ಸಾರಾಂಶ
ಮಂಗಳೂರು: ಮಂಗಳೂರು ಸಬ್ ಜೈಲಿನಲ್ಲಿ ಹಣಕ್ಕಾಗಿ ವಿಚಾರಣಾಧೀನ ಕೈದಿಗೆ ಸಹ ಕೈದಿಗಳೇ ಹಲ್ಲೆ ನಡೆಸಿ ರೌಡಿಸಂ ಮೆರೆದು ಹಣ ಪೀಕಿಸಿದ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕೈದಿಗಳ ಆಟಾಟೋಪ ಈ ಮೂಲಕ ಬಯಲಿಗೆ ಬಂದಿದೆ.ವಿಚಾರಣಾಧೀನ ಕೈದಿ- ಉಳ್ಳಾಲದ ಮಿಥುನ್ ಎಂಬವರು ಸಹ ಕೈದಿಗಳಿಂದಲೇ ಹಲ್ಲೆಗೀಡಾಗಿ ಹಣ ಕಳೆದುಕೊಂಡವರು. ಆರೋಪಿ ಸಹ ಕೈದಿಗಳಾದ ಧನುಷ ಭಂಡಾರಿ, ಸಚಿನ್ ತಲಪಾಡಿ, ದೀಲೇಶ ಬೆಲ್ಚಾಡ ಮತ್ತು ಲಾಯಿ ವೇಗಸ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಏನಿದು ಪ್ರಕರಣ?:ಮಿಥುನ್, ಪ್ರಕರಣವೊಂದರಲ್ಲಿ ವಿಚಾರಣಾ ಬಂಧಿಯಾಗಿ ಮಂಗಳೂರು ಸಬ್ ಜೈಲಿಗೆ ಇತ್ತೀಚೆಗೆ ದಾಖಲಾಗಿದ್ದರು. ಇವರನ್ನು ಜೈಲಿನ ಬಿ ವಿಭಾಗದ ಕೊಠಡಿ ಸಂಖ್ಯೆ 5ರಲ್ಲಿ ಇರಿಸಲಾಗಿತ್ತು. ಆರೋಪಿಗಳಾದ ಧನುಷ್ ಭಂಡಾರಿ ಮತ್ತು ಸಚಿನ್ ತಲಪಾಡಿ ಕೊಠಡಿ ಸಂಖ್ಯೆ 6ರಲ್ಲಿ ಇದ್ದರು. ಇವರಿಬ್ಬರು, ಹಣ ಪೀಕಿಸುವ ದುರುದ್ದೇಶದಿಂದ ಮಿಥುನ್ ದಾಖಲಾದ 5ನೇ ಕೊಠಡಿಯಲ್ಲಿ ಈ ಹಿಂದಿನಿಂದಲೂ ಇದ್ದ ದೀಲೇಶ ಬೆಲ್ಚಾಡ ಮತ್ತು ಲಾಯಿ ವೇಗಸ್ ಬಳಿ ಮಿಥುನ್ ಮೇಲೆ ಹಲ್ಲೆ ಮಾಡಲು ಸೂಚಿಸಿದ್ದರು.
ಅದರಂತೆ ಜುಲೈ 9ರಂದು ಸಂಜೆ 5 ಗಂಟೆಗೆ ಕಾರಾಗೃಹದ ಸಿಬ್ಬಂದಿ ಕಣ್ಣು ತಪ್ಪಿಸಿ ಆ ಇಬ್ಬರು ಬಂಧಿಗಳು ಮಿಥುನ್ ಮೇಲೆ ತೀವ್ರ ಹಲ್ಲೆ ಮಾಡುತ್ತಾ 50 ಸಾವಿರ ರು. ಕೊಡಬೇಕು. ಇಲ್ಲವಾದರೆ ಕೊಂದು ಹಾಕುತ್ತೇವೆ ಎಂದು ಹೆದರಿಸಿದ್ದಾರೆ. ಹಲ್ಲೆ ಮಾಡಿರುವ ವಿಷಯವನ್ನು ಯಾವುದೇ ಸಿಬ್ಬಂದಿ ಅಥವಾ ಅಧಿಕಾರಿಗೆ ತಿಳಿಸಬಾರದೆಂಬ ಜೀವಭಯವನ್ನೂ ಸೃಷ್ಟಿಸಿದ್ದರು. ಪ್ರಾಣ ಭಯದಿಂದ ಮಿಥುನ್ ಅವರು ಹೊಸದಾಗಿ ಬಂದಿರುವ ಜೈಲು ಅಧಿಕ್ಷಕರಿಗಾಗಲೀ, ಸಿಬ್ಬಂದಿಗೂ ತಿಳಿಸಿಲ್ಲ. ಬಳಿಕ ಆರೋಪಿ ಸಚಿನ್ ಕೊಟ್ಟಿದ್ದ ಪೋನ್ ಪೇ ನಂಬರ್‌ಗೆ ಕಾರಾಗೃಹದ ಬಂಧಿಗಳ ಫೋನ್ ಬೂತ್‌ನಿಂದ ಪತ್ನಿಗೆ ಕರೆ ಮಾಡಿ, ಅವರಿಂದ 20 ಸಾವಿರ ರು. ಹಣ ಹಾಕಿಸಿದ್ದಾರೆ.ಜುಲೈ12ರಂದು ಕಾರಾಗೃಹಕ್ಕೆ ಸಹಾಯಕ ಪೊಲೀಸ್ ಆಯಕ್ತರು ಹಾಗೂ ಬರ್ಕೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ತಪಾಸಣೆ ಮಾಡಲು ಬಂದಿದ್ದ ಸಮಯದಲ್ಲಿ ಈ ಎಲ್ಲ ವಿಚಾರವನ್ನು ಸಂತ್ರಸ್ತ ಕೈದಿಯು ಕಾರಾಗೃಹದ ಅಧೀಕ್ಷರಿಗೆ ಲಿಖಿತವಾಗಿ ತಿಳಿಸಿದ್ದರು. ಬಳಿಕ ಕಾರಾಗೃಹದ ಅಧೀಕ್ಷಕರು ಆರೋಪಿ ಬಂಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ದೂರು ನೀಡಿದ್ದಾರೆ.
ಇದರ ಹಿನ್ನೆಲೆಯಲ್ಲಿ ಆರೋಪಿ ಸಹ ಕೈದಿಗಳ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.