ಹಲವು ಗಂಭೀರವಾದ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್‌ವೊಬ್ಬ ಪತ್ನಿಯಿಂದ ಹಲ್ಲೆಗೊಳಗಾಗಿದ್ದು, ಇದರಿಂದ ಆತಂಕಕ್ಕೆ ಒಳಗಾದ ಆತ ರಕ್ಷಣೆ ಕೋರಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಲವು ಗಂಭೀರವಾದ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್‌ವೊಬ್ಬ ಪತ್ನಿಯಿಂದ ಹಲ್ಲೆಗೊಳಗಾಗಿದ್ದು, ಇದರಿಂದ ಆತಂಕಕ್ಕೆ ಒಳಗಾದ ಆತ ರಕ್ಷಣೆ ಕೋರಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ.

ಸೈಯದ್‌ ಅಸ್ಗರ್‌ ಪೊಲೀಸರ ಮೊರೆ ಹೋಗಿರುವ ರೌಡಿಶೀಟರ್‌. ಎರಡನೇ ಪತ್ನಿಯನ್ನು ಬಿಟ್ಟು ತನ್ನೊಂದಿಗೆ ಸಂಸಾರ ಮಾಡಬೇಕು ಎಂದು ಮೊದಲ ಪತ್ನಿ ರೌಡಿಶೀಟರ್‌ ಪತಿ ಮೇಲೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿದ್ದು, ಈ ಸಂಬಂಧ ಜೆ.ಜೆ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೈಯದ್‌ ಅಸ್ಗರ್‌ಗೆ ಮೊದಲ ಪತ್ನಿ ಮತ್ತು ಮಕ್ಕಳು ಇದ್ದಾರೆ. ಆದರೂ ಈತ ಬನಶಂಕರಿ ನಿವಾಸಿ ನಗ್ಮಾ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದು, ಮೂವರು ಮಕ್ಕಳು ಇದ್ದಾರೆ. ಇತ್ತೀಚೆಗೆ ಮೊದಲ ಪತ್ನಿ ಜತೆ ಜಗಳ ಮಾಡಿಕೊಂಡಿದ್ದ ಸೈಯದ್‌ ಅಸ್ಗರ್‌, ಆಕೆಯಿಂದ ದೂರವಾಗಿದ್ದ.ಇದರಿಂದ ಕೋಪಗೊಂಡ ಆಕೆ ಕೆಲ ದಿನಗಳ ಹಿಂದೆ ಸೈಯದ್‌ ಅಸ್ಗರ್‌ ಮೇಲೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಪರಿಣಾಮ ತಲೆ ಹಾಗೂ ಕಣ್ಣಿನ ಭಾಗದಲ್ಲಿ ಗಾಯಗೊಂಡಿದ್ದ ಸೈಯದ್‌ ಅಸ್ಗರ್‌ಗೆ 2ನೇ ಪತ್ನಿ ನಗ್ಮಾ ಚಿಕಿತ್ಸೆ ಕೊಡಿಸಿ ತಾನೇ ಖುದ್ದು ಜೆ.ಜೆ.ನಗರ ಠಾಣೆಗೆ ಕರೆತಂದು ಮೊದಲ ಪತ್ನಿ ವಿರುದ್ಧ ದೂರು ಕೊಡಿಸಿದ್ದಾಳೆ. ಪೊಲೀಸರು ದೂರು ಸ್ವೀಕರಿಸಿ ತನಿಖೆ ಕೈಗೊಂಡಿದ್ದಾರೆ.

ವಿಚಾರಣೆ ವೇಳೆ ರೌಡಿಶೀಟರ್ ಮತ್ತು ಆತನ 2ನೇ ಪತ್ನಿಯ ಹೈಡ್ರಾಮಾ ಬಯಲಾಗಿದೆ. ಸಣ್ಣ ಗಾಯಕ್ಕೆ ದೊಡ್ಡ ಬ್ಯಾಡೆಂಜ್ ಕಟ್ಟಿಕೊಂಡು ಬಂದು ಠಾಣೆ ಮುಂದೆ ನಾಟಕವಾಡಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಇಬ್ಬರಿಗೂ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಇನ್ನು ಹಲ್ಲೆ ನಡೆಸಿದ ಸೈಯದ್‌ ಅಸ್ಗರ್‌ ಮೊದಲ ಪತ್ನಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತಿಗೆ ವಿಡಿಯೋ ಮಾಡಿ ಬೆದರಿಕೆ:

ಸೈಯದ್ ಅಸ್ಗರ್‌ನ ಮೊದಲ ಪತ್ನಿ ಮೊದಲು ವಿಡಿಯೋ ಮಾಡಿ ಬೆದರಿಕೆ ಹಾಕಿದ್ದು, ನಿನ್ನ ತಲೆ ಕಡಿಯುತ್ತೇನೆ, ಎರಡು ದಿನ ಕಾಯುತ್ತಿರು ಎಂದು ಎಚ್ಚರಿಕೆ ನೀಡಿದ್ದಾಳೆ. ಮಾರಕಾಸ್ತ್ರ ತೋರಿಸಿ ವಿಡಿಯೋ ಮಾಡಿದ್ದ ಬೆನ್ನಲ್ಲೇ ಪತಿಯ ಮೇಲೆ ಆಕೆ ದಾಳಿ ಮಾಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ದೂರಿನಲ್ಲಿದೆ?

ಪಾದರಾಯನಪುರ ವಾಸವಾಗಿರುವ ಮೊದಲನೇ ಪತ್ನಿ ಸೈಯದ್‌ ರಿಜ್ವಾನ, ಅತ್ತೆ ಸುಲ್ತಾನ ಮತ್ತು ಸಂಬಂಧಿ ಅಫು ಜ.3 ರಂದು ತನ್ನನ್ನು ಮನೆಗೆ ಬರುವಂತೆ ಕರೆದಿದ್ದು, ಅದರಂತೆ ನಾನು ರಾತ್ರಿ 10.30 ರ ಸುಮಾರಿಗೆ ಮನೆಗೆ ಹೋಗಿದ್ದು, ಈ ವೇಳೆ ಮೂವರು ಸೇರಿಕೊಂಡು ಏಕಾಏಕಿ ಜಗಳ ತೆಗೆದು ನೀನು ಎರಡನೇ ಹೆಂಡತಿಯನ್ನು ನಗ್ಮಾನನ್ನು ಬಿಟ್ಟು ನಮ್ಮೊಂದಿಗೆ ಇರಬೇಕು ಇಲ್ಲದಿದ್ದರೆ ನಿನ್ನ ಸುಮ್ಮನೆ ಬಿಡುವುದಿಲ್ಲವೆಂದು ಹೇಳಿ ಕೊಲೆ ಮಾಡುವ ಬೆದರಿಕೆ ಹಾಕಿ ಅವಾಚ್ಯ ಶಬ್ದದಿಂದ ನಿಂದಿಸಿದ್ದರು. ಬಳಿಕ ಸೈಯದ್‌ ರಿಜ್ವಾನ ಚಾಕುವಿನಿಂದ ಎಡಕಣ್ಣಿನ ಕೆಳಭಾಗಕ್ಕೆ ಮುಖಕ್ಕೆ ಚುಚ್ಚಿ ರಕ್ತಗಾಯಗೊಳಿಸಿದ್ದಳು ಎಂದು ಸೈಯದ್‌ ಅಸ್ಗರ್‌ ದೂರಿನಲ್ಲಿ ಉಲ್ಲೇಖಿಸಿದ್ದಾನೆ.