ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ: ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆ ಬಗೆಹರಿಯದ ಕಾರಣ ತಾಳಿಕೋಟೆ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕಿನ ಗೊಟಗುಣಕಿ ಹಾಗೂ ಪತ್ತೇಪುರ ಪಿಟಿ ಗ್ರಾಮದ ರೈತರು ಸೋಮವಾರ ಅಹೋರಾತ್ರಿ ಧರಣಿಯನ್ನು ಪ್ರಾರಂಭಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಬೆಂಬಲ ನೀಡಿ ಮಾತನಾಡಿದರು. ಅಧಿಕಾರಿಗಳು ರೈತ ವಿರೋಧಿ ನೀತಿಯನ್ನು ಖಂಡಿಸಿದರು. ಹೊಲಗಳಿಗೆ ಹೋಗಲು ದಾರಿ ಇದ್ದರೂ ತಕರಾರು ಮಾಡುವ ರೈತರಿಗೆ ತಿಳಿ ಹೇಳಿ ದಾರಿ ಕೊಡಿಸಲು ಸರ್ಕಾರ ಈಗಾಗಲೆ ಸುತ್ತೋಲೆ ಹೊರಡಿಸಿದೆ. ಜಾರಿಯಾಗಿ ಏಳೆಂಟು ತಿಂಗಳಾದರು ಇಲ್ಲಿಯವರೆಗೂ ಯಾವೊಬ್ಬ ರೈತರ ದಾರಿ ಸಮಸ್ಯೆ ಬಗೆಹರಿಸಿದ ಉದಾಹರಣೆಗಳಿಲ್ಲ. ಸರ್ಕಾರದ ಸುತ್ತೋಲೆಯಲ್ಲಿ ತಪ್ಪು ಇದೆ ಎಂದು ತಹಸೀಲ್ದಾರ್‌ರು ಹೇಳುತ್ತಿದ್ದಾರೆ. ಇದರಿಂದ ರೈತರು ದಾರಿಗಾಗಿ ಪರಿತಪಿಸು ಪರಿಸ್ಥಿತಿ ಮುಂದುವರೆದಿದೆ. ಆದ್ದರಿಂದ, ಸರ್ಕಾರ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೇ, ರಾತ್ರಿ ವೇಳೆ ಧರಣಿ ನಿರತ ರೈತರಿಗೆ ಹೆಚ್ಚುಕಡಿಮೆಯಾದರೆ ಅದಕ್ಕೆ ತಹಸೀಲ್ದಾರ್‌ರೆ ಹೊಣೆ ಎಂದು ಹೇಳಿದರು.ತಾಳಿಕೋಟೆ ತಾಲೂಕಿನ ಗೊಟಗುಣಕಿ ಗ್ರಾಮದ ರೈತ ಸಾಹೇಬಗೌಡ ಬಿರಾದಾರ ಹಾಗೂ ಪಿ.ಟಿ ಪತ್ತೇಪೂರದ ರೈತರಾದ ಸದಾಶಿವ ಗೊಟಗುಣಕಿ ರೈತರು ಮಾತನಾಡಿ, ನಮ್ಮ ಜಮೀನಿಗೆ ಹೋಗಲು ಮೊದಲಿನಿಂದಲೂ ದಾರಿ ಇದ್ದು, ಅದೇ ರಸ್ತೆಯಿಂದ ಹೋಗುತ್ತಿದ್ದೇವು. ಆದರೆ ಇತ್ತೀಚಿನ ದಿನಗಳಲ್ಲಿ ದಾರಿ ಬಂದ್ ಮಾಡಿದ್ದಾರೆ. ಇದರಿಂದ ನಮಗೆ ಉಳುಮೆ ಮಾಡಲು ಕ್ಷಷ್ಟವಾಗಿದ್ದು, ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಾಹೇಬಗೌಡ ಬಿರಾದಾರ, ಶ್ರೀನಿವಾಸ ಗೋಟಗುಣಕಿ, ತಾಳಿಕೋಟೆ ರೈತ ಸಂಘದ ತಾಲೂಕು ಅಧ್ಯಕ್ಷ ಬಾಲ್ಲಪಗೌಡ ಲಿಂಗದಳ್ಳಿ, ಶಿವನಗೌಡ ಕರಕಳ್ಳಿ, ಅಶೋಕ ಮಾಸ್ತಿ, ಯಲ್ಲಾಲಿಂಗ ಹೂಗಾರ, ಶಂಕರಗೌಡ ಪಾಟೀಲ, ಶಂಕ್ರಮ್ಮ ರಾಜಾಪೂರ, ಶೈಲು ಬಿರಾದಾರ, ಅನೀಲ ಕುಮಾರ ರಾಜಪೂರ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.