ಸಾಲು ಸಾಲು ರಜೆಯಿಂದ ಜಿಲ್ಲೆಗೆ ಬಂದ ಪ್ರವಾಸಿಗರ ದಂಡು

| Published : Dec 24 2023, 01:45 AM IST

ಸಾಲು ಸಾಲು ರಜೆಯಿಂದ ಜಿಲ್ಲೆಗೆ ಬಂದ ಪ್ರವಾಸಿಗರ ದಂಡು
Share this Article
  • FB
  • TW
  • Linkdin
  • Email

ಸಾರಾಂಶ

ಮುರುಡೇಶ್ವರದ ಸ್ಕೂಬಾ ಡೈವಿಂಗ್, ಸೀ ವಾಕ್, ದಾಂಡೇಲಿಯಲ್ಲಿ ಜಲಸಾಹಸ ಕ್ರೀಡೆ, ಯಾಣದ ಭೈರವೇಶ್ವರ ಶಿಖರ, ಯಲ್ಲಾಪುರದ ಸಾತೊಡ್ಡಿ, ವಿಭೂತಿ, ಮಾಗೋಡ, ಸಿದ್ದಾಪುರದ ಉಂಚಳ್ಳಿ ಜಲಪಾತ, ಶಿರಸಿಯ ಮಾರಿಕಾಂಬಾ, ಬನವಾಸಿಯ ಮಧುಕೇಶ್ವರ, ಮುರುಡೇಶ್ವರ, ಗೋಕರ್ಣದ ಆತ್ಮಲಿಂಗ, ಶಿರಸಿಯ ಸಹಸ್ರಲಿಂಗ, ಕಾರವಾರ, ಕುಮಟಾ, ಹೊನ್ನಾವರ, ಮುರುಡೇಶ್ವರ, ಗೋಕರ್ಣದ ಕಡಲ ತೀರಗಳು, ಜನಸಾಹಸಿ ಚಟುವಟಿಕೆಗಳು ಪ್ರವಾಸಿಗರ ಆಕರ್ಷಣೀಯ ಸ್ಥಳ

ಕಾರವಾರ: ಸತತ ಮೂರು ದಿನ ರಜೆ ಇರುವುದರಿಂದ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕವಾಗಿದ್ದು, ಜನರಿಂದ ತುಂಬಿ ತುಳುಕುತ್ತಿವೆ.

೪ನೇ ಶನಿವಾರ, ಭಾನುವಾರ, ಸೋಮವಾರ (ಕ್ರಿಸ್‌ಮಸ್) ಸರ್ಕಾರಿ ರಜೆಯಿದ್ದು, ಹೀಗಾಗಿ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ವಾರಗಳ ಹಿಂದೆಯೇ ರೆಸಾರ್ಟ್, ಹೋಮ್‌ಸ್ಟೆ, ಲಾಡ್ಜ್ ಫುಲ್ ಆಗಿದೆ. ಮಲೆನಾಡಿನ ಪ್ರಸಿದ್ಧ ಜಲಪಾತಗಳು, ಕರಾವಳಿಯ ಕಡಲ ತೀರಗಳು, ಧಾರ್ಮಿಕ ಕ್ಷೇತ್ರಗಳಲ್ಲಿ ಜನಜಂಗುಳಿಯೇ ಕಾಣುತ್ತಿದೆ.

ಮುರುಡೇಶ್ವರದ ಸ್ಕೂಬಾ ಡೈವಿಂಗ್, ಸೀ ವಾಕ್, ದಾಂಡೇಲಿಯಲ್ಲಿ ಜಲಸಾಹಸ ಕ್ರೀಡೆ, ಯಾಣದ ಭೈರವೇಶ್ವರ ಶಿಖರ, ಯಲ್ಲಾಪುರದ ಸಾತೊಡ್ಡಿ, ವಿಭೂತಿ, ಮಾಗೋಡ, ಸಿದ್ದಾಪುರದ ಉಂಚಳ್ಳಿ ಜಲಪಾತ, ಶಿರಸಿಯ ಮಾರಿಕಾಂಬಾ, ಬನವಾಸಿಯ ಮಧುಕೇಶ್ವರ, ಮುರುಡೇಶ್ವರ, ಗೋಕರ್ಣದ ಆತ್ಮಲಿಂಗ, ಶಿರಸಿಯ ಸಹಸ್ರಲಿಂಗ, ಕಾರವಾರ, ಕುಮಟಾ, ಹೊನ್ನಾವರ, ಮುರುಡೇಶ್ವರ, ಗೋಕರ್ಣದ ಕಡಲ ತೀರಗಳು, ಜನಸಾಹಸಿ ಚಟುವಟಿಕೆಗಳು ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿದ್ದು, ಶುಕ್ರವಾರದಿಂದಲೇ ಜಿಲ್ಲೆಯತ್ತ ಪ್ರವಾಸಿಗರು ಮುಖಮಾಡಿದ್ದಾರೆ.

ಲಕ್ಷ-ಲಕ್ಷ ಪ್ರವಾಸಿಗರು: ಮೂರು ದಿನಗಳ ಸತತ ರಜೆ, ಕ್ರಿಸ್‌ಮಸ್, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಲು ಕಾರಣವಾಗಿದೆ. ಹೊಸ ವರ್ಷ ಸ್ವಾಗತಿಸಲು ಗೋವಾಕ್ಕೆ ತೆರಳುವವರ ಸಂಖ್ಯೆ ಅಧಿಕವಾಗಿದ್ದು, ಅಲ್ಲಿ ರೆಸಾರ್ಟ್, ಹೊಟೇಲ್‌ಗಳು ಸಿಗದೆ ಜಿಲ್ಲೆಯಲ್ಲಿ ವಾಸ್ತವ್ಯ ಮಾಡುತ್ತಾರೆ. ಬಳಿಕ ಇಲ್ಲಿಂದ ಗೋವಾಕ್ಕೆ ತೆರಳುತ್ತಾರೆ. ಕಾರಣ ಜಿಲ್ಲೆಯ ರೆಸಾರ್ಟ್, ಹೋಮ್‌ ಸ್ಟೆ ಮೊದಲಾದವರು ಖಾಲಿ ಇರುವುದಿಲ್ಲ.

ಪ್ರವಾಸೋದ್ಯಮ ಇಲಾಖೆಯ ಬಳಿ ಇರುವ ಅಂಕಿ ಅಂಶದಂತೆ ೨೦೧೭ರಲ್ಲಿ ₹ ೪೨.೬೦ ಲಕ್ಷ, ೨೦೧೮ರಲ್ಲಿ ₹ ೪೩.೯೦ ಲಕ್ಷ, ೨೦೧೯ರಲ್ಲಿ ₹ ೪೮.೭೭ಲಕ್ಷ, ೨೦೨೦ ರಲ್ಲಿ ₹ ೧೮.೫೩ ಲಕ್ಷ, ೨೦೨೧ ರಲ್ಲಿ ₹ ೩೫.೧೯ ಲಕ್ಷ ಪ್ರವಾಸಿಗರು ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದರು. ೨೦೨೨ರಲ್ಲಿ ದಾಖಲೆಯ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದು, ಬರೊಬ್ಬರಿ ಒಂದುವರೆ ಕೋಟಿ ಜನರು ಭೇಟಿ ನೀಡಿದ್ದರು.

ಪಾರ್ಕಿಂಗ್ ಸಮಸ್ಯೆ: ಪುರಾಣ ಪ್ರಸಿದ್ಧ ಮುರುಡೇಶ್ವರ ಹಾಗೂ ಗೋಕರ್ಣದಲ್ಲಿ ವಾಹನಗಳ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶವಿಲ್ಲದೇ ಪ್ರವಾಸಿಗರಿಗೆ ತೊಂದರೆ ಉಂಟಾಗುತ್ತಿದೆ.

ಮುರುಡೇಶ್ವರದಲ್ಲಿ ವಾಹನಗಳನ್ನು ತೀರಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿಯೇ ನಿಲುಗಡೆ ಮಾಡುತ್ತಾರೆ. ಒಂದೆಡೆ ಪ್ರವಾಸಿಗರು ಸಮುದ್ರದ ತೀರದಲ್ಲಿ ಆಟವಾಡುತ್ತಿದ್ದರೆ, ಮತ್ತೊಂದೆಡೆ ವಾಹನಗಳ ಸಂಚಾರ ನಡೆಯುತ್ತಿರುತ್ತದೆ. ಹೀಗಾಗಿ ಇದು ಅಪಾಯಕಾರಿಯಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ತೀರದ ಸಮೀಪ ನಿಲ್ಲಿಸಿದ್ದ ಕಾರೊಂದು ಅಲೆಗಳ ಅಬ್ಬರಕ್ಕೆ ತೇಲಿಕೊಂಡು ಹೋಗಿತ್ತು.

ಗೋಕರ್ಣದಲ್ಲಿ ಮುಖ್ಯ ಕಡಲ ತೀರ, ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ಪ್ರವಾಸಿ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಆದರೆ ಸಾವಿರಾರು ಪ್ರವಾಸಿಗರು ಬರುವುದರಿಂದ ಇಷ್ಟು ಸ್ಥಳ ಸಾಕಾಗುವುದಿಲ್ಲ. ಹೀಗಾಗಿ ಪ್ರತಿ ವರ್ಷವೂ ಸಾಲು ಸಾಲು ರಜೆ ಇರುವಾಗ, ಶಿವರಾತ್ರಿ, ಹೊಸ ವರ್ಷದ ಸಂದಂರ್ಭದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.