ನಟಿ ರಚಿತಾಗೆ ಜಗ್ಗದಾದಾ ಬಂಗಾರ ಗಿಫ್ಟ್‌?

| Published : Jul 22 2025, 12:00 AM IST

ಸಾರಾಂಶ

ಕನ್ನಡ ಚಲನಚಿತ್ರ ರಂಗದ ಕೆಲ ಪ್ರಮುಖ ಕಲಾವಿದರು ಹಾಗೂ ನಿರ್ಮಾಪಕರ ಜತೆ ಕೂಡ ಬೆಂಗಳೂರಿನ ಭಾರತಿನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗನಿಗೆ ಒಡನಾಟವಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ನಟಿ ರಚಿತಾರಾಮ್‌ ಅವರಿಗೆ ಆತ ರೇಷ್ಮೆ ಸೀರೆ, ಚಿನ್ನಾಭರಣ ಉಡುಗೊರೆ ಕೊಟ್ಟಿದ್ದ ಎನ್ನಲಾಗಿದೆ.

- ರವಿಚಂದ್ರನ್‌ ಎದುರೇ ಸೀರೆ, ಒಡವೆ ಉಡುಗೊರೆ? । ಫೋಟೋಗಳು ವೈರಲ್‌

- ರೌಡಿ ಬಿಕ್ಲು ಶಿವ ಹತ್ಯೆ ಕೇಸ್‌ನಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ

===

ಕನ್ನಡಪ್ರಭ ವಾರ್ತೆ ಬೆಂಗಳೂರು

ಕನ್ನಡ ಚಲನಚಿತ್ರ ರಂಗದ ಕೆಲ ಪ್ರಮುಖ ಕಲಾವಿದರು ಹಾಗೂ ನಿರ್ಮಾಪಕರ ಜತೆ ಕೂಡ ಬೆಂಗಳೂರಿನ ಭಾರತಿನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗನಿಗೆ ಒಡನಾಟವಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ನಟಿ ರಚಿತಾರಾಮ್‌ ಅವರಿಗೆ ಆತ ರೇಷ್ಮೆ ಸೀರೆ, ಚಿನ್ನಾಭರಣ ಉಡುಗೊರೆ ಕೊಟ್ಟಿದ್ದ ಎನ್ನಲಾಗಿದೆ.

ಕೆ.ಆರ್‌.ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜು ಅವರ ಸೋದರ ಸಂಬಂಧಿ ಹಾಗೂ ಚಲನಚಿತ್ರ ನಿರ್ಮಾಪಕ ಅನಿಲ್ ಮೂಲಕ ಸಿನಿಮಾ ರಂಗದ ಕೆಲವರು ಜಗ್ಗನಿಗೆ ಪರಿಚಯವಾಗಿದ್ದರು. ಈ ಸ್ನೇಹ ಹಿನ್ನೆಲೆಯಲ್ಲಿ ಕೆಲವು ಕಲಾವಿದರನ್ನು ಹುಟ್ಟುಹಬ್ಬ ಸೇರಿದಂತೆ ಕೆಲ ವಿಶೇಷ ದಿನಗಳಲ್ಲಿ ಭೇಟಿಯಾಗಿ ಜಗ್ಗ ದುಬಾರಿ ಬೆಲೆಯ ಉಡುಗೊರೆ ಸಹ ಕೊಟ್ಟಿದ್ದ ಎನ್ನಲಾಗಿದೆ.

ಅಂತೆಯೇ ಚಲನಚಿತ್ರ ರಂಗದ ಖ್ಯಾತ ನಟಿ ರಚಿತಾ ರಾಮ್ ಅವರಿಗೆ ರೇಷ್ಮೆ ಸೀರೆ ಹಾಗೂ ಚಿನ್ನಾಭರಣವನ್ನು ಆತ ಉಡುಗೊರೆ ಕೊಟ್ಟಿದ್ದ ಎಂದು ತಿಳಿದು ಬಂದಿದೆ. ಹಿರಿಯ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಮ್ಮುಖದಲ್ಲಿ ರಚಿತಾ ರಾಮ್ ಅವರಿಗೆ ದುಬಾರಿ ಉಡುಗೊರೆ ಕೊಟ್ಟು ಜಗ್ಗ ತೆಗೆಸಿಕೊಂಡಿದ್ದ ಎನ್ನಲಾದ ಫೋಟೋಗಳು ಸೋಮವಾರ ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಲ್ಲದೆ ಕೆಲ ಸಿನಿಮಾಗಳಿಗೆ ಪರೋಕ್ಷವಾಗಿ ಆತ ಬಂಡವಾಳ ಸಹ ತೊಡಗಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಮೂಲಗಳು ಹೇಳಿವೆ.

ಕೊಲೆ ಪ್ರಕರಣದ ತನಿಖೆಗೂ ಚಲನಚಿತ್ರ ಕಲಾವಿದರ ಜತೆ ಜಗ್ಗನ ಸ್ನೇಹಕ್ಕೂ ಸದ್ಯ ಯಾವುದೇ ಸಂಬಂಧವಿರುವಂತೆ ಕಂಡು ಬಂದಿಲ್ಲ. ತಾನು ಪ್ರಭಾವಿ ಎಂದು ಬಿಂಬಿಸಿಕೊಳ್ಳಲು ನಟ-ನಟಿಯರ ಜತೆ ಆತ ಫೋಟೋ ತೆಗೆಸಿಕೊಂಡಿರಬಹುದು. ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಬಂಧನದ ಬಳಿಕ ಸತ್ಯ ಗೊತ್ತಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೌಡಿ ಕೊಲೆ ಪ್ರಕರಣದ ಬಳಿಕ ಹೊರರಾಜ್ಯಗಳಲ್ಲಿ ಜಗ್ಗ ತಲೆಮರೆಸಿಕೊಂಡಿದ್ದಾನೆ. ಈ ಹತ್ಯೆ ಕೃತ್ಯದ ಬಳಿಕ ಆತನೊಂದಿಗೆ ಒಡನಾಟ ಹೊಂದಿದ್ದ ಎಂಬ ಆರೋಪದ ಮೇರೆಗೆ ಕೆ.ಆರ್‌.ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜು ಅವರಿಗೆ ಪೊಲೀಸರ ತನಿಖೆ ಬಿಸಿ ತಟ್ಟಿದೆ. ಪ್ರಯಾಗ ರಾಜ್‌ನಲ್ಲಿ ನಡೆದ ಕುಂಭಮೇಳಕ್ಕೆ ಜಗ್ಗನ ಜತೆ ಶಾಸಕರು ತೆರಳಿದ್ದರು ಮಾತುಗಳಿಗೆ ಸಾಕ್ಷಿ ಎನ್ನುವಂತೆ ಫೋಟೋಗಳು ಬಹಿರಂಗವಾಗಿದ್ದವು. ಈಗ ಚಲನಚಿತ್ರ ರಂಗದ ನಂಟಿನ ಬಗ್ಗೆ ನಟ-ನಟಿಯರ ಜತೆ ಜಗ್ಗನ ಫೋಟೋಗಳು ಹೊರ ಬಂದಿವೆ.