ಸಾರಾಂಶ
ಶಿರಸಿ: ಶಿರಸಿ-ಹಾವೇರಿ ರಸ್ತೆಯಲ್ಲಿ ಸಂಚಾರ ಮಾಡುವುದು ಕಷ್ಟಸಾಧ್ಯವಾಗಿದೆ. ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದ ಅಮ್ಮಾಪುರಿ ಇನ್ಫಾಸ್ಟಕ್ಟರ್ ನಿರ್ವಹಣೆ ಮಾಡದಿರುವುದರಿಂದ ಜನಸಾಮಾನ್ಯರು ಹೈರಾಣಾಗುವಂತಾಗಿದೆ. ೫ ದಿನದೊಳಗಡೆ ನಗರದ ನಿಲೇಕಣಿಯಿಂದ ನಾಲ್ಕರಕ್ರಾಸ್‌ವರೆಗಿನ ಹೊಂಡ-ಗುಂಡಿಗಳನ್ನು ಮುಚ್ಚಬೇಕು. ಇಲ್ಲವಾದಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಎಚ್ಚರಿಕೆ ನೀಡಿದರು.
ಅವರು ಶನಿವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿರಸಿ ನಗರದ ಮೀನು ಮಾರುಕಟ್ಟೆಯಿಂದ ನಾಲ್ಕರ ಕ್ರಾಸ್ ವರೆಗಿನ ೬೦ ಕಿ.ಮೀ ರಸ್ತೆ ಅಮ್ಮಾಪುರಿ ಕಂಪನಿಗೆ ಗುತ್ತಿಗೆ ಪಡೆದಿದೆ. ಈ ರಸ್ತೆಯಲ್ಲಿ ಬೃಹತ್ ಹೊಂಡಗಳಿಂದ ವಾಹನ ಸವಾರರು ತೀವ್ರ ತೊಂದರೆ ಪಡುವಂತಾಗಿದೆ. ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದ ಅಮ್ಮಾಪುರಿ ಕಂಪನಿಗೆ ನಿಯತ್ತು ಇಲ್ಲ. ಜನಪ್ರತಿನಿಧಿಗಳ ಮಾನ ಕಳೆಯುವ ಕೆಲಸ ಮಾಡುತ್ತಿದೆ. ಮಳೆಗಾಲದಲ್ಲಿ ತಾತ್ಕಾಲಿಕ ನಿರ್ವಹಣೆ ಮಾಡುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಶಾಸಕ ಭೀಮಣ್ಣ ನಾಯ್ಕ ಸೂಚನೆ ನೀಡಿದರೂ, ಹೊಂಡ ಮುಚ್ಚುವ ಕಾರ್ಯ ಆರಂಭಿಸಿಲ್ಲ. ಶಾಸಕರ ಹಾಗೂ ಸಂಸದರ ಮಾತಿಗೆ ಕಿಮ್ಮತ್ತು ನೀಡುತ್ತಿಲ್ಲ. ಹೋರಾಟದ ರೂಪುರೇಷೆ ಬದಲಾಗಲಿದೆ ಎಂದರು.ಹೊನ್ನಾವರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ ಅವರಿಗೆ ದೂರವಾಣಿ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಅಮ್ಮಾಪುರಿ ಕಂಪನಿಗೆ ದೂರವಾಣಿ ಕರೆ ಮಾಡಿದರೆ ಹೊಂಡ ಮುಚ್ಚುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೆ ಹೊಂಡಗಳು ಹಾಗೆಯೇ ಇದೆ. ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರಾಗಿ ಆಯ್ಕೆಯಾದ ಬಳಿಕ ಅರಣ್ಯ ಇಲಾಖೆಯ ಅನುಮತಿ ಕೊಡಿಸಿದ್ದಾರೆ. ಅಲ್ಲದೇ ಶಾಸಕರು ಸಹ ಬೆಂಬಲ ನೀಡಿದ್ದಾರೆ. ೫ ದಿನದ ಒಳಗಡೆ ಹೊಂಡ-ಗುಂಡಿ ಮುಚ್ಚಬೇಕು. ಮಳೆಗಾಲ ಮುಗಿದ ಬಳಿಕ ಕಾಮಗಾರಿ ಆರಂಭಿಸಬೇಕು. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆಯಲಾಗುತ್ತದೆ. ಇಲ್ಲವಾದಲ್ಲಿ ಪಕ್ಷಾತೀತ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.ನಿವೃತ್ತ ಎಂಜಿನಿಯರ್ ವಿ.ಎಂ. ಭಟ್ಟ ಮಾತನಾಡಿ, ಕುಮಟಾ-ತಡಸ್ ರಾಜ್ಯ ಹೆದ್ದಾರಿ ೬೦ ಕಿ.ಮೀ. ವ್ಯಾಪ್ತಿಗೆ ಬರುತ್ತದೆ. ಅದನ್ನು ದುರಸ್ತಿ ಮಾಡಬೇಕು. ಅಲ್ಲದೇ ಅದನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೇಗೇರಿಸಲು ಸಂಸದರು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಶಿರಸಿ, ಯಲ್ಲಾಪುರ ಹಾಗೂ ಶಿಗ್ಗಾಂವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಹೆದ್ದಾರಿ ಹಾದುಗೋಗಿದೆ. ಮೂರು ಕ್ಷೇತ್ರದ ಶಾಸಕರು ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಲು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ನಿವೃತ್ತ ಆರ್‌ಟಿಓ ಜಿ.ಎಸ್.ಹೆಗಡೆ, ಜಿಪಂ ಮಾಜಿ ಸದಸ್ಯ ಹಾಲಪ್ಪ ಜಕ್ಕಣ್ಣನವರ್, ಪ್ರಮುಖರಾದ ಮಹೇಂದ್ರ ಹೆಗಡೆ ಸಾಲೇಕೊಪ್ಪ, ನಾಗರಾಜ, ಅನಂತ ಬಾಳೆಕೊಪ್ಪ ಮತ್ತಿತರರು ಇದ್ದರು.