ನಟ ದರ್ಶನ ಅವರ ಜೈಲಿನಲ್ಲಿರುವ ಫೋಟೋವನ್ನು ಉದ್ದೇಶಪೂರ್ವಕವಾಗಿಯೇ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಹೊರಗಡೆ ಇರುವ ಬೆದರಿಸುವ ಕುತಂತ್ರ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.

ಹುಬ್ಬಳ್ಳಿ:

ಚಿತ್ರನಟ ದರ್ಶನ್‌ಗೆ ಜೈಲಲ್ಲಿ ಸಿಗುತ್ತಿರುವ ರಾಜಾತಿಥ್ಯದ ಪೋಟೋ ನೋಡಿದರೆ ಸಾಕ್ಷಿಗಳನ್ನು ಬೆದರಿಸುವ ತಂತ್ರದ ಒಂದು ಭಾಗವಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದರ್ಶನ್‌ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ದರ್ಶನ್‌ ಅವರನ್ನು ರೌಡಿ, ನಟ, ಸೆಲಿಬ್ರಿಟಿ ಎಂದು ಏನಾದರೂ ಅಂದುಕೊಳ್ಳಿ. ಆದರೆ ಸಾಕ್ಷಿಗಳನ್ನು ಹೆದರಿಸುವ ತಂತ್ರಗಾರಿಕೆ ಮಾತ್ರ ನಡೆಯುತ್ತಿದೆ. ದರ್ಶನ್‌ಗೆ ಜೈಲಲ್ಲೇ ರಾಜಾತಿಥ್ಯ ಸಿಗುತ್ತಿದೆ. ವಿಡಿಯೋ ಕಾಲ್‌ ಮಾಡುತ್ತಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.

ಈ ಹಿಂದೆ ಕಾಂಗ್ರೆಸ್‌ನ ಹಲವು ಸಚಿವರು, ಶಾಸಕರು ಅವರನ್ನು ರಕ್ಷಣೆ ಮಾಡುವುದಕ್ಕೆ ಪ್ರಯತ್ನಿಸಿದ್ದರು. ರಾಜ್ಯದಲ್ಲಿ ಜನಸಾಮಾನ್ಯರು ಮೃತಪಟ್ಟರೆ ಅವರಿಗೆ ನ್ಯಾಯ ಇಲ್ಲ ಎನ್ನುವುದು ಸ್ಪಷ್ಟ ಆಗುತ್ತಿದೆ. ಇದೇ ರೀತಿ ಆದರೆ ನಾಳೆ ಕೇಸ್ ಹೇಗೆ ನಡೆಸುತ್ತಾರೆ. ರೌಡಿಶೀಟರ್‌ ಜತೆಗೆ ಸಿಗರೇಟ್‌, ಕಾಫಿ ಕುಡಿಯುವ ಫೋಟೋಗಳನ್ನು ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡಲಾಗಿದೆ. ನಾನು ರೌಡಿಶೀಟರ್‌ಗಳ ಜತೆಗೆ ಜೈಲಿನಲ್ಲೂ ರಾಜಾತಿಥ್ಯದಲ್ಲಿದ್ದೇನೆ. ಸಾಕ್ಷಿ ಹೇಳಿದವರನ್ನು ಮುಂದೆ ನೋಡಿಕೊಳ್ಳುತ್ತೇನೆ ಎಂಬ ಸಂದೇಶ ರವಾನಿಸಲಾಗುತ್ತಿದೆ. ಸರ್ಕಾರಕ್ಕೆ ಈ ಬಗ್ಗೆ ಗಂಭೀರತೆಯೇ ಇಲ್ಲ ಎಂದರು.

ಸರ್ಕಾರ ದರ್ಶನನ್ನು ಬಿಡುಗಡೆ ಮಾಡಿಸಲು ಸಂಚು ನಡೆಸುತ್ತಿದೆ. ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ ಎಂದ ಅವರು, ಜೈಲು ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಿದ್ದೇನೆ ಎಂದು ಹೇಳುತ್ತಿದ್ದಾರೆ. ಇಷ್ಟು ದಿನ ಏನು ಕತ್ತೆ ಕಾಯುತ್ತಿದ್ದಾರಾ? ಸರ್ಕಾರ ನಡೆಸುತ್ತಿದ್ದಾರಾ ಅಥವಾ ತರಕಾರಿ ವ್ಯಾಪಾರ ಮಾಡುತ್ತಿದ್ದಾರಾ? ಇದರಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂದು ಕಿಡಿಕಾರಿದರು.