ಕನ್ನಡಪ್ರಭ ವಾರ್ತೆ ಮಹಾಲಿಂಗಪುರಇತಿಹಾಸ ಪ್ರಸಿದ್ಧ ಶ್ರೀಗುರು ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಈ ಬಾರಿ ರೊಟ್ಟಿ–ಬುತ್ತಿ ಕೊಡುಗೆ ಕಾರ್ಯಕ್ರಮ ವಿಶೇಷವಾಗಿ ಆಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಇತಿಹಾಸ ಪ್ರಸಿದ್ಧ ಶ್ರೀಗುರು ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಈ ಬಾರಿ ರೊಟ್ಟಿ–ಬುತ್ತಿ ಕೊಡುಗೆ ಕಾರ್ಯಕ್ರಮ ವಿಶೇಷವಾಗಿ ಆಯೋಜಿಸಲಾಗಿದೆ. ನಗರದ ಎಲ್ಲ ಬಡಾವಣೆಗಳು ಹಾಗೂ ಸುತ್ತಮುತ್ತಲಿನ 9 ಗ್ರಾಮಗಳ ಜನರು ಜಾತ್ರೆಯ ಅನ್ನಪ್ರಸಾದಕ್ಕಾಗಿ ತಮ್ಮ ಶಕ್ತಾನುಸಾರ ರೊಟ್ಟಿ ಹಾಗೂ ವಿವಿಧ ಆಹಾರ ಪದಾರ್ಥಗಳನ್ನು ಸಮರ್ಪಿಸಲಿದ್ದಾರೆ ಎಂದು ಜಾತ್ರಾ ಕಮಿಟಿಯ ಹಿರಿಯ ಮಹಾಂತೇಶ ಹಿಟ್ಟಿನಮಠ ತಿಳಿಸಿದರು.ಪಟ್ಟಣದ ಅರಸ್ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.23ರಂದು ಬಸ್ ನಿಲ್ದಾಣದ ಮುಂಭಾಗದ ಗಣೇಶ ದೇವಸ್ಥಾನದಿಂದ ಪುರ ಮೆರವಣಿಗೆ ಮೂಲಕ ರೊಟ್ಟಿ ಜಾತ್ರೆಗೆ ಚಾಲನೆ ದೊರೆಯಲಿದೆ. ಬಸವೇಶ್ವರ ವೃತ್ತದಿಂದ ಮಹಾಲಿಂಗೇಶ್ವರರ ಅನುಭವ ಮಂಟಪದವರೆಗೆ ನಡೆಯುವ ಮೆರವಣಿಗೆಯಲ್ಲಿ ನಗರದ ವಿವಿಧ ಬಡಾವಣೆಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಪಾಲ್ಗೊಳ್ಳಲಿದ್ದಾರೆ ಎಂದರು.
ಸೆ.24ರವರೆಗೆ ರೊಟ್ಟಿ ಕೊಡುಗೆ ಕಾರ್ಯಕ್ರಮ ನಡೆಯಲಿದ್ದು, ಭಕ್ತರು ಜಾತ್ರೆಯ ಅನ್ನಪ್ರಸಾದಕ್ಕೆ ಅಗತ್ಯವಿರುವ ರೊಟ್ಟಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಸಮರ್ಪಿಸಲಿದ್ದಾರೆ. ಗ್ರಾಮೀಣ ಭಾಗದ ಜನರು ತಮ್ಮ ಮನೆಗಳಲ್ಲಿ ತಯಾರಿಸಿದ ರೊಟ್ಟಿಯನ್ನು ಅನ್ನಪ್ರಸಾದಕ್ಕಾಗಿ ನೀಡುತ್ತಿರುವುದು ಈ ಬಾರಿಯ ಜಾತ್ರೆಯ ವಿಶೇಷತೆಯಾಗಿದೆ ಎಂದರು.ಸೆ.25ರಂದು ಜಠೋತ್ಸವದೊಂದಿಗೆ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದ್ದು, ಸೆ.26ರಂದು ಪ್ರಥಮ ರಥೋತ್ಸವ ಹಾಗೂ ಸೆ.27ರಂದು ಮರು ರಥೋತ್ಸವ ನಡೆಯಲಿದೆ. ಸೆ.28ರಂದು ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿ ಆಯೋಜಿಸಿದ್ದು, ವಿವಿಧ ಭಾಗಗಳಿಂದ ಕುಸ್ತಿ ಪಟುಗಳು ಆಗಮಿಸಲಿದ್ದಾರೆ. ಕುಸ್ತಿ ಪಂದ್ಯಾವಳಿ ಜಾತ್ರೆಯ ಪ್ರಮುಖ ಆಕರ್ಷಣೆಯಾಗಲಿದೆ.
ಸೆ.29 ಮತ್ತು 30ರಂದು ರಸಮಂಜರಿ ಕಾರ್ಯಕ್ರಮಗಳು ನಡೆಯಲಿದ್ದು, ಚೌಡಕಿ ಪದಗಳು, ಜಾನಪದ ಪಾರಿಜಾತ ಸೇರಿದಂತೆ ವಿವಿಧ ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹಿಟ್ಟಿನಮಠ ವಿವರಿಸಿದರು.ಹಿರಿಯ ಪತ್ರಕರ್ತ ಜಯರಾಮ ಶೆಟ್ಟಿ ಮಾತನಾಡಿದರು. ಇದೇ ವೇಳೆ ಜಾತ್ರೆಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳ ವಿವರಗಳನ್ನು ಒಳಗೊಂಡ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಜಾತ್ರಾ ಕಮಿಟಿ ಅಧ್ಯಕ್ಷ ರವಿಗೌಡ ಪಾಟೀಲ, ಮಾಜಿ ಅಧ್ಯಕ್ಷ ಲಕ್ಷ್ಮಣಗೌಡ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಹಿರಿಯರಾದ ಈರಪ್ಪ ದಿನ್ನಿಮನಿ, ಚನ್ನಪ್ಪ ಪಟ್ಟಣಶೆಟ್ಟಿ, ವಿಠ್ಠಲ ಹಲಗಣಿ, ಗುರುಪಾದಯ್ಯ ಛಟ್ಟಿ, ಮಲಕಾಜಪ್ಪ ಕುಳ್ಳೋಳಿ, ಬಲವಂತಗೌಡ ಪಾಟೀಲ, ಸುರೇಶ ಬಿದರಿ, ಮಹಾಲಿಂಗ ಮಾಳಿ, ಶಂಕರಗೌಡ ಪಾಟೀಲ, ಹರೀಶ ನಾಯಕ, ಬಸವರಾಜ ಬಂಡಿವಡ್ಡರ, ಸಿದ್ದು ಬೋಸಣ್ಣವರ, ಕಮಿಟಿ ಪದಾಧಿಕಾರಿಗಳು ಇದ್ದರು.ಕೃಷ್ಣೇಗೌಡ ಪಾಟೀಲ ಸ್ವಾಗತಿಸಿದರು. ಬಸವರಾಜ ಪಾಶ್ಚಾಪುರ ವಂದಿಸಿದರು.