ಹೆಸರಿಗೆ ಮಾತ್ರ ಮೆನು ಚಾರ್ಟ್‌ ಹಾಕಿದ್ದು, ವಾರದ ಒಂದು ದಿನವೂ ಅದರಂತೆ ಊಟ, ಉಪಾಹಾರ, ಲಘು ಉಪಾಹಾರ ನೀಡುವುದಿಲ್ಲ. ಕಳಪೆ ಮಟ್ಟದ ತರಕಾರಿ ಹಾಗೂ ದವಸ ಧಾನ್ಯಗಳನ್ನು ಹಾಕದೇ ಅಡುಗೆ ಮಾಡುವದು ಇಲ್ಲಿನ ವಾಸ್ತವ ಸ್ಥಿತಿ.

೨೫೦ ಮಕ್ಕಳಿಗೆ ನಿಯಮಾನುಸಾರ ತರಕಾರಿ ಒದಗಿಸಿದರೆ ಗುಣಮಟ್ಟದ ಅಡುಗೆ ಮಾಡುವದಕ್ಕೆ ನಾವು ಸಿದ್ಧ. ಸಂಬಂಧಿಸಿದವರು ಕಡಿಮೆ ನೀಡುವುದರ ಪರಿಣಾಮ ಮಕ್ಕಳಿಗೆ ಕಳಪೆ ಆಹಾರ ಒದಗಿಸುವುದು ನಮಗೆ ಅನಿವಾರ್ಯವಾಗಿದೆ ಎನ್ನುತ್ತಾರೆ ಅಡುಗೆಯವರು.

ಒಂದು ಹೊತ್ತಿಗೆ ನಾಲ್ಕು ಕೆಜಿ ಬೇಳೆ ಕೊಡುವ ಸ್ಥಳದಲ್ಲಿ ಎರಡರಿಂದ ಎರಡೂವರೆ ಕೆಜಿ ಬೇಳೆ, ಒಂದು ಕೆಜಿ ಸಕ್ಕರೆ, 250 ಗ್ರಾಂ ಚಹಾಪುಡಿ ನೀಡಿ ಎಲ್ಲರಿಗೂ ಇದರಲ್ಲಿಯೇ ಪೂರೈಸಿ ಎಂದು ಹೇಳುತ್ತಾರೆ, ಇದು ಹೇಗೆ ಸಾಧ್ಯ? ಎಂದು ಅಡುಗೆ ಸಿಬ್ಬಂದಿ ಹೇಳುತ್ತಾರೆ.

ಇವತ್ತಿನ ಅಡುಗೆ ಬೇಡ:

ಹಬ್ಬಕ್ಕೆ ರಜೆ ಘೋಷಿಸಿದ ಕಾರಣ ಪಾಲಕರು ವಸತಿ ಶಾಲೆಗೆ ಬಂದು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಇವತ್ತಿನ ಅಡುಗೆ ಮಾಡುವದು ಬೇಡ ಎಂಬ ಸೂಚನೆ ಬಂದ ಹಿನ್ನೆಲೆಯಲ್ಲಿ ಇಂದು ನಾವು ಅಡುಗೆ ಮಾಡಿಲ್ಲ. ಆದರೆ ಪಾಲಕರು ಬಂದು ನಮ್ಮ ಮಕ್ಕಳಿಗೆ ಊಟವಿಲ್ಲ ಎಂದು ರಂಪಾಟ ಮಾಡಿದ ಮೇಲೆ ಶಾಲೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕೂಡಲೇ ಅಡುಗೆ ಮಾಡಿ ಎಂದು ದವಸಧಾನ್ಯ ನೀಡಿದ ಮೇಲೆ ಇದ್ದುದರಲ್ಲಿಯೇ ಅಡುಗೆ ಮಾಡಿ ಮಕ್ಕಳಿಗೆ ಉಣಬಡಿಸಿದ್ದೇವೆ ಎಂದು ತಿಳಿಸಿದರು.

ಸರ್ಕಾರದ ನಿಯಮದ ಪ್ರಕಾರ ಒಂದು ತಿಂಗಳಲ್ಲಿ ಕನಿಷ್ಠ ಮೂರು ಬಾರಿ ಚಿಕನ್ ಊಟ ನೀಡಬೇಕಿದೆ. ಹಲವು ದಿನಗಳಿಂದ ಮಕ್ಕಳು ಮೊಟ್ಟೆ ಸಹ ಕಂಡಿಲ್ಲ. ಮಕ್ಕಳ ಪೌಷ್ಟಿಕಾಂಶ ಸಮಸ್ಯೆ ಎದುರಿಸಬಾರದೆಂದು ಸರ್ಕಾರ ಸಾಕಷ್ಟು ದುಡ್ಡನ್ನು ಸುರಿಸಿದರೂ ಮಕ್ಕಳಿಗೆ ಮಾತ್ರ ಅದು ತಲುಪುತ್ತಿಲ್ಲ ಎನ್ನುವದು ಪಾಲಕರ ಆಕ್ರೋಶವಾಗಿದೆ.

೨೫೦ ಹೆಣ್ಣು ಮಕ್ಕಳ ಸಂಖ್ಯೆ ಹೊಂದಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಅಧೋಗತಿಗೆ ಇಳಿಯಲು ಮೇಲ್ವಿಚಾರಕ ಹಾಗೂ ಆಡಳಿತ ವಿಭಾಗ ಸಂಪೂರ್ಣ ವಿಫಲಗೊಂಡಿದೆ.

ಕಳೆದ ಒಂದು ತಿಂಗಳ ಹಿಂದೆ ಎಲ್ಲವು ಚೆನ್ನಾಗಿತ್ತು. ಇತ್ತೀಚೆಗೆ ಶಾಲೆಯ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಇದಕ್ಕೆ ಯಾರು ಕಾರಣ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದ್ದರೂ ಅದನ್ನು ಬಳಸಿಕೊಳ್ಳಲು ಸಂಪೂರ್ಣ ವಿಫಲರಾಗಿದ್ದಾರೆ. ಇದೇ ರೀತಿ ಮುಂದುವರೆದರೆ ನಮ್ಮ ಮಕ್ಕಳನ್ನು ವಸತಿ ಶಾಲೆಗೆ ಕಳುಹಿಸುವುದಿಲ್ಲ. ನಮ್ಮ ಮಕ್ಕಳು ನಮಗೆ ಭಾರವಾಗಿಲ್ಲ. ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬಿದ್ದರೆ ಯಾರು ಹೊಣೆಗಾರರು ಎಂದು ಹೆಸರು ಹೇಳದ ಮಕ್ಕಳ ತಂದೆ -ತಾಯಿ ಕಿಡಿಕಾರಿದರು.ವಸತಿ ಶಾಲೆಯಲ್ಲಿ ಸಣ್ಣ ಪುಟ್ಟ ಅವ್ಯವಸ್ಥೆ ಆಗಿರಬಹುದು. ನಾನು ಈ ಶಾಲೆಗೆ ವರ್ಗಾವಣೆಯಾಗಿ ಬಂದು ಕೇವಲ ೧೫ ದಿನಗಳು ಕಳೆದಿವೆ. ಶಾಲೆಗೆ ವಾರ್ಡನ್ ಇಲ್ಲದಿರುವದು ಇದಕ್ಕೆ ಮುಖ್ಯಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಅವ್ಯವಸ್ಥೆ ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ವಸತಿ ನಿಲಯದ ಮುಖ್ಯ ಶಿಕ್ಷಕಿ ಡಿ.ಸಿ. ನರೇಗಲ್ ತಿಳಿಸಿದ್ದಾರೆ.